ಕೂಡಿಗೆ, ಕುಶಾಲನಗರ, ಜು. 19: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಗುರುವಾರ ಹಾರಂಗಿ ಜಲಾಶಯದಲ್ಲಿ ಬಾಗಿನ ಅರ್ಪಿಸಿದರು. ಪಿರಿಯಾಪಟ್ಟಣದ ತಾಲೂಕು ಸ್ಟೇಡಿಯಂ ಹೆಲಿಪ್ಯಾಡ್ನಲ್ಲಿ ಬಂದಿಳಿದ ಅವರು ಬಳಿಕ ರಸ್ತೆ ಮೂಲಕ ಸಂಜೆ ಹಾರಂಗಿ ತಲುಪಿದರು. ಜಿಲ್ಲೆಯ ಎಲ್ಲ ಕಡೆಗಳಿಂದ ವಿವಿಧ ಪಕ್ಷಗಳ ಪ್ರಮುಖರು ಹಾಗೂ ಕಾರ್ಯಕರ್ತರು ಒಟ್ಟಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವೆನಿಸಿತ್ತು. ಈ ಹಿಂದೆ ದಿ. ಗುಂಡೂರಾವ್ ಹೊರತು ಪಡಿಸಿ ಇನ್ನಿತರ ಮುಖ್ಯಮಂತ್ರಿಗಳು ಹಾರಂಗಿಗೆ ಬಂದು ಬಾಗಿನ ಅರ್ಪಿಸಿರಲಿಲ್ಲ. ಇದೀಗ ಕುಮಾರಸ್ವಾಮಿ ಅವರಿಂದ ನಡೆದ ಬಾಗಿನ ಅರ್ಪಣೆ ದಾಖಲೆಯೆನಿಸಿದೆ.
ಕೊಡಗಿನ ಮುಖ್ಯ ಜಲಾಶಯ ಹಾರಂಗಿ ಅಣೆಕಟ್ಟು ಭರ್ತಿಯಾಗಿದ್ದು ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಕಾವೇರಿ ನದಿಗೆ ಕಳೆದ 10 ದಿನಗಳ ಹಿಂದೆಯೇ ಸುಮಾರು 22 ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಯಬಿಡಲಾಗಿತ್ತು. (ಮೊದಲ ಪುಟದಿಂದ) ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಅಧಿಕಾರ ವಹಿಸಿಕೊಂಡ ದಿನಗಳಲ್ಲಿ ಮೊದಲ ಬಾರಿಗೆ ಕೊಡಗಿಗೆ ದಂಪತಿ ಹಾಗೂ ಸರ್ಕಾರದ ಆಪ್ತ ಸಚಿವರೊಂದಿಗೆ ಆಗಮಿಸಿ ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಿದರು.
ಆದರೆ, ಪೊಲೀಸ್ ತಂಡ ಮತ್ತು ಪ್ರತ್ಯೇಕ ಭದ್ರತಾ ಸಿಬ್ಬಂದಿಯ ತೀವ್ರತರ ನಿರ್ಬಂಧದಿಂದ ಮುಖ್ಯಮಂತ್ರಿ ಭೇಟಿಗೆ ಬಂದಿದ್ದವರು ತಮ್ಮೊಂದಿಗೆ ತಂದಿದ್ದ ಮನವಿ ಪತ್ರಗಳನ್ನು ಮುಖ್ಯಮಂತ್ರಿಯವರಿಗೆ ನೀಡಲು ಸಾಧ್ಯವಾಗಲಿಲ್ಲ. ಆನೇಕರು ಹೂಗುಚ್ಛ- ಹಾರಗಳನ್ನು ತಂದಿದ್ದು ಭದ್ರತಾ ಸಿಬ್ಬಂದಿಯ ಭದ್ರ ಮುಷ್ಟಿಯ ನಿಲುವಿನಿಂದಾಗಿ ಮುಖ್ಯಮಂತ್ರಿಯವರ ಬಳಿ ತಲುಪಲು ಸಾಧ್ಯÀವಾಗಲಿಲ್ಲ. ಜಿಲ್ಲೆಯ ಜನರೇ ಅಲ್ಲದೆ ಪಿರಿಯಾಪಟ್ಟಣ ಹುಣಸೂರು, ಮೈಸೂರು ಮೊದಲಾದೆಡೆಗಳಿಂದಲೂ ಜನಸ್ತೋಮ ಬಂದು ಸೇರಿದ್ದು ಮುಖ್ಯಮಂತ್ರಿಯವರ ಸನಿಹಕ್ಕೆ ತೆರಳಲು ಬಿಡದೆ ಅಯೋಮಯವಾಯಿತು. ಪೊಲೀಸರು ಪತ್ರಕರ್ತರನ್ನೂ ತಡೆದು ನಿರ್ಬಂಧಿಸುತ್ತಿದ್ದು ಪತ್ರಕರ್ತರೊಬ್ಬರನ್ನು ಬಾಗಿನ ಬಿಡುತ್ತಿದ್ದ ಜಾಗಕ್ಕೆ ಪೊಲೀಸರು ಬಿಡದಿದ್ದಾಗ ಎಂಎಲ್.ಸಿ ವೀಣಾ ಅಚ್ಚಯ್ಯ ಹಾಗೂ ಜಿ.ಪಂ.ಸದಸ್ಯೆ ಕೆ.ಪಿ.ಚÀಂದ್ರಕಲಾ ಇವರುಗಳ ನೆರವು ಪಡೆದು ತೆರಳಬೇಕಾಯಿತು.
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್, ಬೃಹತ್ ಮತ್ತು ಮಧ್ಯಮ ನೀರಾವರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಿ.ಕೆ.ಶಿವಕುಮಾರ್, ಲೋಕೋಪಯೋಗಿ ಸಚಿವರಾದ ಎಚ್.ಡಿ.ರೇವಣ್ಣ, ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವರಾದ ಸಾ.ರಾ.ಮಹೇಶ್, ಶಾಸಕರಾದ ಕೆ.ಜಿ.ಬೋಪಯ್ಯ, ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಶಾಸಕರಾದ ಡಾ.ಎ.ಟಿ.ರಾಮಸ್ವಾಮಿ, ಕೆ.ಮಹದೇವ, ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಎಸ್.ಎಲ್.ಭೋಜೇಗೌಡ, ಜಿ.ಪಂ.ಸದಸ್ಯರಾದ ಕೆ.ಆರ್.ಮಂಜುಳ, ಸೋಮವಾರಪೇಟೆ ತಾ.ಪಂ.ಅಧ್ಯಕ್ಷರಾದ ಪುಷ್ಪಾ ರಾಜೇಶ್, ಉಪಾಧ್ಯಕ್ಷರಾದ ಅಭಿಮನ್ಯು ಕುಮಾರ್, ಕೂಡುಮಂಗಳೂರು ಗ್ರಾ.ಪಂ.ಅಧ್ಯಕ್ಷರಾದ ಲಕ್ಷ್ಮೀ ರವಿ, ಉಪಾಧ್ಯಕ್ಷರಾದ ಕೆ.ವಿ.ಸಣ್ಣಪ್ಪ ಇತರರು ಇದ್ದರು.
ಮೈಸೂರು ಜಿಲ್ಲೆಯ ರಸ್ತೆ ಮಾರ್ಗವಾಗಿ ಹಾರಂಗಿ ಜಲಾಶಯಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ಮೊದಲು ಕಾವೇರಿ ಮಾತೆಯ ಪ್ರತಿಮೆಗೆ ಪೂಜೆ ಸಲ್ಲಿಸಿದರು.ಇದಕ್ಕೂ ಮುನ್ನ ಅವರಿಗೆ ಪೊಲೀಸ್ ಇಲಾಖೆಯಿಂದ ಗೌರವ ವಂದನೆ ಸಲ್ಲಿಸಲಾಯಿತು.