ಸಿದ್ದಾಪುರ, ಜು. 19: ಮೇಯಲು ಹೋದ ಹಸುವಿನ ಮೇಲೆ ಹುಲಿ ಧಾಳಿ ಮಾಡಿದ ಘಟನೆ ಬಾಡಗ ಬಾಣಂಗಾಲ ಗ್ರಾಮದಲ್ಲಿ ನಡೆದಿದೆ.
ಮಾಲ್ದಾರೆ ಗ್ರಾ.ಪಂ.ಯ ಬಾಡಗ ಬಾಣಂಗಾಲ ಗ್ರಾಮದ ಮಟ್ಟಂನ ನಿವಾಸಿ ಚಂದ್ರ ಎಂಬವರ ಹಸುವನ್ನು ಪ್ರತಿನಿತ್ಯ ಮೇವಿಗಾಗಿ ತೋಟದಲ್ಲಿ ಬಿಡುತಿದ್ದರು. ಮಂಗಳವಾರ ಎಂದಿನಂತೆ ಹಸು ಮೇಯಲು ತೋಟಕ್ಕೆ ಹೋಗಿದ್ದು ಸಾಯಂಕಾಲ ಹಸುವನ್ನು ಕೊಟ್ಟಿಗೆಗೆ ಕಟ್ಟಲು ಚಂದ್ರ ತೋಟಕ್ಕೆ ತೆರಳಿದಾಗ ಹಸುವಿನ ಮೈಯಲ್ಲಿ ಹುಲಿ ಧಾಳಿ ನಡೆಸಿ ತನ್ನ ಉಗುರುಗಳಿಂದ ಪರಚಿದ ಗಾಯಗಳು ಕಂಡು ಬಂದಿದೆ. ಕುತ್ತಿಗೆ ಸೇರಿದಂತೆ ಹಲವು ಕಡೆ ಗಾಯಗಳಾಗಿ ರಕ್ತ ಸೋರುತಿದ್ದು, ಕೂಡಲೇ ಹಸುವನ್ನು ಕೊಟ್ಟಿಗೆಗೆ ತಂದು ಆರೈಕೆ ಮಾಡಲಾಗಿದೆ.
ಈ ವ್ಯಾಪ್ತಿಯಲ್ಲಿ ಹುಲಿ ಧಾಳಿ ಯಿಂದ ಹಲವಾರು ಜಾನುವಾರುಗಳು ಬಲಿಯಾಗಿದ್ದು ಅರಣ್ಯ ಇಲಾಖೆ ಹುಲಿಯನ್ನು ಸೆರೆ ಹಿಡಿಯಲು ಪ್ರಯತ್ನ ಪಟ್ಟರೂ ಹುಲಿ ಮಾತ್ರ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸುತ್ತಿದೆ. ನಿರಂತರ ಹುಲಿ ಧಾÁಳಿಯಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದು, ಮನೆಯಿಂದ ಹೊರ ಬರಲು ಹಿಂಜರಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.