ವೀರಾಜಪೇಟೆ, ಜು. 20: ಸರಕಾರದ ಯಾವದೇ ಇಲಾಖೆ ಇರಲಿ, ನೌಕರ ತನ್ನ ದಿನನಿತ್ಯದ ಕೆಲಸಗಳನ್ನು ನಿರ್ವಹಿಸಲು ನಿರ್ಲಕ್ಷ್ಯ ತೋರಿದಲ್ಲಿ, ಇಲ್ಲವೇ ಲಂಚ ಕೇಳಿದಲ್ಲಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ನೇರ ದೂರು ನೀಡಬಹುದು ಎಂದು ನಿಗ್ರಹ ದಳದ ಡಿವೈಎಸ್‍ಪಿ ಪೂರ್ಣಚಂದ್ರ ತೇಜಸ್ವಿ ಹೇಳಿದರು.

ವೀರಾಜಪೇಟೆಯ ಪ್ರವಾಸಿ ಮಂದಿರದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ಅಹವಾಲು ಸ್ವೀಕಾರದ ಅಂಗವಾಗಿ ಹಮ್ಮಿಕೊಂಡಿದ್ದ ಸ್ಥಳೀಯ ಸಂಘ-ಸಂಸ್ಥೆಗಳ ಜನಪ್ರತಿನಿಧಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರಕಾರಿ ನೌಕರರು ಅಧಿಕಾರಿಗಳ ವಿರುದ್ಧ ದೂರು ನೀಡಲು ಭಯಪಡಬೇಕಾಗಿಲ್ಲ. ದೂರುದಾರರ ಇಚ್ಛಾಶಕ್ತಿ ಮೇರೆಗೆ ಹೆಸರನ್ನು ಗೌಪ್ಯವಾಗಿಡಲಾಗುವದು. ಯಾವದೇ ಸರ್ಕಾರಿ ನೌಕರನ ಅಕ್ರಮ ಆಸ್ತಿ ಗಳಿಕೆಯ ಮಾಹಿತಿಯನ್ನು ನೇರವಾಗಿ ಕೊಡಬಹುದು. ಭ್ರಷ್ಟಾಚಾರವನ್ನು ಮುಕ್ತಗೊಳಿಸುವದೇ ನಿಗ್ರಹ ದಳದ ಉದ್ದೇಶವಾಗಿದ್ದು ಇದಕ್ಕೆ ಎಲ್ಲ ಸಾರ್ವಜನಿಕರು, ಸಂಘ-ಸಂಸ್ಥೆಯ ಪ್ರತಿನಿಧಿಗಳು ದಳದೊಂದಿಗೆ ಪರಸ್ಪರ ಸಹಕರಿಸಬೇಕು. ಇಲಾಖೆ ಸಿಬ್ಬಂದಿಗಳು, ಅಧಿಕಾರಿಗಳ ವಿರುದ್ಧ ದೂರು ನೀಡಲು ಯಾರು ಆತಂಕ ಪಡಬೇಕಾಗಿಲ್ಲ. ಭ್ರಷ್ಟಾಚಾರ ನಿಗ್ರಹ ದಳ ನಿಷ್ಪಕ್ಷಪಾತವಾಗಿ ಸಾರ್ವಜನಿಕವಾಗಿ ಸೇವೆ ಸಲ್ಲಿಸುತ್ತದೆ ಎಂದರು.

ನಿಗ್ರಹದಳದ ಇನ್ಸ್‍ಪೆಕ್ಟರ್ ಶೇಖರ್ ಮಾತನಾಡಿ, ಭ್ರಷ್ಟಾಚಾರ ನಿಗ್ರಹ ದಳದ ಕಾರ್ಯ, ಸಾರ್ವಜಕನಿಕವಾಗಿ ದೂರು ನೀಡುವ ವಿವರ, ಮಾಹಿತಿಯನ್ನು ತಿಳಿಸಿದರು.

ಸಭೆಯಲ್ಲಿ ನಗರ ಆಟೋ ಚಾಲಕರ ಸಂಘದ ಅಧ್ಯಕ್ಷ ಎಂ.ಎಂ. ಶಶಿಧರನ್, ಉಪಾಧ್ಯಕ್ಷ ಎ.ಆರ್. ಚಂದ್ರರಾವ್, ಖಜಾಂಚಿ ಸತೀಶ್, ಕಾರು ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಹೇಮಂತ್, ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ ಕೆ.ಎಂ. ಮಂಜು ಅಯ್ಯಪ್ಪ ಇತರರು ಹಾಜರಿದ್ದರು.