ಕುಶಾಲನಗರ, ಜು. 19: ಕೊಡಗು ಜೆಡಿಎಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಸಂಕೇತ್ ಪೂವಯ್ಯ ಅವರನ್ನು ಬದಲಾಯಿಸಬೇಕೆಂದು ಪಕ್ಷದ ಕೆಲವು ಕಾರ್ಯಕರ್ತರು ಹಾರಂಗಿ ಪ್ರವಾಸಿ ಮಂದಿರದಲ್ಲಿ ಘೋಷಣೆ ಕೂಗಿ ಪ್ರತಿಭಟಿಸಿದ ಪ್ರಸಂಗ ನಡೆಯಿತು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿಸಿ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದ ಸಂದರ್ಭ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಅವಕಾಶ ಸಿಗದ ಪೊನ್ನಂಪೇಟೆ, ಸೋಮವಾರಪೇಟೆ ಭಾಗದ ಕಾರ್ಯಕರ್ತರು ಸಂಕೇತ್ ಪೂವಯ್ಯ ಅವರ ವಿರುದ್ಧ ಘೋಷಣೆ ಕೂಗಿದರು. ನಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು ಜಿಲ್ಲಾಧ್ಯಕ್ಷರಾಗಿ ಸಂಕೇತ್ ಪೂವಯ್ಯ ಯಾವದೇ ಹಂತದ ಸಭೆ ಕರೆದಿಲ್ಲ. ಚುನಾವಣೆಯಲ್ಲಿ ಸೋಲು ಕಾಣಲು ಜಿಲ್ಲಾಧ್ಯಕ್ಷರು ಕಾರಣರಾಗಿ ದ್ದಾರೆ ಎಂದು ಆರೋಪಿಸಿದ್ದಾರೆ.

ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರನ್ನು ಸಮಾಧಾನಿಸಿ ದರು. ಪಕ್ಷದ ಪ್ರಮುಖರಾದ ಎಂ.ಟಿ.ಕಾರ್ಯಪ್ಪ, ಕಾರ್ಮಾಡು ಸುಬ್ಬಣ್ಣ, ಕೆ.ಆರ್.ಸುರೇಶ್, ವಿನೇಶ್, ದಯಾಚಂಗಪ್ಪ, ಭರತ್ ಕುಮಾರ್, ಕುಸುಮ್ ಕಾರ್ಯಪ್ಪ ಸೇರಿದಂತೆ ಹಲವು ಕಾರ್ಯಕರ್ತರು ಅಧ್ಯಕ್ಷರ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿದ್ದರು.

ಹಾರಂಗಿ ಪ್ರವಾಸಿ ಮಂದಿರಕ್ಕೆ ಮುಖ್ಯಮಂತ್ರಿಗಳು ಆಗಮಿಸಿದ ನಂತರ ಕಾರ್ಯಕರ್ತರ ಹಾಗೂ ಪೊಲೀಸರ ನಡುವೆ ಭಾರೀ ಗೊಂದಲದ ಸನ್ನಿವೇಶ ಸೃಷ್ಟಿಯಾಯಿತು. ಪ್ರವಾಸಿ ಮಂದಿರದ ಹೊರಭಾಗದಲ್ಲಿ ಸೇರಿದ ನೂರಾರು ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಮುಖ್ಯಮಂತ್ರಿಗಳಿಗೆ ವಿವಿಧ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಲು ಮುಂದಾದಾಗ ಪೊಲೀಸರು ಅವಕಾಶ ಕಲ್ಪಿಸಲಿಲ್ಲ. ಈ ನಡುವೆ ಪ್ರವಾಸಿ ಮಂದಿರದ ಆವರಣದ ಮುಂಭಾಗದಲ್ಲಿ ಕಾರ್ಯಕರ್ತರಿಗೆ ಉಪಹಾರ ವ್ಯವಸ್ಥೆ ಕಲ್ಪಿಸಿದ್ದು ಈ ಸಂದರ್ಭ ಉಂಟಾದ ನೂಕುನುಗ್ಗಲಿ ನಿಂದ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ತಳ್ಳಾಟ ನೂಕಾಟ ಉಂಟಾಯಿತು. ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಮಂಡ್ಯ ಜಿಲ್ಲೆಯ ಡಿವೈಎಸ್ಪಿ ಅಧಿಕಾರಿಯೊಬ್ಬರ ಅಸಮರ್ಪಕ ಕಾರ್ಯವೈಖರಿ ಎಲ್ಲರ ಆಕ್ರೋಷಕ್ಕೆ ಕಾರಣವಾಯಿತು.