ಸೋಮವಾರಪೇಟೆ, ಜು. 19: ಭಾರೀ ಮಳೆಗೆ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಮನೆ, ಬೆಳೆ ನಾಶ ಉಂಟಾಗಿದ್ದು, ಕೂಡಲೇ ರಾಜ್ಯ ಸರಕಾರ ಜಿಲ್ಲೆಗೆ ಪರಿಹಾರಾರ್ಥವಾಗಿ ರೂ. 1 ಸಾವಿರ ಕೋಟಿ ಪ್ಯಾಕೇಜನ್ನು ಘೋಷಣೆ ಮಾಡಬೇಕೆಂದು ಸರಕಾರವನ್ನು ಆಗ್ರಹಿಸುವಂತೆ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್ ಅಧ್ಯಕ್ಷತೆಯಲ್ಲಿ ಸ್ಥಳೀಯ ಮಹಿಳಾ ಸಮಾಜದಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸೋಮವಾರಪೇಟೆ ಕಸಬ ಹೋಬಳಿ ವ್ಯಾಪ್ತಿಯ ಬೆಳೆಗಾರರರು ಸೇರಿದಂತೆ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಲು ಸರಕಾರವನ್ನು ಆಗ್ರಹಿಸುವಂತೆ ಒಮ್ಮತದ ನಿರ್ಣಯ ಕೈಗೊಂಡರು.ನಂತರ ನಡೆದ ವಿಜ್ಞಾನಿಗಳೊಂದಿಗೆ ರೈತ ಸಂವಾದ ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಪ್ರಭಾಕರ್ ಮಣ್ಣಿನ ಆರೋಗ್ಯ ಕುರಿತಂತೆ ಮಾಹಿತಿ ನೀಡಿದರು.
ಮಣ್ಣಿನೊಳಗಿನ ಗುಣಗಳನ್ನು ತಿಳಿದು ಅದಕ್ಕೆ ಅನುಗುಣವಾಗಿ ಪೋಷಕಾಂಶಗಳನ್ನು ನೀಡುವದರಿಂದ ಕಡಿಮೆ ಖರ್ಚಿನಲ್ಲಿ ನಿರೀಕ್ಷಿತ ಪ್ರಮಾಣದ ಬೆಳೆಗಳನ್ನು ಬೆಳೆದು ಆದಾಯ ವೃದ್ಧಿಸಿಕೊಳ್ಳಬಹುದಾಗಿದೆ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್ ಮಾತನಾಡಿದರು. ಸಂವಾದ ಕಾರ್ಯಕ್ರಮದಲ್ಲಿ ಕಾರ್ಪೋರೇಷನ್ ಬ್ಯಾಂಕ್‍ನ ವ್ಯವಸ್ಥಾಪಕ ಎಂ. ಶಿವಪ್ರಶಾಂತ್ ಅವರು ತಮ್ಮ ಬ್ಯಾಂಕಿನ
(ಮೊದಲ ಪುಟದಿಂದ) ಮೂಲಕ ರೈತರುಗಳಿಗೆ ಒದಗಿಸುವ ಯೋಜನೆಗಳ ಮಾಹಿತಿ ನೀಡಿದರು.
ಕಾಫಿ ಮಂಡಳಿಯಿಂದ ಕಳೆದ ಮೂರು ವರ್ಷಗಳಲ್ಲಿ ಯಾವದೇ ಸಹಾಯ ಧನ ನೀಡಿಲ್ಲ, ಕಾಫಿ ಮಂಡಳಿಯಿಂದ ನೀಡುವ ಬಿತ್ತನೆ ಬೀಜದ ದರ ದುಬಾರಿಯಾಗಿದೆ. ಈ ಹಿಂದೆ ಕೆ.ಜಿ.ಯೊಂದಕ್ಕೆ ರೂ. 200 ಇತ್ತು. ಈಗ ಏಕಾಏಕಿ ರೂ. 500 ಮಾಡಲಾಗಿದೆ ಎಂದು ಬೆಳೆಗಾರರು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿ ಮುರಳೀಧರ್, 2016-17ನೇ ಸಾಲಿನ ಸಹಾಯಧನವನ್ನು ಈಗಾಗಲೇ ಕೇಂದ್ರ ಸರಕಾರ ಬಿಡುಗಡೆಗೊಳಿಸಿದೆ. ಅದು ಮಂಡಳಿಯ ಖಾತೆಗೆ ಬಂದ ನಂತರವಷ್ಟೆ ವಿಲೇವಾರಿಯಾಗಲಿದೆ ಎಂದರು.
ಸಭೆಯಲ್ಲಿದ್ದ ಕಾಫಿ ಮಂಡಳಿ ಸದಸ್ಯ ಎಂ.ಬಿ. ಅಭಿಮನ್ಯುಕುಮಾರ್ ರವರು ಕಾಫಿ ಬಿತ್ತನೆ ಬೀಜದ ದರ ಕಡಿಮೆ ಮಾಡುವಂತೆ ಹಾಗೂ ಸಹಾಯಧನದ ಬಗ್ಗೆ ಕೇಂದ್ರ ಸಚಿವರೊಂದಿಗೆ ಸಮಿತಿ ಚರ್ಚಿಸಿದೆ. ಮುಂದಿನ ದಿನಗಳಲ್ಲಿ ಬದಲಾವಣೆ ಯಾಗಬಹುದು ಎಂದರು.
ಕಳೆದ ಕೆಲವು ದಿನಗಳ ಹಿಂದೆ ಬಿದ್ದ ಮಹಾಮಳೆಯಿಂದ ಯಡೂರು ಸೇರಿದಂತೆ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ನಾಟಿ ಮಾಡಿದ ಗದ್ದೆಗಳಲ್ಲಿ ಮಣ್ಣು, ಮರಳು ಸಂಗ್ರಹವಾಗಿ ಭತ್ತದ ಸಸಿಗಳು ಕೊಳೆತುಹೋಗಿದೆ. ಇದೀಗ ಮತ್ತೆ ಭತ್ತದ ಸಸಿಮಡಿಗಳನ್ನು ಬೆಳೆಸಿ, ನಾಟಿ ಮಾಡುವ ಕಾರ್ಯ ನಡೆಯಬೇಕಿದೆ. ಆದರೆ ಕೃಷಿ ಇಲಾಖೆಯಿಂದ ಬಿತ್ತನೆ ಬೀಜದ ಭತ್ತವನ್ನು ನೀಡಲು ಕ್ರಮ ಕೈಗೊಳ್ಳಬೇಕೆಂದು ಯಡೂರು ನಾಗರಾಜ್ ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿದ್ದ ಶಾಸಕ ಅಪ್ಪಚ್ಚು ರಂಜನ್‍ರವರು ಮಾತನಾಡಿ, ಕೂಡಲೇ ಹೈಬ್ರಿಡ್ ಭತ್ತದ ಬಿತ್ತನೆ ಬೀಜಗಳನ್ನು ನೀಡುವಂತೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.
ಭತ್ತಕ್ಕೆ ಸರಕಾರ ಬೆಂಬಲ ಬೆಲೆ ಘೋಷಿಸಿದ್ದು, ಸಕಾಲದಲ್ಲಿ ಗೋದಾಮುಗಳನ್ನು ತೆರೆಯಬೇಕು. ಇಲ್ಲದಿದ್ದಲ್ಲಿ ತೇವಾಂಶದ ಹೆಸರಿನಲ್ಲಿ ರೈತರುಗಳ ಶೋಷಣೆ ನಡೆಯುತ್ತದೆ ಎಂದು ಐಗೂರು ಗ್ರಾಪಂ ಸದಸ್ಯ ಕೆ.ಪಿ. ದಿನೇಶ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಶೋಷಣೆಗಳು ನಡೆದಾಗ ತಕ್ಷಣ ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದರು. ಕಾರ್ಯಕ್ರಮದಲ್ಲಿ ಕೃಷಿಕರಿಗೆ ಮಣ್ಣಿನ ಆರೋಗ್ಯ ಕಾರ್ಡ್ ವಿತರಿಸಲಾಯಿತು.
ಸಂವಾದ ಕಾರ್ಯಕ್ರಮದಲ್ಲಿ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ವೆಂಕಟರಮಣಪ್ಪ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಚ್.ಎಸ್. ರಾಜಶೇಖರ್, ತಾಂತ್ರಿಕ ಅಧಿಕಾರಿ ಡಾ. ಎಸ್. ಮುಕುಂದ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ನವ್ಯ ನಾಣಯ್ಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕೃಷಿ ಅಧಿಕಾರಿ ಗೀತಾ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಎಸ್.ಪಿ. ಪೊನ್ನಪ್ಪ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯೆ ಪೂರ್ಣಿಮಾ ಗೋಪಾಲ್, ತಾ.ಪಂ. ಸದಸ್ಯರುಗಳಾದ ಸಬಿತಾ, ಸವಿತಾ ಈರಪ್ಪ, ತಂಗಮ್ಮ, ಕಾಫಿ ಬೆಳೆಗಾರರ ಸಂಘದ ಪದಾಧಿಕಾರಿಗಳು ಸೇರಿದಂತೆ ಕಾಫಿ ಬೆಳೆಗಾರರು ಭಾಗವಹಿಸಿದ್ದರು.