ಕುಶಾಲನಗರ, ಜು 18: ಇಲಾಖೆಗೆ ಈಗಷ್ಟೇ ಸೇರಿದ ಕೆಲವು ಪೊಲೀಸ್ ಸಿಬ್ಬಂದಿ ಅಂದರ್ ಬಾಹರ್ ದಂಧೆ ಕೇಂದ್ರಕ್ಕೆ ಲಗ್ಗೆಯಿಟ್ಟು ಲಕ್ಷಾಂತರ ರೂಪಾಯಿ ಜೇಬಿಗೆ ಸೇರಿಸಿದ ಘಟನೆಯೊಂದು ಕುಶಾಲನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದಿದೆ.

ಕುಶಾಲನಗರ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯಲ್ಲಿ ಇಸ್ಪೀಟ್ ದಂಧೆ ಸೇರಿದಂತೆ ಅಕ್ರಮ ಚಟುವಟಿಕೆಗಳು ಇತ್ತೀಚಿನ ದಿನಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವದು ಸಾಮಾನ್ಯವಾಗಿದೆ. ಪೊಲೀಸ್ ಅಧಿಕಾರಿಗಳು ಧಾಳಿ ಮಾಡುವದು ಸಾಮಾನ್ಯ ವಿಷಯ. ಆದರೆ ಕುಶಾಲನಗರದ ಮಾರುಕಟ್ಟೆ ರಸ್ತೆಯ ಕಲ್ಯಾಣ ಮಂಟಪವೊಂದರಲ್ಲಿ ಬೈಲುಕೊಪ್ಪೆಯ ಜನಪ್ರತಿನಿಧಿಯೊಬ್ಬನ ನೇತೃತ್ವದಲ್ಲಿ ಭಾರೀ ಕುಳಗಳು ಲಕ್ಷಗಟ್ಟಲೆ ಹಣವನ್ನು ಪಣಕ್ಕಿಟ್ಟು ಅಂದರ್ ಬಾಹರ್ ಆಟದಲ್ಲಿ ತೊಡಗಿದ್ದರು.

ಇದರ ವಾಸನೆ ಹಿಡಿದ ಠಾಣೆಯ ಗುಪ್ತಚರ ಸಿಬ್ಬಂದಿಯೊಬ್ಬ ಮೇಲಧಿಕಾರಿಗಳಿಗೆ ಮಾಹಿತಿ ನೀಡದೆ ಇಲಾಖೆಗೆ ಇತ್ತೀಚೆಗಷ್ಟೆ ಸೇರಿದ ಹೊಸ ಪಡೆಯನ್ನು ತನ್ನೊಂದಿಗೆ ಕರೆದೊಯ್ದು ಏಕಾಏಕಿ ಧಾಳಿ ಮಾಡಿದ್ದೇ ತಡ; ಕಕ್ಕಾಬಿಕ್ಕಿಯಾದ ಅಂದರ್ ಬಾಹರ್ ತಂಡ ಕಾಲು ಕಿತ್ತಿದೆ. ಸ್ಥಳದಲ್ಲಿದ್ದ ಅಂದಾಜು 5 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಹಣ, ಮೊಬೈಲ್ ಎಲ್ಲಾ ಈ ಧಾಳಿ ಮಾಡಿದ ತಂಡದ ಕೈಸೇರಿದೆ ಎನ್ನುವ ಚರ್ಚೆ ಕುಶಾಲನಗರ ಪಟ್ಟಣದಲ್ಲಿ ಕೇಳಿಬರುತ್ತಿದೆ. ಅಲ್ಲದೆ ಕಲ್ಯಾಣ ಮಂಟಪ ಆವರಣದಲ್ಲಿ ನಿಲ್ಲಿಸಲಾಗಿದ್ದ ವಾಹನಗಳನ್ನು ಕೂಡ ವಶಪಡಿಸಿಕೊಳ್ಳುವ ಬೆದರಿಕೆ ಕೂಡ ಬಂದ ಹಿನ್ನೆಲೆಯಲ್ಲಿ ತಮ್ಮ ಸುಪರ್ದಿಯಲ್ಲಿದ್ದ ಹೆಚ್ಚುವರಿ ಲಕ್ಷಾಂತರ ಹಣ ನೀಡಿ ಸ್ಥಳದಿಂದ ಇಸ್ಪೀಟ್ ದಂಧೆಕೋರರು ಪರಾರಿಯಾಗಿದ್ದಾರೆ.

ಒಟ್ಟಾರೆ ಒಂದೇ ದಿನದಲ್ಲಿ ಲಕ್ಷಗಟ್ಟಲೆ ಹಣ ಕಮಾಯಿ ಮಾಡಲು ಸ್ಕೆಚ್ ಹಾಕಿದ ಪೊಲೀಸ್ ತಂಡದ ಬಗ್ಗೆ ಉನ್ನತ ಪೊಲೀಸ್ ಅಧಿಕಾರಿಗಳು ತನಿಖೆ ಮಾಡಿದರೆ ಭಾರೀ ಸತ್ಯಾಂಶ ಹೊರಬರುವದರೊಂದಿಗೆ ಇಲಾಖೆಯ ಬಗ್ಗೆ ಜನತೆ ಇಟ್ಟಿರುವ ಗೌರವ ಉಳಿಯಬಹುದು ಎನ್ನುವದು ಸ್ಥಳೀಯರ ಮಾತಾಗಿದೆ. -ಸಿ