ಸುಂಟಿಕೊಪ್ಪ, ಜು. 19:ಸುಂಟಿಕೊಪ್ಪ ಕ್ಷೇತ್ರದ ಜಿ.ಪಂ.ಸದಸ್ಯರು ಎಲ್ಲಿದ್ದಾರೆ. ಹುಡಿಕೊಡಿ ಎಂದು ಸಾರ್ವಜನಿಕರು ಪತ್ರಿಕಾ ಹೇಳಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುಂಟಿಕೊಪ್ಪ ಜಿ.ಪಂ. ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕುಶಾಲನಗರ ಗುಮ್ಮನಕೊಲ್ಲಿಯ ಕೆ.ಪಿ.ಚಂದ್ರಕಲಾ ಅವರನ್ನು ನಾವು ಭಾರೀ ನಿರೀಕ್ಷೆಯಿಟ್ಟು ಮತ ನೀಡಿ ಗೆಲ್ಲಿಸಿದ್ದೇವೆ ಅವರು ಕಾಂಗ್ರೆಸ್‍ನಲ್ಲಿ ರಾಜ್ಯ ಮಟ್ಟದ ನಾಯಕರಾಗಿ ಗುರುತಿಸಿಕೊಂಡು ಎಸ್.ಎಂ.ಕೃಷ್ಣ ಅವರ ಸರಕಾರದ ಅವಧಿಯಲ್ಲಿ ರಾಜ್ಯ ನೀರು ಸರಬರಾಜು ಹಾಗೂ ಒಳಚರಂಡಿ ನಿಗಮದ ಅಧ್ಯಕ್ಷರಾಗಿ ಯಶಸ್ವಿಯಾಗಿ ಕೆಲಸ ಮಾಡಿದ್ದರು. ಜಿ.ಪಂ.ಅಧ್ಯಕ್ಷೆಯಾಗಿ ತಲಕಾವೇರಿ, ಭಾಗಮಂಡಲ ಕ್ಷೇತ್ರದ ಅಭಿವೃದ್ಧಿಗೆ ಸರಕಾರದಿಂದ ಹಣ ತಂದು ಜೀರ್ಣೋದ್ಧಾರ ನೆರವೇರಿಸಿದ ಕೀರ್ತಿಗೆ ಭಾಜನರಾಗಿದ್ದರು. ಹಾರಂಗಿಯಿಂದ ಸೋಮವಾರಪೇಟೆಗೆ ಬೃಹತ್ ಕುಡಿಯುವ ನೀರು ಯೋಜನೆ ಜಾರಿಗೆ ತರಲು ಅವರ ಪ್ರಯತ್ನ ಅಪಾರವಾಗಿತ್ತು. ಈ ಹಿನ್ನೆಲೆಯಲ್ಲಿ ಹೊರಗಿನವರು ಎಂಬ ಭಾವನೆ ತೋರದೆ ಸುಂಟಿಕೊಪ್ಪ ಜಿ.ಪಂ. ಕ್ಷೇತ್ರದಿಂದ ಅವರು ಇಲ್ಲಿನ ಅಭಿವೃದ್ಧಿಗೆ ಕೈಜೋಡಿಸುತ್ತಾರೆಂದು ಪಕ್ಷಬೇಧ ಮರೆತು ಚುನಾಯಿಸಿ ಕಳಿಸಿದ್ದೆವು. ಆದರೆ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಆಭ್ಯರ್ಥಿಯಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತ ನಂತರ ಇದುವರೆಗೂ ಸುಂಟಿಕೊಪ್ಪಕ್ಕೆ ಅವರು ತಲೆ ಹಾಕಲಿಲ್ಲ. ಅತಿವೃಷ್ಟಿಯಿಂದ ಈ ವಿಭಾಗದಲ್ಲಿ ಅನೇಕರ ಮನೆ ಕುಸಿದು ಬಿದ್ದಿದೆ. ವಿದ್ಯುತ್ ಸಂಪರ್ಕ ಕಡಿತವಾಗಿದೆ. ಪದವಿಪೂರ್ವ ಕಾಲೇಜು ಕಟ್ಟಡ ಕುಸಿಯುವ ಹಂತದಲ್ಲಿದೆ, ಜನಜೀವನ ಅಸ್ತವ್ಯಸ್ಥಗೊಂಡಿದೆ. ಆದರೂ ಜಿ.ಪಂ.ಸದಸ್ಯರು ಪತ್ತೆ ಇಲ್ಲ. ಅವರು ಜಿ.ಪಂ. ಚುನಾವಣೆಯಲ್ಲಿ ಇದು ನನ್ನ ಕೊನೆ ಚುನಾವಣೆ ಎಂದಿದ್ದರು. ಆನಂತರ ವಿಧಾನಸಭಾ ಚುನಾವಣೆಗೂ ನಿಂತರು ಅವರೇ ನುಡಿದಂತೆ ಇನ್ನು ಚುನಾವಣೆಗೆ ನಿಲ್ಲುವದಿಲ್ಲ ಎಂಬ ಕಾರಣದಿಂದ ಮತ ನೀಡಿದ ನಮ್ಮ ಸಮಸ್ಯೆ ಸ್ಪಂದಿಸುತ್ತಿಲ್ಲವೊ ಎಂಬ ಸಂಶಯ ಕಾಡುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಹೋಬಳಿ ಅಧ್ಯಕ್ಷ ನಾಗೇಶ್ ಪೂಜಾರಿ, ಕಾರ್ಯದರ್ಶಿ ಸಂತೋಷ್ ದಿನು, ಉಪಾಧ್ಯಕ್ಷ ಮಂಜುನಾಥ್, ಕನ್ನಿಶ್ ಅವರುಗಳು ಪತ್ರಿಕಾ ಹೇಳಿಕೆಯಲ್ಲಿ ದೂರಿಕೊಂಡಿದ್ದಾರೆ.