ಬಾಳೆಲೆ, ಜು. 19: ನಿಟ್ಟೂರು ಗ್ರಾಮ ಪಂಚಾಯಿತಿಯ ಪಿ.ಡಿ.ಓ. ಅವರ ಕಾರ್ಯವೈಖರಿ ಬಗ್ಗೆ ಸ್ಥಳೀಯ ಗ್ರಾಮಸಭೆಯಲ್ಲಿ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ಕಳೆದ ಗ್ರಾಮಸಭೆಯ ನಡಾವಳಿಯನ್ನು ಪ್ರಸ್ತಾಪಿಸದೆ ಸಭೆ ನಡೆಸಲು ಮುಂದಾದ ಕ್ರಮದ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಪಿ.ಡಿ.ಓ. ಅವರ ವರ್ಗಾವಣೆಗೂ ಆಗ್ರಹಿಸಲಾಯಿತು.

ಗ್ರಾ.ಪಂ. ಅಧ್ಯಕ್ಷೆ ಕಡೇಮಾಡ ಅನಿತ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಜಿ.ಪಂ. ಸದಸ್ಯ ಪ್ರಥ್ಯು ಅವರು ಸಾರ್ವಜನಿಕರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿ ಈ ಬಗ್ಗೆ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ದೂರು ನೀಡಲಾಗುವದು. ಈ ಬಗ್ಗೆ ಕ್ರಮ ಜರುಗಿಸದಿದ್ದಲ್ಲಿ ಪಂಚಾಯಿತಿಗೆ ಘೇರಾವ್ ಮಾಡಲಾಗುವದು ಎಂದು ತಿಳಿಸಿದರು. ಮಳೆ ಹಾನಿ, ವನ್ಯ ಪ್ರಾಣಿಗಳ ಉಪಟಳ ಸಾರ್ವಜನಿಕರ ಶೌಚಾಲಯದ ದುಸ್ಥಿತಿ, ಕಳ್ಳತನ ಪ್ರಕರಣಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಅರಣ್ಯ ಇಲಾಖೆ ವತಿಯಿಂದ ಸ್ಥಳೀಯ ತಟ್ಟಕರೆ ಹಾಡಿಯ ಸರಹದ್ದನ್ನು ಗುರುತಿಸಬೇಕು. ಗಿರಿಜನರನ್ನು ಬಲಾತ್ಕಾರವಾಗಿ ಒಕ್ಕಲೆಬ್ಬಿಸಬಾರದೆಂದು ಈ ಸಂದರ್ಭ ಗಿರಿಜನ ಮುಖಂಡರು ಆಗ್ರಹಿಸಿದರು.

ಸಭೆಯಲ್ಲಿ ತಾ.ಪಂ. ಸದಸ್ಯೆ ಅನಿತಾ, ಗ್ರಾ.ಪಂ. ಉಪಾಧ್ಯಕ್ಷ ಪವನ್, ಸದಸ್ಯರಾದ ಸೂರಿ ಅಯ್ಯಪ್ಪ, ದೇವಿ, ಭಾಗಿ, ಗಂಗಮ್ಮ ಮತ್ತಿತರರು ಹಾಜರಿದ್ದರು.