ಮಡಿಕೇರಿ, ಜು. 19: ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಂಭಾಂಗಣದಲ್ಲಿ ಅಧಿಕಾರಿಗಳ ಸಭೆಗೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನ ಸಂಪೂರ್ಣ ಖಾಕಿ ಸರ್ಪಗಾವಲಿನಲ್ಲಿತ್ತು. ಸಂತ ಮೈಕಲರ ಶಾಲಾ ಗೇಟ್ ಬಳಿಯಿಂದ ಜಿಲ್ಲಾಡಳಿತ ಭವನದ ಹೊರಗೂ ಒಳಗೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.(ಮೊದಲ ಪುಟದಿಂದ) ಸಂತ ಮೈಕಲರ ಶಾಲಾ ಗೇಟ್ ಬಳಿಯಿಂದ ಒಳ ಪ್ರವೇಶಿಸಲು ಖಾಸಗಿ ವಾಹನಗಳಿಗೆ ನಿರ್ಬಂಧ ಹೇರಲಾಗಿತ್ತು.ಪಾಸ್ ಹೊಂದಿದ್ದ ವ್ಯಕ್ತಿಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿತ್ತು. ಮಧ್ಯಾಹ್ನದ ವೇಳೆಗಾಗಲೇ ಅನೇಕ ಸಂಘ ಸಂಸ್ಥೆಗಳ ಪ್ರಮುಖರು ಜಿಲ್ಲಾಧಿಕಾರಿ ಸಭಾಂಗಣದ ಬಳಿ ತಮ್ಮ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರಗಳೊಂದಿಗೆ ಮುಖ್ಯಮಂತ್ರಿಗಾಗಿ ಕಾದು ಕುಳಿತಿದ್ದರು. ಸಂಜೆ ವೇಳೆಗೆ ಜಿಲ್ಲಾಡಳಿತ ಭವನ ಪ್ರವೇಶಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಬಿಗಿ ಬಂದೋಬಸ್ತ್ ಮೂಲಕ ಜಿಲ್ಲಾಧಿಕಾರಿ ಸಭಾಂಗಣಕ್ಕೆ ಕರೆದೊಯ್ಯಲಾಯಿತು.ನಂತರ ಸಿಎಂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು..ಮುಖ್ಯಮಂತ್ರಿಗಳು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದ ವೇಳೆ ಅಧಿಕಾರಿಗಳನ್ನು ಹೊರತುಪಡಿಸಿ ಸಾರ್ವಜನಿಕರು, ಮಾಧ್ಯಮದವರಿಗೆ ಸಭಾಂಗಣ ಪ್ರವೇಶಕ್ಕೆ ಅವಕಾಶ ಇಲ್ಲವಾಗಿತ್ತು.ಈ ಹಿನ್ನೆಲೆಯಲ್ಲಿ ಸುದ್ದಿ ಮಾಡಲು ಬಂದಿದ್ದ ಪತ್ರಕರ್ತರು, ಮಾಧ್ಯಮದವರು ಸಭಾಂಗಣದ ಹೊರ ಭಾಗದಲ್ಲಿ ಕಾದು ನಿಲ್ಲಬೇಕಾಯಿತು. ಸಭೆ ನಡೆಸಿದ ಬಳಿಕ ಸಿಎಂ ಸುದ್ದಿಗೋಷ್ಠಿ ನಡೆಸಿದರು..