ವೀರಾಜಪೇಟೆ, ಜು. 19: ಕರಡ ಗ್ರಾಮದ ಬಿ.ಎನ್. ಶಾಂತಿ ನಾಣಯ್ಯ ಎಂಬವರಿಗೆ ವಾಹನ ಅಪಘಾತದ ವಿಮೆ ಪರಿಹಾರ ರೂ. 20,97,035 ಹಣ ಪಾವತಿಸದ ದೂರಿನ ಮೇರೆ ಇಲ್ಲಿನ ಗಡಿಯಾರ ಕಂಬದ ಬಳಿಯಿರುವ ಓರಿಯಂಟಲ್ ಇನ್ಸೂರೆನ್ಸ್ ಕಂಪೆನಿಯ ವೀರಾಜಪೇಟೆ ಶಾಖೆ ಕಚೇರಿಯನ್ನು ಜಪ್ತ್ತಿ ಮಾಡುವಂತೆ ಉಚ್ಚ ನ್ಯಾಯಾಲಯ ಆದೇಶಿಸಿದ ಮೇರೆಗೆ ವಿರಾಜಪೇಟೆ ಸಮುಚ್ಚಯ ನ್ಯಾಯಾಲಯದ 5 ಮಂದಿ ಅಮೀನರುಗಳು ಇಂದು ಅಪರಾಹ್ನ ಕಾರ್ಯಪ್ರವೃತ್ತರಾದಾಗ ಕಂಪೆನಿಯ ಪ್ರಧಾನ ಕಚೇರಿಯ ವಿನಂತಿಯಂತೆ ಜಫ್ತಿಯನ್ನು ತಾ. 23 ಸೋಮವಾರಕ್ಕೆ ಮುಂದೂಡಲಾಗಿದೆ.ಕಳೆದ ತಾ. 18.2.2001ರಂದು ಸಿದ್ದಾಪುರ ಪುಲಿಯೇರಿ ಎಂಬಲ್ಲಿ ಬಿ.ಬಿ.ನಾಣಯ್ಯ (ಆಗ 32 ವರ್ಷ) ಎಂಬವರು ಚಾಲಿಸುತ್ತಿದ್ದ ಜೀಪಿಗೆ ಎದುರು ಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮವಾಗಿ ನಾಣಯ್ಯ ಅವರನ್ನು ಚಿಂತಾಜನಕ ಸ್ಥಿತಿಯಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದರು.
ಮೃತ ನಾಣಯ್ಯ ಅವರ ಪತ್ನಿ ಶಾಂತಿ ನಾಣಯ್ಯ ಅವರು ಜೀಪಿನ ವಿಮೆ ಪರಿಹಾರವನ್ನು ಓರಿಯಂಟಲ್ ಇನ್ಶೂರೆನ್ಸ್ ಕಂಪೆನಿ ಪಾವತಿ ಮಾಡದ ಹಿನ್ನೆಲೆಯಲ್ಲಿ ಕಂಪೆನಿ ವಿರುದ್ಧ ವೀರಾಜಪೇಟೆಯ ಸಿವಿಲ್ ಜಡ್ಜ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ತಾ. 12.9.2012 ರಂದು ಪರಿಹಾರ ಮೊತ್ತ ರೂ. 12,32,144ಕ್ಕೆ ಶೇಕಡ 6 ರಂತೆ ಬಡ್ಡಿ ಸೇರಿಸಿ ನಗದು ಹಣ ಪಾವತಿಸುವಂತೆ ತೀರ್ಪು ನೀಡಿದ್ದರು. ಆದರೆ ಇನ್ಶೂರೆನ್ಸ್ ಕಂಪೆನಿ ಪರಿಹಾರ ಮೊತ್ತ ಕಡಿಮೆ ಮಾಡುವಂತೆ ಕೋರಿ ಬೆಂಗಳೂರಿನ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿತ್ತು.
(ಮೊದಲ ಪುಟದಿಂದ) ಮೇಲ್ಮನವಿಯ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಕೆಳ ನ್ಯಾಯಾಲಯದ ತೀರ್ಪನ್ನು ಸಿಂಧುಗೊಳಿಸಿ ಈಗಿನವರೆಗೆ ಬಡ್ಡಿ ಸೇರಿಸಿ ಪರಿಹಾರ ಮೊತ್ತ ಒಟ್ಟು ರೂ. ಇಪ್ಪತ್ತು ಲಕ್ಷದ ತೊಂಭತ್ತೇಳು ಸಾವಿರದ ಮೂವತ್ತೈದನ್ನು ತಕ್ಷಣ ಪಾವತಿಸುವಂತೆ ತಾ. 24.4.2018 ರಂದು ತೀರ್ಪು ನೀಡಿದರೂ ಹಣ ಪಾವತಿಸದೆ ಸತಾವಣೆ ನೀಡುತ್ತಿದ್ದ ಕಂಪೆನಿ ವಿರುದ್ಧ ಶಾಂತಿ ನಾಣಯ್ಯ ಮತ್ತೆ ಇಲ್ಲಿನ ಸಿವಿಲ್ ಜಡ್ಜ್ ನ್ಯಾಯಾಲಯಕ್ಕೆ ದೂರು ನೀಡಿದ್ದರು. ದೂರನ್ನು ಸ್ವೀಕರಿಸಿದ ನ್ಯಾಯಾಲಯ ಕಂಪೆನಿಯ ಕಚೇರಿಯ ಎಲ್ಲ ಸಾಮಗ್ರಿಗಳನ್ನು ಜಫ್ತಿ ಮಾಡುವಂತೆ ಐದು ದಿನಗಳ ಹಿಂದೆ ಆದೇಶ ಹೊರಡಿಸಿದ್ದು, ಇಂದು ನ್ಯಾಯಾಲಯಗಳ ಅಮೀನರುಗಳಾದ ರಾಮಯ್ಯ, ಕೆ.ಎಂ. ಕರುಂಬಯ್ಯ, ಅಖಿಲ್ ಅಹಮ್ಮದ್, ಸ್ಟೀಫನ್ ಅಹಮ್ಮದ್, ಹಾಗೂ ವೈ.ಎಂ.ಗುರುಮೂರ್ತಿ ಜಫ್ತಿ ಮಾಡಲು ಕಂಪ್ಯೂಟರ್ ಉಪಕರಣಗಳನ್ನು ವಶ ಪಡಿಸಿಕೊಳ್ಳುತ್ತಿದ್ದಂತೆ ಕಚೇರಿಯ ವ್ಯವಸ್ಥಾಪಕ ರಾಮೇಶ್ವರ್ ಅವರು ಕಂಪೆನಿಯ ಪರಿಹಾರದ ಪೂರ್ಣ ಮೊತ್ತವನ್ನು ತಾ. 23 ರಂದು ಪ್ರಕರಣದ ವಾದಿಗಳಾದ ಶಾಂತಿ ನಾಣಯ್ಯ ಅವರಿಗೆ ಪಾವತಿಸುವದಾಗಿ ಲಿಖಿತವಾಗಿ ನ್ಯಾಯಾಲಯಕ್ಕೂ ಹಾಗೂ ವಾದಿಗಳಿಗೂ ಬರೆದು ಕೊಟ್ಟಿದ್ದರಿಂದ ಜಫ್ತಿ ಕಾರ್ಯಾಚರಣೆಯನ್ನು ಮುಂದೂಡಲಾಯಿತು.
ಈ ಸಂದರ್ಭ ಮೃತ ನಾಣಯ್ಯ ಅವರ ತಂದೆ ಬಿದ್ದಪ್ಪ ಹಾಗೂ ವಾದಿಯಾಗಿದ್ದ ಅವರ ಸೊಸೆ ಶಾಂತಿ ನಾಣಯ್ಯ ಇದ್ದರು.