*ಗೋಣಿಕೊಪ್ಪ, ಜು. 19: ಬ್ಯಾಂಕ್‍ಗಳಿಂದ ಪಡೆದುಕೊಂಡ ಸಾಲವನ್ನು ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಉನ್ನತೀಕರಣ ಹೊಂದಬೇಕು ಎಂದು ವಿಜಯ ಬ್ಯಾಂಕ್ ಪ್ರಾದೇಶಿಕ ಹಿರಿಯ ಪ್ರಬಂಧಕ ಅಜಯ್ ಕುಮಾರ್ ಸಲಹೆಯಿತ್ತರು.

ಗೋಣಿಕೊಪ್ಪ ವಿಜಯ ಬ್ಯಾಂಕ್ ಶಾಖೆಯಲ್ಲಿ ನಡೆದ ಕೃಷಿ ಸಾಲ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಜಯ ಬ್ಯಾಂಕ್ ಸೇವೆಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ವಿವಿಧ ಸಾಲಗಳನ್ನು ನೀಡುತ್ತಿದೆ. ಪಡೆದುಕೊಂಡ ಸಾಲದ ರೂಪದ ಹಣವನ್ನು ನಿಷ್ಟೆಯಿಂದ ಪಾವತಿಸುವ ಮೂಲಕ ಪ್ರತಿ ಸಾಲವನ್ನು ಪಡೆದು ಅಭಿವೃದ್ಧಿ ಹೊಂದಲು ಮುಂದಾಗಬೇಕು ಎಂದರು.

ನಿವೃತ್ತ ವ್ಯವಸ್ಥಾಪಕ ಮಚ್ಚಮಾಡ ನಂಜಪ್ಪ ಮಾತನಾಡಿ, ಬ್ಯಾಂಕ್ ಸಾಲಗಳನ್ನು ಅವಧಿಯೊಳಗೆ ಮರು ಪಾವತಿಸಿದರೆ ಯಾವದೇ ಸಮಸ್ಯೆಯಾಗುವದಿಲ್ಲ. ಬ್ಯಾಂಕ್ ಹಾಗೂ ಗ್ರಾಹಕರು ಸಹ ಅಭಿವೃದ್ಧಿ ಹೊಂದಬಹುದು ಸಾಲವನ್ನು ಕಂತಿನ ರೂಪದಲ್ಲಿ ಪಾವತಿಸಿ ವಿವಿಧ ಸಾಲಗಳಿಗೆ ಅರ್ಹತೆ ಪಡೆಯಬಹುದು ಎಂದು ಹೇಳಿದರು.

ಗೋಣಿಕೊಪ್ಪ ಶಾಖೆ ಹಿರಿಯ ವ್ಯವಸ್ಥಾಪಕ ಭೂಷಣ್ ಪಾಟೀಲ್ ಮಾತನಾಡಿ, ವಿಜಯ ಬ್ಯಾಂಕ್ ಗ್ರಾಹಕರಿಗಾಗಿ ಕಡಿಮೆ ಬಡ್ಡಿ ದರದಲ್ಲಿ ಬೆಳೆ ಸಾಲ, ಕೃಷಿ ಯಂತ್ರೋಪಕರಣ ಗಳಿಗೆ, ಸಣ್ಣ ನೀರಾವರಿ ಯೋಜನೆ ಗಳಿಗೆ, ತೋಟಗಾರಿಕೆ, ಸಾವಯುವ ಕೃಷಿ ಅಣಬೆ ಬೇಸಾಯ, ಎರೆಹುಳು ಗೊಬ್ಬರ ತಯಾರಿಕೆ, ಗ್ರಾಮೀಣ ಗೋದಾಮು, ಶೀಥಲ ದಾಸ್ತಾನು, ಮೀನುಗಾರಿಕೆ, ಸ್ವ ಸಹಾಯ ಸಂಘಗಳು, ಅಹಾರ ಮತ್ತು ಕೃಷಿ ಸಂಸ್ಕರಣಾ ಘಟಕಗಳಿಗೆ ಸಾಲ ನೀಡುತ್ತಿದೆ ಎಂದು ಮಾಹಿತಿ ನೀಡಿದರು.

ತಾಲೂಕಿನ ಕಾನೂರು, ವಿ. ಬಾಡಗ, ಕೋಣನಕಟ್ಟೆ, ಪಾಲಿಬೆಟ್ಟ, ಕೈಕೇರಿ, ನಂಜರಾಯಪಟ್ಟಣ, ಸಿದ್ದಾಪುರ ಶಾಖೆಗಳ ಫಲಾನುಭ ವಿಗಳಿಗೆ ಸಾಲದ ಚೆಕ್‍ಗಳನ್ನು ನೀಡಲಾಯಿತು.

ಈ ಸಂದರ್ಭ ಗೋಣಿಕೊಪ್ಪ ಶಾಖೆಯ ಕೃಷಿ ವಿಭಾಗ ವ್ಯವಸ್ಥಾಪಕ ಮಂಜುನಾಥ್, ಸಿಬ್ಬಂದಿಗಳು ಹಾಗೂ ಗ್ರಾಹಕರು ಹಾಜರಿದ್ದರು.