ಸೋಮವಾರಪೇಟೆ, ಜು. 19: ಕಳೆದ ಮೇ 31ರಂದು ಪಟ್ಟಣದ ಕಕ್ಕೆಹೊಳೆ ಸಮೀಪ ಜರುಗಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಗರಗಂದೂರು ಬಿ. ಗ್ರಾಮದ ಗಣೇಶ್ ಅವರ ಕುಟುಂಬಕ್ಕೆ ಮೈಸೂರು ರೋಟರಿ ಸಂಸ್ಥೆಯ ವತಿಯಿಂದ ರೂ. 25 ಸಾವಿರ ಹಾಗೂ ಕಂಪ್ಯೂಟೆಕ್ ಸಂಸ್ಥೆಯ ವತಿಯಿಂದ ರೂ. 5 ಸಾವಿರ ನೆರವು ಒದಗಿಸಲಾಯಿತು.
ಆಟೋ ಚಾಲಕರಾಗಿದ್ದ ಗಣೇಶ್ ಅವರ ನಿಧನದಿಂದಾದ ಕುಟುಂಬದ ಸಂಕಷ್ಟವನ್ನು, ಹೊರ ಜಗತ್ತಿನೆದುರು ತೆರೆದಿಟ್ಟ ನಂತರ ಕುಟುಂಬಕ್ಕೆ ವಿವಿಧ ರೀತಿಯ ನೆರವು ಹರಿದು ಬಂದಿದ್ದು, ಮೈಸೂರಿನ ರೋಟರಿ ಸಂಸ್ಥೆಯ ವತಿಯಿಂದ ರೂ. 25 ಸಾವಿರ ಮೌಲ್ಯದ ಚೆಕ್‍ನ್ನು ಪದಾಧಿಕಾರಿಗಳಾದ ಗಣೇಶ್ ಬಾಳಿಗ, ಅಲೆಮಾಡ ಅಯ್ಯಣ್ಣ, ಸಂಜಯ್, ಸೋಮವಾರಪೇಟೆ ರೋಟರಿ ಸಂಸ್ಥೆಯ ಭರತ್ ಭೀಮಯ್ಯ, ನಾಗೇಶ್, ಪ್ರಕಾಶ್ ಅವರುಗಳು ಮೃತ ಗಣೇಶ್ ಅವರ ಪತ್ನಿ ಕೆ.ಟಿ. ಸವಿತ ಅವರಿಗೆ ಹಸ್ತಾಂತರಿಸಿದರು.
ಇದೇ ಸಂದರ್ಭ ಕಂಪ್ಯೂಟೆಕ್ ಸಂಸ್ಥೆಯ ಪ್ರದೀಪ್ ಅವರು ಸಂಸ್ಥೆಯ ಪರವಾಗಿ ರೂ. 5 ಸಾವಿರ ನೆರವು ಒದಗಿಸಿದರು. ಇದರೊಂದಿಗೆ ಸಾಧ್ಯವಾದರೆ ಗಣೇಶ್ ಅವರ ವಿಶೇಷ ಚೇತನ ಪುತ್ರಿಯರ ಆರೋಗ್ಯ ಹಾಗೂ ವಿದ್ಯಾಭ್ಯಾಸಕ್ಕೂ ಮೈಸೂರಿನಲ್ಲಿ ವ್ಯವಸ್ಥೆ ಕಲ್ಪಿಸುವದಾಗಿ ಪ್ರಮುಖರು ಭರವಸೆ ನೀಡಿದ್ದಾರೆ.