ಮಡಿಕೇರಿ, ಜು. 20: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೊಡಗು ಜಿಲ್ಲಾ ಪ್ರವಾಸ ಹಮ್ಮಿಕೊಂಡಿರುವ ಸಂದರ್ಭ, ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ‘ಶಕ್ತಿ’ ಮುಖಾಂತರ ಒಂದಿಷ್ಟು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಅಲ್ಲದೆ ತಾನು ಮುಂಗಡ ಪತ್ರದ ಮೇಲಿನ ಚರ್ಚೆಯಲ್ಲಿ ತಾ. 9 ರಂದು ಉಲ್ಲೇಖಿಸಿರುವ ಸಂಗತಿಗಳನ್ನು ಮುಖ್ಯಮಂತ್ರಿ ಅವರಿಗೆ ನೆನಪಿಸಿದ್ದಾರೆ.

ಮುಖ್ಯಮಂತ್ರಿಗಳು ಮುಂಗಡ ಪತ್ರದಲ್ಲಿ ಉಲ್ಲೇಖಿಸಿರುವ ಸಾಲಮನ್ನಾ ವಿಚಾರದಲ್ಲಿ ಕೊಡಗಿನ 131 ಮಂದಿ ಬೆಳೆಗಾರರಿಗೆ ಮಾತ್ರ ಪ್ರಯೋಜನವಾಗಲಿದೆ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರು ಮಾಹಿತಿ ನೀಡಿದ್ದು, ಸಾಲಮನ್ನಾ ಕೊಡಗಿನ ಸಂಕಷ್ಟದಲ್ಲಿರುವ ರೈತ-ಬೆಳೆಗಾರರಿಗೆ ಹೇಗೆ ಸಹಕಾರಿ ಎಂದು ಪ್ರಶ್ನಿಸಿದ್ದಾರೆ.

ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರೊಂದಿಗೆ ರೈತ ವರ್ಗಕ್ಕೂ ಹೊರೆಯಲ್ಲವೇ ಎಂದು ಬೊಟ್ಟು ಮಾಡಿರುವ ಅವರು, ಕೊಡಗಿನ ಕಾವೇರಿ ಒಡಲಿನಲ್ಲಿ ತೀವ್ರ ಮಳೆಯೊಂದಿಗೆ ಅಪಾರ ನಷ್ಟದ ನಡುವೆ ಇಲ್ಲಿನ ಜನತೆ ನರಕಯಾತನೆಯಲ್ಲಿರುವ ಸಂದರ್ಭ ಕೆಆರ್‍ಎಸ್ ತುಂಬಿದ್ದಾಗಿದೆ ಎಂದು ನೆನಪಿಸಿದ್ದಾರೆ.

ಕೊಡಗು-ಕೇರಳ ಸಂಪರ್ಕ ರಸ್ತೆ, ಮಂಗಳೂರು-ಮಡಿಕೇರಿ ರಸ್ತೆಗಳಲ್ಲಿ ಭಾರೀ ಹಾನಿಯೊಂದಿಗೆ ಜಿಲ್ಲೆಯ ಯಾವ ರಸ್ತೆಗಳು ಸಂಚರಿಸಲು ಅಸಾಧ್ಯ ರೀತಿ ಹಾಳಾಗಿದ್ದು, ಭೂಕುಸಿತದಿಂದ ಜಿಲ್ಲಾ ಆಡಳಿತ ಭವನಕ್ಕೂ ಅಪಾಯ ಉಂಟಾಗಿರುವ ವೇಳೆ ಈ ಜಿಲ್ಲೆಗೆ ವಿಶೇಷ ಅನುದಾನ ನೀಡುವ ಮನಸು ಮಾಡಲಿರುವಿರಾ? ಎಂದು ಪ್ರಶ್ನಿಸಿದ್ದಾರೆ.

ಪ್ರಸಕ್ತ ಮಳೆಯಿಂದ ಕೊಡಗಿನಲ್ಲಿ 5 ಅಥವಾ 10 ಎಕರೆಯೊಳಗೆ ಕಾಫಿ ತೋಟ ಹೊಂದಿದ್ದು, ಒಂದೆರಡು ಎಕರೆ ಭತ್ತದ ಮುಂಗಾರು ಕೃಷಿಯಲ್ಲೇ ಬದುಕು ನಡೆಸುವವರಿದ್ದು, ಅವರೆಲ್ಲರು ಸಂಪೂರ್ಣ ಪ್ರಕೃತಿ ವಿಕೋಪದಿಂದ ನಲುಗಿ ಹೋಗಿ, ಅನೇಕರು ಮನೆಗಳನ್ನು ಕಳೆದುಕೊಂಡು ನಷ್ಟದಲ್ಲಿ ಸಿಲುಕಿದ್ದು, ಪರಿಹಾರ ಕಲ್ಪಿಸಲು ಪ್ರಾಮಾಣಿಕ ಚಿಂತನೆ ಹರಿಸುವಿರಾ ಎಂದು ಗಮನ ಸೆಳೆದಿದ್ದಾರೆ.

ಕೊಡಗಿನಲ್ಲಿ ಬಹುತೇಕ ಕಡೆ ತೋಟಗಳಲ್ಲಿ 15-20 ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ನಿತ್ಯ ಜಾನುವಾರುಗಳು ಹುಲಿ ಧಾಳಿಗೆ ಬಲಿಯಾಗುತ್ತಿರುವ ಭಯಾನಕ ಘಟನಾವಳಿಗಳ ಬಗ್ಗೆ ‘ಶಕ್ತಿ’ ಸಹಿತ ಇತರ ಪತ್ರಿಕೆಗಳು ಬೆಳಕು ಚೆಲ್ಲಿದ್ದು, ಆ ದಿಸೆಯಲ್ಲಿ ಗಮನಿಸಬೇಕೆಂದು ಆಗ್ರಹಿಸಿದ್ದಾರೆ.

ಕೊಡಗು ಸೈನಿಕರ ತವರು, ಕ್ರೀಡಾ ಜಿಲ್ಲೆ, ಕಾವೇರಿ ಒಡಲು ಎಂಬಿತ್ಯಾದಿ ಖ್ಯಾತಿಯಿದ್ದರೂ, ತಾನು ಬಜೆಟ್ ಸಭೆಯಲ್ಲಿ ಪ್ರಸ್ತಾಪಿಸಿದಂತೆ ಸಾವಿರಾರು ಯೋಧರ ಸಹಿತ ದೇಶಾಭಿಮಾನಿ ಕ್ರೀಡಾಪಟುಗಳಿಗೆ ತಮ್ಮ ಸರಕಾರ ಯಾವ ಕೊಡುಗೆ ನೀಡಲಿದೆ ಎಂದು ಸುಬ್ರಮಣಿ ಉಲ್ಲೇಖಿಸಿದ್ದಾರೆ. ಕೊಡಗಿನಲ್ಲಿ ವರ್ಷ ವರ್ಷ ನವೆಂಬರ್ 10 ರಂದು ಟಿಪ್ಪು ಜಯಂತಿ ಹೆಸರಿನಲ್ಲಿ 2 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ ಯೊಂದಿಗೆ, ವಾರಗಟ್ಟಲೆ ಕೋಟಿ ಹಣ ವ್ಯಯಿಸಿ ವ್ಯಾಪಾರಿಗಳು, ಪ್ರವಾಸಿಗರ ಸಹಿತ ಜಿಲ್ಲೆಯ ಜನತೆಯ ನೆಮ್ಮದಿಗೆ ಆತಂಕ ತಂದೊಡ್ಡುವ ಇಂತಹ ಗೊಂದಲಗಳಿಗೆ ತೆರೆ ಎಳೆಯಲು ಮನಸ್ಸು ಮಾಡು ವಂತೆ ಸುನಿಲ್ ಸುಬ್ರಮಣಿ ‘ಶಕ್ತಿ’ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾರೆ.