ಮಡಿಕೇರಿ, ಜು. 19: ಮಳೆಯಿಂದ ಕೊಡಗಿನಲ್ಲಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ವೀಡಿಯೋ ಮೂಲಕ ಮಾತನಾಡಿ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದ ಎಮ್ಮೆಮಾಡುವಿನ ಎಂಟನೇ ತರಗತಿ ವಿದ್ಯಾರ್ಥಿ ಅಬ್ದುಲ್ ಫತ್ತಾಹ್ ಸಿಎಂ ಕಚೇರಿಯಿಂದ ಸಿಕ್ಕ ಆಹ್ವಾನದ ಹಿನ್ನೆಲೆಯಲ್ಲಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಲು ಜಿಲ್ಲಾಧಿಕಾರಿ ಸಭಾಂಗಣಕ್ಕೆ ಬಂದಿದ್ದ.
ತನ್ನ ಚಿಕ್ಕಪ್ಪ ಅಬ್ದುಲ್ ರಜಾಕ್ ಹಾಗೂ ದೊಡ್ಡಪ್ಪ ಅಬ್ದುಲ್ ಖಾದರ್ ಅವರೊಂದಿಗೆ ಆಗಮಿಸಿದ್ದ ಫತ್ತಾಹ್ ತನಗೆ ಆ ವೀಡಿಯೋ ಮಾಡಲು ಯಾರೂ ಪ್ರೇರೇಪಿಸಿಲ್ಲ. ಕೊಡಗಿನಲ್ಲಿ ಮಳೆಯಿಂದಾಗುತ್ತಿರುವ ಅನಾಹುತಗಳನ್ನು ಮನಗಂಡು ಸ್ವಯಂಪ್ರೇರಣೆಯಿಂದ ವೀಡಿಯೋ ಮಾಡಿದ್ದುದಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ. ತಾನು ವೀಡಿಯೋ ಮಾಡಿದ ವಿಚಾರ ತನ್ನ ತಂದೆಯ ಗಮನಕ್ಕೂ ಬಂದಿರಲಿಲ್ಲ. ವೀಡಿಯೋ ವೈರಲ್ ಆದ ಬಳಿಕವಷ್ಟೆ ಅವರಿಗೆ ವಿಚಾರ ತಿಳಿಯಿತು. ಕಾವೇರಿ ನದಿ ದಕ್ಷಿಣ ಭಾರತದ ಜೀವನದಿಯಾಗಿದ್ದು ಈ ಹಿನ್ನೆಲೆಯಲ್ಲಿ ತಾನು ಕಾವೇರಿ ನದಿ ದಂಡೆಯಲ್ಲಿಯೆ ಆ ವೀಡಿಯೋ ಮಾಡಿರುವದಾಗಿ ಫತ್ತಾಹ್ ಮಾಹಿತಿ ನೀಡಿದ.
ಸಭೆ ಹಾಗೂ ಸುದ್ದಿಗೋಷ್ಟಿ ಬಳಿಕ ಫತ್ತಾಹ್‍ನನ್ನು ಸಿ.ಎಂ. ಕುಮಾರಸ್ವಾಮಿ ಭೇಟಿ ಮಾಡಿದರು. ಈ ಸಂದರ್ಭ ಫತ್ತಾಹ್ ಎಮ್ಮೆಮಾಡುವಿನಲ್ಲಿ ತನ್ನ ಗ್ರಾಮದಲ್ಲಿ 3 ಕಿ.ಮೀ. ವ್ಯಾಪ್ತಿಗೆ ಉತ್ತಮ ರಸ್ತೆ, ಎಮ್ಮೆಮಾಡು ಶಾಲೆಗೆ ತಡೆಗೋಡೆ ನಿರ್ಮಿಸಿಕೊಡಬೇಕು ಮಾತ್ರವಲ್ಲದೆ, ಎಮ್ಮೆಮಾಡಿಗೆ ಜೂನಿಯರ್ ಕಾಲೇಜನ್ನು ಮಂಜೂರು ಮಾಡಿ; ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಮನವಿ ಸಲ್ಲಿಸಿದ. ಮನವಿಗೆ ಸ್ಪಂದಿಸುವದಾಗಿ ಸಿ.ಎಂ. ಭರವಸೆಯಿತ್ತರು.