ನಾಪೋಕ್ಲು, ಜು. 19: ಗಾಳಿ-ಮಳೆ, ಚಳಿಯಿಂದ ರಕ್ಷಣೆಗೋಸ್ಕರ ಮನುಷ್ಯ ಹತ್ತಾರು ವ್ಯವಸ್ಥೆ ಕೈಗೊಳ್ಳುತ್ತಾನೆ. ಕೃಷಿಕರು ಅದಕ್ಕೆ ಹೊರತಲ್ಲ. ಕೃಷಿ ಕಾರ್ಯ ನಡೆಸುವಾಗ ಮಳೆ-ಗಾಳಿಯಿಂದ ರಕ್ಷಣೆಗಾಗಿ ರೈನ್‍ಕೋಟು, ಗಂಬೂಟ್, ಗೊರಬೆ, ಸೇರಿದಂತೆ ಹಲವಾರು ವಸ್ತುಗಳನ್ನು ಬಳಸುವದು ರೂಢಿ. ಆದರೆ ಪಶುಗಳಿಗೆ ರಕ್ಷಣೆ ಹೇಗೆ ? ಈ ಬಗ್ಗೆ ಕೊಳಕೇರಿ ಗ್ರಾಮದ ರೈತನೊಬ್ಬ ಕಂಡುಕೊಂಡ ಉಪಾಯ ಇದು. ಕರುಗಳು ಮಳೆಯಿಂದ ರಕ್ಷಣೆ ಪಡೆಯಲು ಕರುಗಳ ಬೆನ್ನ ಮೇಲೆ ಪ್ಲಾಸ್ಟಿಕ್ ಹಾಳೆ ಹೊದಿಸಿ ಮೇಯಲು ಬಿಡುತ್ತಿದ್ದಾರೆ. ಈ ದೃಶ್ಯ ಕೊಳಕೇರಿಯ ರಸ್ತೆ ಬದಿಯಲ್ಲಿ ಕಂಡು ಬಂತು. ಒಂದು ಎಮ್ಮೆ ಕರು ಹಾಗೂ ಹಸುವಿನ ಕರು ಗೋಣಿ ತಾಟನ್ನು ಹೊದ್ದು ನಿಶ್ಚಿಂತೆಯಿಂದ ರಸ್ತೆ ಬದಿಯಲ್ಲಿ ಮೇಯುತ್ತಿದ್ದವು. - ದುಗ್ಗಳ ಸದಾನಂದ