ಕುಶಾಲನಗರ, ಜು. 19: ಕುಶಾಲನಗರ ಕಾರು ಮಾಲೀಕರು ಮತ್ತು ಚಾಲಕರ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ನಡೆದ ಅವ್ಯವಹಾರದ ಹಿನೆÀ್ನಲೆಯಲ್ಲಿ ಸಹಕಾರ ಸಂಘಗಳ ಮೂಲಕ ಲೆಕ್ಕ ಪರಿಶೋಧನೆ ಸಂಬಂಧ ಸಂಘದ ಸದಸ್ಯರ ಸಾಲ ದೃಢೀಕರಣ ಕಾರ್ಯ ನಡೆಯಿತು.
ಸಹಕಾರ ಸಂಘಗಳ ಕಾಯ್ದೆ ಕಲಂ 63 (4) ಮತ್ತು (5) ರಂತೆ ಪ್ರತಿ ಸದಸ್ಯರ ಮೂಲಕ ಸಂಘದಲ್ಲಿ ಸಾಲ ಹೊರಬಾಕಿ ಇರುವ ಬಗ್ಗೆ ದೃಢೀಕರಿಸಿಕೊಂಡ ಅಧಿಕಾರಿಗಳು ಸಂಘದಲ್ಲಿ ನಡೆದ ಅವ್ಯವಹಾರದ ಬಗ್ಗೆ ಮಾಹಿತಿ ಕಲೆ ಹಾಕಿದರು.
ಕಳೆದ ಕೆಲವು ದಿನಗಳಿಂದ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸಿಬ್ಬಂದಿ ಸೇರಿ ಅಂದಾಜು ರೂ. 1 ಕೋಟಿ 16 ಲಕ್ಷ ಮೊತ್ತದ ಹಣ ಅವ್ಯವಹಾರ ಮಾಡಿರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸದಸ್ಯರ ಹೆಸರಿನಲ್ಲಿ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಸೇರಿ ಸುಮಾರು 30 ಕ್ಕೂ ಅಧಿಕ ಪಿಗ್ಮಿ ಖಾತೆ ಹೊಂದಿದ ಠೇವಣಿದಾರರ ಹೆಸರಿನಲ್ಲಿ ತಲಾ 3 ಲಕ್ಷ ರೂ.ಗಳಂತೆ ನಗದೀಕರಿಸಿರುವದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.
ಕುಶಾಲನಗರದ ಉದ್ಯಮಿಗಳಾದ ಬಿ.ಆರ್. ನಾಗೇಂದ್ರಪ್ರಸಾದ್, ಬೋಪಯ್ಯ ಸೇರಿದಂತೆ 23 ಮಂದಿ ಗ್ರಾಹಕರ ಹೆಸರಿನಲ್ಲಿ ಸಂಘದಲ್ಲಿ ಹಣ ನಗದೀಕರಿಸಲಾಗಿದೆ. ಈ ನಿಟ್ಟಿನಲ್ಲಿ ಕಂಪ್ಯೂಟರ್ನಲ್ಲಿ ಬೇನಾಮಿ ದಾಖಲೆ ಸೃಷ್ಟಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ತಪಿತಸ್ಥರ ಮೇಲೆ ಕ್ರಮಕೈಗೊಳ್ಳ ಬೇಕೆಂದು ಬಿ.ಆರ್.ನಾಗೇಂದ್ರ ಪ್ರಸಾದ್ ಆಗ್ರಹಿಸಿದ್ದಾರೆ. ತನ್ನ ಹೆಸರಿನಲ್ಲಿ 3 ಲಕ್ಷ ರೂ.ಗಳ ಮೊತ್ತದ ಹಣವನ್ನು ಬೇನಾಮಿ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಹಣ ನಗದೀಕರಿಸಿದ್ದಾರೆ. ಈ ಬಗ್ಗೆ ದೂರು ನೀಡಲಾಗುವದು ಎಂದು ನಾಗೇಂದ್ರ ಪ್ರಸಾದ್ ಮತ್ತು ಬೋಪಯ್ಯ ತಿಳಿಸಿದ್ದಾರೆ.