ಭಾಗಮಂಡಲ, ಜು. 19: ರಾಜ್ಯದ ಮುಖ್ಯಮಂತ್ರಿ ಪುಣ್ಯಕ್ಷೇತ್ರ ತಲಕಾವೇರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಭಾಗಮಂಡಲ, ತಲಕಾವೇರಿ ಸೇರಿದಂತೆ ಮಡಿಕೇರಿ- ಭಾಗಮಂಡಲ ರಸ್ತೆಯನ್ನು ಸಿಂಗರಿಸಲಾಗುತ್ತಿದೆ.ಹಲವಾರು ವರ್ಷಗಳಿಂದ ಗುಂಡಿ ಬಿದ್ದು, ಹಳ್ಳ ಹತ್ತಿರುವ ರಸ್ತೆಗಳ ಗುಂಡಿಗಳಿಗೆ ಲಾರಿಯಲ್ಲಿ ಮರಳು, ಮಣ್ಣು ತಂದು ಸುರಿಯಲಾಗುತ್ತಿದೆ. ಸುರಿದಂತೆ ಮಣ್ಣು ಮಳೆಯ ನೀರಿನಲ್ಲಿ ಕರಗಿ ಕೆಸರಿನ ಹೊಂಡಗಳಾಗುತ್ತಿವೆ. ಎಷ್ಟೋ ವರ್ಷಗಳಿಂದ ಚರಂಡಿ ಮುಚ್ಚಿ ಹೋಗಿ ರಸ್ತೆ ಮೇಲೆ ನೀರು ಹರಿಯುತ್ತಿರುವ ಸ್ಥಳಗಳಲ್ಲಿ ಜೆಸಿಬಿ ಮೂಲಕ ಚರಂಡಿ ಸರಿಪಡಿಸಲಾಗಿದೆ. ರಸ್ತೆ ಬದಿಗಳಲ್ಲಿ ಎಷ್ಟೋ ವರ್ಷಗಳಿಂದ ಅಪಾಯದ ಸ್ಥಿತಿಯಲ್ಲಿದ್ದ ಮರಗಳನ್ನು ಬಿರಬಿರನೆ ಕಡಿದು ಸುಗಮಗೊಳಿಸಲಾಗಿದೆ. ಪ್ರವಾಸಿಗರಿಂದಾಗಿ ರಸ್ತೆ ಬದಿಯುದ್ದಕ್ಕೂ ಬಿದ್ದಿದ್ದ ಪ್ಲಾಸ್ಟಿಕ್, ಬಾಟಲಿ, ತ್ಯಾಜ್ಯಗಳು ದಿಢೀರ್ ಮಾಯವಾಗಿವೆ.

ಇತ್ತ ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಬಾಗಿನಕ್ಕೆ ಹಾಗೂ ಭಗಂಡೇಶ್ವರ ಸನ್ನಿಧಿಯಲ್ಲಿ ಪೂಜೆ, ಅರ್ಚನೆಗೆ ಪೌಳಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ತಲಕಾವೇರಿಯಲ್ಲಿಒ ಇದುವರೆಗೆ ಪಾಚಿಕಟ್ಟಿದ್ದ, ಭಕ್ತರು ಎದ್ದು, ಬಿದ್ದು ಹೋಗುತ್ತಿದ್ದ ಮೆಟ್ಟಿಲುಗಳನ್ನು ತೊಳೆದು ಶುಭ್ರ ಮಾಡಿ ನೆಲಹಾಸು ಹಾಸಲಾಗಿದೆ. ತಳಿರು -ತೋರಣಗಳಿಂದ ಸಿಂಗರಿಸಲಾಗಿದ್ದು, ಪೂಜೆಗಾಗಿ ಪೌಳಿಯ ಸುತ್ತಲೂ ನೀರು- ಗಾಳಿ ಬಾರದಂತೆ ಶೀಟುಗಳನ್ನು ಅಳವಡಿಸಲಾಗಿದೆ. ಕುಳಿತುಕೊಳ್ಳಲು ಮರದ ಹಲಗೆ ಮೇಲೆ ನೆಲಹಾಸು ಹಾಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಗ್ನಿಶಾಮಕ ದಳ ನಿಯೋಜಿಸಲಾಗಿದ್ದು, ಅಧಿಕಾರಿಗಳು ಇಲ್ಲಿಯೇ ತಂಗಿದ್ದಾರೆ. ಎಲ್ಲಾ ಲಾಡ್ಜ್‍ಗಳು ಬುಕ್ ಆಗಿವೆ.

ಭಾಗಮಂಡಲ ವ್ಯಾಪ್ತಿ ನಳ ನಳಿಸುತ್ತಿದ್ದು, ಮುಖ್ಯಮಂತ್ರಿಗಳು 6 ತಿಂಗಳಿಗೊಮ್ಮೆ ಭಾಗಮಂಡಲಕ್ಕೆ ಬರುತ್ತಿದ್ದರೆ ನಾಡು ಇನ್ನಷ್ಟು ಸುಂದರವಾಗಿರಬಹುದೆಂಬದು ಇಲ್ಲಿನ ಜನತೆ ಆಡಿಕೊಳ್ಳುತ್ತಿದ್ದಾರೆ.

-ಸುನಿಲ್.