ನಾವು ರಸ್ತೆಯಲ್ಲಿ ನಡೆಯುತ್ತಿರುತ್ತೇವೆ. ದಿಢೀರನೆ ಮಳೆ ಸುರಿಯುತ್ತದೆ. ಒಂದೆರಡು ನಿಮಿಷದಲ್ಲೇ ಪೂರ್ತಿ ನೆನೆದುಬಿಡುತ್ತೇವೆ. ಹೇಗೋ ಸಾವರಿಸಿಕೊಂಡು ಸುರಕ್ಷಿತ ಸ್ಥಳಕ್ಕೆ ತಲಪಿ ಬಟ್ಟೆ ಬದಲಿಸಿಕೊಳ್ಳುತ್ತೇವೆ. ಕೊರೆಯುವ ಚಳಿಗೆ ಬಿಸಿ ಬಿಸಿ ಕಾಫಿ ಅಥವಾ ಚಹಾ ಸೇವಿಸಿ ಹೀಟರ್ ಅಥವಾ ಒಲೆ ಎದುರು ನಿಂತು ಮೈ ಬೆಚ್ಚಗೆ ಮಾಡಿಕೊಳ್ಳುತ್ತೇವೆ.

ಒಂದೆರಡು ನಿಮಿಷ ಮಳೆಯಲ್ಲಿ ನೆನೆದ ಕೂಡಲೇ ನಾವುಗಳು ಹೊಳೆಯಲ್ಲಿ ಈಜಿ ಬಂದವರಂತೆ ಪರಿತಪಿಸುತ್ತಿರುತ್ತೇವೆ. ಆದರೆ ದಿನವಿಡೀ ಮಳೆಯಲ್ಲೇ ಮುಳುಗೇಳುವ ವಿದ್ಯುತ್ ಇಲಾಖಾ ಸಿಬ್ಬಂದಿಯ ಬಗ್ಗೆ ನಾವು ಕಿಂಚಿತ್ತೂ ಯೋಚಿಸುವದಿಲ್ಲ.

ಕೊಡಗು ಜಿಲ್ಲೆ ಮಳೆಯ ಆರ್ಭಟದಿಂದಾಗಿ ತತ್ತರಿಸಿ ಹೋಗಿದೆ. ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ ವಿದ್ಯುತ್ ಅಡಚಣೆ ಮಾಮೂಲಿ ಎಂಬಂತಾಗಿದೆ. ವಿದ್ಯುತ್ ಇಲಾಖಾ ಸಿಬ್ಬಂದಿ ಶಕ್ತಿ ಮೀರಿ ಶ್ರಮಿಸುತ್ತಿದ್ದರೂ, ಮಳೆಯ ರೌದ್ರನರ್ತನ ಹಾಗೂ ವಾಯುವಿನ ಆರ್ಭಟದಿಂದಾಗಿ ಪರಿಸ್ಥಿತಿಯನ್ನು ಹತೋಟಿಗೆ ತರಲಾಗುತ್ತಿಲ್ಲ. ಒಂದು ಕಡೆಯ ವ್ಯವಸ್ಥೆಯನ್ನು ಸರಿಪಡಿಸುತ್ತಿದ್ದಂತೆ ಮತ್ತೊಂದು ಕಡೆ ಅನಾಹುತ. ಅಲ್ಲಿಗೆ ತೆರಳಿ ಕೆಲಸ ಮಾಡುತ್ತಿದ್ದಂತೆ ಇನ್ನೊಂದು ಕಡೆಯಿಂದ ದೂರಿನ ಕರೆ. ಒಂದು ರೀತಿಯಲ್ಲಿ ವಿದ್ಯುತ್ ಇಲಾಖೆಯ ಲೈನ್‍ಮೆನ್‍ಗಳ ಸ್ಥಿತಿ ಶೋಚನೀಯ. ನಡೆದಾಡಲೂ ಸಾಧ್ಯವಾಗದ ರೀತಿಯಲ್ಲಿ ಧೋ ಎಂದು ಮಳೆ ಸುರಿಯುತ್ತಿದ್ದರೆ ಎಲ್ಲರೂ ಸುರಕ್ಷಿತ ಸ್ಥಳಗಳಲ್ಲಿ ಸೇರಿಕೊಳ್ಳುತ್ತಾರೆ. ಆದರೆ ಲೈನ್‍ಮೆನ್‍ಗಳು ಮಾತ್ರ ವಿದ್ಯುತ್ ಕಂಬಗಳ ಮೇಲೇರಿ ಕೆಲಸದಲ್ಲಿ ನಿರತರಾಗಿರುತ್ತಾರೆ. ಮರ ಬಿದ್ದರೂ, ವಿದ್ಯುತ್ ಕಂಬ ನೆಲಕ್ಕುರುಳಿದರೂ ಮಳೆಗೆ ತಲೆಯೊಡ್ಡಲಾಗದಂತಹ ಘೋರ ಪರಿಸ್ಥಿತಿ ಎದುರಾದರೂ, ಈ ಲೈನ್‍ಮೆನ್‍ಗಳು ಮಾತ್ರ ತಮ್ಮ ಕರ್ತವ್ಯದಲ್ಲಿರುತ್ತಾರೆ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿರುತ್ತಾರೆ. ಕಾರು ಜೀಪುಗಳಲ್ಲೇ ಸಂಚರಿಸಲಾಗದ ಸನ್ನಿವೇಶದಲ್ಲಿ ದ್ವಿಚಕ್ರ ವಾಹನವನ್ನೇರಿ ಏಣಿಯನ್ನು ಹೆಗಲಿಗೇರಿಸಿಕೊಂಡು ಕರ್ತವ್ಯದಲ್ಲಿ ನಿರತರಾಗುವ ಸಿಬ್ಬಂದಿಗಳನ್ನು ಕಂಡಾಗ ನಿಜಕ್ಕೂ ‘ಅಯ್ಯೋ’ ಎನಿಸುತ್ತದೆ.

ಆದರೂ ನಮ್ಮಲ್ಲಿ ಹಲವರು ವಿದ್ಯುತ್ ಅಡಚಣೆಯಾದರೆ ವಿದ್ಯುತ್ ಇಲಾಖೆಯನ್ನು ಶಪಿಸುತ್ತಾರೆ. ಲೈನ್‍ಮೆನ್‍ಗಳು ಕೂಡಲೇ ಬರಲಿಲ್ಲವೆಂದರೆ ಅವರನ್ನು ತೆಗಳುತ್ತಾರೆ. ಮಳೆ ರಭಸವಾಗಿ ಸುರಿಯುತ್ತಿದ್ದರೆ ಮನೆಯಿಂದ ಹೊರ ಬರಲು ಕೂಡ ಹಿಂಜರಿಯುವ ನಮಗೆ ಆ ಮಳೆಯನ್ನೂ ಲೆಕ್ಕಿಸದೆ ವಿದ್ಯುತ್ ಕಂಬವೇರಿ ಶ್ರಮಪಡುವ ವಿದ್ಯುತ್ ಇಲಾಖಾ ಸಿಬ್ಬಂದಿಗಳ ಸಂಕಷ್ಟದ ಬಗ್ಗೆ ಅರಿವಾಗುವದೇ ಇಲ್ಲ.

ವಿದ್ಯುತ್ ನಮ್ಮ ದೈನಂದಿನ ಬದುಕಿಗೆ ಅತ್ಯವಶ್ಯಕ ಎಂಬದು ಸತ್ಯ. ಆದರೆ ಕೊಡಗಿನಂತಹ ಪ್ರದೇಶದಲ್ಲಿ ಲಂಗುಲಗಾಮಿಲ್ಲದೆ ಸುರಿಯುವ ಮಳೆಯ ನಡುವೆ ವಿದ್ಯುತ್ ಅಡಚಣೆ ಸರ್ವೇ ಸಾಮಾನ್ಯ. ವಿದ್ಯುತ್ ಇಲಾಖಾ ಸಿಬ್ಬಂದಿಯ ಅವಿರತ ಶ್ರಮದಿಂದ ನಮ್ಮ ಮನೆಗಳಲ್ಲಿ ಬೆಳಕು ಮೂಡುತ್ತದೆ. ಎಲ್ಲ ಕಡೆಗಳಲ್ಲಿ ಒಂದೇ ಸಮಯಕ್ಕೆ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುವದಿಲ್ಲ ಎಂಬ ಅರಿವು ನಮಗಿರಬೇಕು. ವಿದ್ಯುತ್ ಸಿಬ್ಬಂದಿಗಳು ನಮ್ಮಂತೆಯೆ ಮನುಷ್ಯರು ಎಂಬದನ್ನು ನಾವು ಮನಗಂಡು ಅವರ ಸೇವೆಯನ್ನು ಸ್ಮರಿಸಬೇಕು.

ತಮ್ಮ ಮನೆ ಸಂಸಾರ ಎಲ್ಲವನ್ನು ಮರೆತು ಅಧಿಕಾರಿಗಳ ಆದೇಶದಂತೆ ಸಾರ್ವಜನಿಕರ ಮನವಿಯಂತೆ ಹಗಲು-ರಾತ್ರಿ, ಜಡಿ ಮಳೆಯನ್ನು ಲೆಕ್ಕಿಸದೇ ಕೊರೆಯುವ ಚಳಿಯ ನಡುವೆ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುವ ಲೈನ್‍ಮೆನ್‍ಗಳ ಬಗ್ಗೆ ನಾವುಗಳು ಕೃತಜ್ಞತಾ ಭಾವ ಹೊಂದದಿದ್ದರೆ ಅದು ಅಮಾನವೀಯ ಎನಿಸಿಕೊಳ್ಳುತ್ತದೆ. -ಉಜ್ವಲ್ ರಂಜಿತ್