ಗೋಣಿಕೊಪ್ಪಲು, ಜು. 19: ವೀರಾಜಪೇಟೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ಪಾಳಯದ ವೈದ್ಯರು ಪಾನಮತ್ತರಾದ ಸ್ಥಿತಿಯಲ್ಲಿ ತಾ. 18 ರ ರಾತ್ರಿ ಕಂಡುಬಂದಿದ್ದು, ರಾತ್ರಿ 12 ಗಂಟೆ ಸುಮಾರಿಗೆ ವಿವಾಹಿತ ಮಹಿಳೆಯೊಬ್ಬರಿಗೆ ತುರ್ತು ಚಿಕಿತ್ಸೆ ನೀಡದೆ ಅವಹೇಳನ ಮಾಡಿ ಹೊರಕಳಿಸಿದ ಘಟನೆ ನಡೆದಿದೆ. ಮೂಲತಃ ಬೇತ್ರಿ ಸಮೀಪ ನಾಲ್ಕೇರಿ ಗ್ರಾಮದ ವಿವಾಹಿತ ಮಹಿಳೆ ಫಾತಿಮಾ (27) ಇವರು ಚಿಕಿತ್ಸೆ ಸಿಗದೆ ವಾಪಾಸ್ಸಾದವರು. ನಿನ್ನೆ ರಾತ್ರಿ ಫಾತಿಮಾ ಅವರು ಎದೆ ನೋವಿನಿಂದ ಬಳಲುತ್ತಿದ್ದು, ಕೂಡಲೇ ಕುಟುಂಬ ಸದಸ್ಯರು ವೀರಾಜಪೇಟೆ ತಾಲೂಕು ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ಕರೆತಂದರು ಎನ್ನಲಾಗಿದೆ.
ಈ ಹಂತದಲ್ಲಿ ರಾತ್ರಿ ಪಾಳಯದಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದ್ದ ಡಾ. ಆನಂದ್ ಅವರು ಪಾನಮತ್ತರಾಗಿ ತಮ್ಮ ಕುರ್ಚಿಯಲ್ಲಿಯೇ ನಿದ್ರೆಗೆ ಜಾರಿದ್ದರು.
ಅನಾರೋಗ್ಯ ಪೀಡಿತ ಮಹಿಳೆಯ ಕುಟುಂಬಸ್ಥರು ವೈದ್ಯರನ್ನು ಎಬ್ಬಿಸಿ ತುರ್ತು ಚಿಕಿತ್ಸೆ ನೀಡಲು ಒತ್ತಾಯಿಸಿದ್ದರೂ ವೈದ್ಯರು ಅವಹೇಳನ ಮಾಡಿದರು ಎಂದು ಕುಟುಂಬ ಸದಸ್ಯರಲ್ಲಿ ಒಬ್ಬರಾದ ಮಹಮ್ಮದ್ ಆಲಿ ಶಕ್ತಿಗೆ ತಿಳಿಸಿದ್ದಾರೆ.
ನಂತರ ಮಹಿಳೆಯನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಬೇಕಾಗಿ ಬಂದಿದ್ದು, ಇದೀಗ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಮಹಮ್ಮದ್ ಆಲಿ ಮಾಹಿತಿ ನೀಡಿದ್ದಾರೆ.
ಪಾನಮತ್ತರಾಗಿ ನಿದ್ರಿಸುತ್ತಿರುವ ವೈದ್ಯರ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.