ಮಡಿಕೇರಿ, ಜು. 19: ಕೊಡಗು ಸೇರಿದಂತೆ ಮಲೆನಾಡು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ಪ್ರಕೃತಿ ಹಾಗೂ ದೇವರ ದಯೆಯಿಂದ ರಾಜ್ಯದೆಲ್ಲೆಡೆ ಒಳಿತಾಗಿರುವದು ಸಂತಸ ತಂದಿದೆ ಎಂದಿರುವ ರಾಜ್ಯ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ಅತಿವೃಷ್ಟಿಯಿಂದ ಕೊಡಗಿನ ಜನತೆಯ ಸಂಕಷ್ಟ ನಿವಾರಿಸಲು ಒಂದು ನೂರು ಕೋಟಿ ರೂಪಾಯಿ ಬಿಡುಗಡೆಗೊಳಿಸಲಾಗುವದು ಎಂದು ಘೋಷಿಸಿದ್ದಾರೆ.ಈ ರಾತ್ರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೊಡಗಿನ ಬಗ್ಗೆ ಅಧಿಕಾರಿಗಳ ಮಟ್ಟದ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಜಿಲ್ಲೆಯಲ್ಲಿ ಸಾರ್ವಜನಿಕ ಆಸ್ತ-ಪಾಸ್ತಿ ನಷ್ಟ, ವಿದ್ಯುತ್ ಉಪಕರಣ ಗಳೊಂದಿಗೆ ಹಾನಿಗೀಡಾಗಿರುವ ಕಂಬಗಳು, ಮನೆಗಳ ಕುಸಿತ, ರಸ್ತೆ ಹಾನಿ, ಭೂಕುಸಿತ ಭತ್ತದ ಪೈರು-ನಾಟಿ ಹಾನಿ, ಕಾಫಿ ಹಾಗೂ ಇತರ ಬೆಳೆ ನಷ್ಟ ಸೇರಿದಂತೆ ಜಿಲ್ಲಾಡಳಿತ ಸುಮಾರು 329 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಿರುವದಾಗಿ ಬೊಟ್ಟು ಮಾಡಿದರು.

ಅಲ್ಲದೆ, ಕಾಫಿ ನಷ್ಟ ಸಂಬಂಧ ಇನ್ನು ಮಳೆಯ ತೀವ್ರತೆ ಕಾರಣ, ಮುಂದಿನ ಸೆಪ್ಟಂಬರ್ ವೇಳೆಗೆ ಹಾನಿ ತಿಳಿಯಲಿರುವದಾಗಿ ಕಾಫಿ ಮಂಡಳಿ ಅಧಿಕಾರಿಗಳು ತಿಳಿಸಿದ್ದಾಗಿ ಉಲ್ಲೇಖಿಸಿದ ಅವರು, ಸರಕಾರ ತುರ್ತಾಗಿ ರೂ. 100 ಕೋಟಿ ಬಿಡುಗಡೆ ಮಾಡಲಿದೆ ಎಂದರು. ಈ ಬಗ್ಗೆ ಆಯಾ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಕಾರ್ಯೋನ್ಮುಖ ರಾಗುವಂತೆಯೂ ಸೂಚಿಸಿರುವದಾಗಿ ಸ್ಪಷ್ಟಪಡಿಸಿದರು.

ಹೆಚ್ಚಿನ ನೆರವು: ಅತಿವೃಷ್ಟಿಯಿಂದ ಮನೆಗಳಿಗೆ ಹಾನಿಯಾದರೆ ಕೇವಲ ರೂ. 5 ಸಾವಿರ ನೀಡುತ್ತಿದ್ದು, ಸಂಪೂರ್ಣ ಹಾನಿಗೊಂಡಿದ್ದರೆ ಈ ಮೊತ್ತವನ್ನು ರೂ. 95 ಸಾವಿರ ಕಲ್ಪಿಸಲು ಪರಿಹಾರ ಹೆಚ್ಚಿಸಲಾಗಿದೆ ಎಂದ ಮುಖ್ಯಮಂತ್ರಿಗಳು, ತೀರಾ ಬಡವರಿದ್ದರೆ ಆಶ್ರಯ ಯೋಜನೆಯಡಿ ಮನೆ ಕಲ್ಪಿಸಲು ಕೂಡ ಸೂಚಿಸಿರುವದಾಗಿ ವಿವರಿಸಿದರು.

ಬೆಳೆಹಾನಿ: ಜಿಲ್ಲೆಯ ಮೂರು ತಾಲೂಕುಗಳಲ್ಲಿ ಭತ್ತದ ನಾಟಿ, ಸಸಿಮಡಿ ಇತ್ಯಾದಿ ಹಾನಿ ಬಗ್ಗೆ ಉಲ್ಲೇಖಿಸಿದ ಮುಖ್ಯಮಂತ್ರಿಗಳು; ನಾಟಿಗೆ ಪರಿಹಾರದೊಂದಿಗೆ, ಸಸಿಮಡಿ ನಾಶಗೊಂಡಿದ್ದರೆ ಅಂತಹ ರೈತರಿಗೆ ಬದಲಿ

ಕೊಡಗಿಗೆ ರೂ. 100 ಕೋಟಿ ಘೋಷಿಸಿದ ಸಿಎಂ ಕುಮಾರಸ್ವಾಮಿ(ಮೊದಲ ಪುಟದಿಂದ) ಬಿತ್ತನೆ ಬೀಜ ಒದಗಿಸಲು ಅಧಿಕಾರಿಗಳಿಗೆ ನಿರ್ದೇಶಿರುವದಾಗಿದೆ ಎಂದು ಸ್ಪಷ್ಟಪಡಿಸಿದರು.

ತುರ್ತು ಯೋಜನೆ ಆದೇಶ : ಕೊಡಗಿನಲ್ಲಿ ಹಾನಿಗೀಡಾಗಿರುವ ರಸ್ತೆ ಇತ್ಯಾದಿ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ತುರ್ತಾಗಿ ಕ್ರಿಯಾಯೋಜನೆ ಸಿದ್ಧಪಡಿಸಿ ಸರಕಾರದ ಅನುಮೋದನೆ ಪಡೆದು, ಟೆಂಡರ್ ಇತ್ಯಾದಿ ಪ್ರಕ್ರಿಯೆನ್ನು ಮಳೆಗಾಲ ಮುಗಿಯುವ ಮುನ್ನ ಮುಗಿಸಿ, ಮುಂಗಾರು ಬಳಿಕ ತಕ್ಷಣ ಕೆಲಸ ಕೈಗೊಳ್ಳಲು ಆದೇಶಿಸಿರುವದಾಗಿಯೂ ಕುಮಾರಸ್ವಾಮಿ ಪ್ರಕಟಿಸಿದರು.

ಮುಖ್ಯಮಂತ್ರಿ ಬೇಸರ : ಕಳೆದ ಒಂದು ತಿಂಗಳಿಂದ ಕೊಡಗಿನಲ್ಲಿ ವಾಡಿಕೆ ಮಳೆಗಿಂತ ಶೇ. 47ರಷ್ಟು ಅಧಿಕ ಮಳೆಯಾಗಿ ಸಾರ್ವಜನಿಕರ ಆಸ್ತಿ - ಪಾಸ್ತಿ ಹಾನಿಗೊಂಡಿದ್ದರು. ಆಯಾ ಇಲಾಖೆಯ ಮಂದಿ ಅನೇಕ ಗ್ರಾಮೀಣ ರೈತರ ಸಂಕಷ್ಟ ನೀಗಿಸಲು ಇನ್ನೂ ತಲಪಿಲ್ಲವೆಂದು ಬೇಸರ ವ್ಯಕ್ತಪಡಿಸಿದ ಮುಖ್ಯಮಂತ್ರಿ ಈ ಬಗ್ಗೆ ತುರ್ತು ಗಮನ ನೀಡಲು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಖಾಲಿ ಹುದ್ದೆ ಭರ್ತಿ : ಜಿಲ್ಲೆಯಲ್ಲಿ ಅನೇಕ ಇಲಾಖೆಗಳಲ್ಲಿ ಪ್ರಮುಖ ಅದಿಕಾರಿಗಳ ಹುದ್ದೆ ಸೇರಿದಂತೆ ಖಾಲಿಯಿರುವ ಸಿಬ್ಬಂದಿ ಕೊರತೆ ತಿಂಗಳೊಳಗೆ ಸರಕಾರ ತುರ್ತು ಗಮನ ಹರಿಸುವದಾಗಿ ಭರವಸೆ ನೀಡಿದ ಮುಖ್ಯಮಂತ್ರಿಗಳು, ಕೊಡಗಿನ ಪ್ರಮುಖ ಸಮಸ್ಯೆಗಳನ್ನು ನಿವಾರಿಸಲು ಸರಕಾರದಿಂದ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳುವದಾಗಿ ಮಾರ್ನುಡಿದರು.

ತೊಡಕು ನಿವಾರಣೆ : ಕೊಡಗಿನಲ್ಲಿ ಕೆಲವೆಡೆ ರಸ್ತೆ ಕೆಲಸ ಸೇರಿದಂತೆ ಪ್ರವಾಸೋದ್ಯಮ ಅಭಿವೃದ್ಧಿಗೆ ಅರಣ್ಯ ಇಲಾಖೆ ಮತ್ತು ಇತರ ತೊಡಕುಗಳ ಬಗ್ಗೆ ಅಧಿಕಾರಿಗಳ ಸಭೆಯಲ್ಲಿ ಗಮನ ಸೆಳೆದಿದ್ದು, ಕೊಡಗಿನ ಜನಪ್ರತಿನಿಧಿಗಳ ಸಹಿತ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂಥ ತೊಡಕುಗಳನ್ನು ಸರಕಾರ ನಿಭಾಯಿಸುವದಾಗಿ ಕುಮಾರಸ್ವಾಮಿ ಭರವಸೆ ನೀಡಿದರು.

ಡಿಸಿ ದೂರವಾಣಿಗೆ ಸ್ಪಂದನ : ಕೊಡಗು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ತಮ್ಮೊಂದಿಗೆ ದೂರವಾಣಿ ಸಂಭಾಷಣೆಯೊಂದಿಗೆ ತೀವ್ರ ಗಾಳಿ - ಮಳೆ ವೇಳೆ ಪೊಲೀಸ್ ಅಧೀಕ್ಷಕರು ರಜೆಯಲ್ಲಿ ತೆರಳಿ ಅಧಿಕಾರಿಗಳಿಲ್ಲದೆ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ್ದು, ಆ ದಿಸೆಯಲ್ಲಿ ತಾವು ಗಮನಹರಿಸಿ ಅಗತ್ಯ ಕ್ರಮ ಕೈಗೊಂಡಿರುವದಾಗಿಯೂ ವಿವರಿಸಿದರು.

ಸಮರೋಪಾದಿ ಕೆಲಸ : ಕೊಡಗು ಜಿಲ್ಲೆಯಲ್ಲಿ ಮಳೆಯಿಂದ 2000 ಸಾವಿರದಷ್ಟು ವಿದ್ಯುತ್ ಕಂಬಗಳು ಹಾನಿಗೊಂಡು, ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟದ ಬಗ್ಗೆಯೂ ಗಮನ ಸೆಳೆದ ಮೇರೆಗೆ, ಮೈಸೂರು ಮತ್ತು ಹಾಸನದ ಸಿಬ್ಬಂದಿಗಳನ್ನು ಜಿಲ್ಲೆ ಕಳುಹಿಸಿಕೊಟ್ಟಿರುವದಾಗಿ ವಿವರಿಸಿದ ಅವರು, ಜನತೆಯ ಕಷ್ಟ ನಿವಾರಣೆಗೆ ಸರಕಾರ ಬದ್ಧವೆಂದು ಘೋಷಿಸಿದರು.

ಇಂದಿನ ಸಭೆ ಬಳಿಕ ನಡೆದ ಗೋಷ್ಠಿಯಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ. ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಪೊಲೀಸ್ ಅಧೀಕ್ಷಕಿ ಸುಮನ್ ಡಿ. ಪಣ್ಣೇಕರ್ ಸೇರಿದಂತೆ ಇತರ ಪ್ರಮುಖರು ಹಾಜರಿದ್ದರು.