ಮಡಿಕೇರಿ, ಜು. 20: ನಿನ್ನೆ ಅಪರಾಹ್ನ ಕೊಡಗು ಜಿಲ್ಲೆಗೆ ಆಗಮಿಸುವ ಮೂಲಕ ಹಾರಂಗಿ ಜಲಾಶಯದಲ್ಲಿ ದಂಪತಿ ಸಮೇತ ಬಾಗಿನ ಅರ್ಪಿಸಿ, ರಾತ್ರಿ ಮಡಿಕೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸುವದರೊಂದಿಗೆ, ಇಂದು ಮಳೆಯ ನಡುವೆ ಜೀವನದಿ ಕಾವೇರಿಯ ಉಗಮಸ್ಥಳ ತಲಕಾವೇರಿ- ಭಾಗಮಂಡಲ ಕ್ಷೇತ್ರಗಳಲ್ಲಿ ವಿಶೇಷ ಪೂಜೆ ಬಳಿಕ ಸಂಪುಟ ಸಹೋದ್ಯೋಗಿಗಳೊಂದಿಗೆ ಮೈಸೂರಿಗೆ ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಿರ್ಗಮಿಸಿದರು.
ಮುಖ್ಯಮಂತ್ರಿಗಳ ಆಗಮನ ಬೆನ್ನಲ್ಲೇ ಅವರು ಸಂಚರಿಸಿದ ಮಾರ್ಗಗಳು ಹಾಗೂ ಭೇಟಿ ನೀಡಿದ ಕಡೆಗಳಲ್ಲಿ ವಿಶೇಷ ಭದ್ರತೆಯೊಂದಿಗೆ ಅಲ್ಲಲ್ಲಿ ಪೊಲೀಸ್ ಕಣ್ಗಾವಲು ಇರಿಸಲಾಗಿತ್ತು. ಜಿಲ್ಲಾ ಆಡಳಿತದಿಂದ ನಿನ್ನೆ ನಡೆದ ವಿಶೇಷ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಬೇಕು ಬೇಡಿಕೆಗಳನ್ನು ಸಲ್ಲಿಸಲಾಯಿತು. ಇವರೊಂದಿಗೆ ಕೊಡಗು ಜಿಲ್ಲೆಯ ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್, ವೀಣಾ ಅಚ್ಚಯ್ಯ, ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿ, ದುಬಾರೆ ರ್ಯಾಫ್ಟಿಂಗ್ ವಂಚಿತ ಗಿರಿಜನ ಕುಟುಂಬಗಳು, ಭಾಗಮಂಡಲ-ತಲಕಾವೇರಿ ದೇವಾಲಯ ಸಮಿತಿ, ಜಾತ್ಯತೀತ ಜನತಾದಳ ಭಾಗಮಂಡಲ ಸುತ್ತಮುತ್ತಲಿನ ಗ್ರಾಮ ಸಮಿತಿಗಳು, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಸಮಿತಿ, ಭಾಗಮಂಡಲ ಗ್ರಾ.ಪಂ. ಸೇರಿದಂತೆ ಹಲವು ಬೇಡಿಕೆಗಳನ್ನು ಸರಕಾರಕ್ಕೆ ಸಲ್ಲಿಸಲಾಯಿತು.
ಸ್ವತಃ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ, ಬೃಹತ್ ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಸೇರಿದಂತೆ ಸರಕಾರದ ವಿವಿಧ ಇಲಾಖೆಗಳ ರಾಜ್ಯ ಕಾರ್ಯದರ್ಶಿಗಳಾದ ರಾಜೇಶ್ ಸಿಂಗ್, ಗಂಗಾರಾಂ ಬಡೇರಿಯಾ, ಕಲ್ಪನಾ, ಲೋಕೋಪಯೋಗಿ, ಕಂದಾಯ, ವಿದ್ಯುತ್, ಕೃಷಿ ಸಹಿತ ಇತರ ಅಧಿಕಾರಿಗಳ ದಂಡು ಜಿಲ್ಲೆಯ ಸಮಸ್ಯೆಗಳನ್ನು ಆಲಿಸಿ ಸರಕಾರದ ಹಂತದಲ್ಲಿ ಬಗೆಹರಿಸುವ ಭರವಸೆ ಮೂಡಿಸಿದ್ದಾರೆ. ಕೊಡಗು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಎಲ್ಲ ಇಲಾಖೆಗಳು ಸೇರಿದಂತೆ ನಾಡಿನ ಪ್ರಾಕೃತಿಕ ವಿಕೋಪದೊಂದಿಗೆ ಪ್ರತಿ ಹಂತದ ಸಮಸ್ಯೆಗಳ ಪಟ್ಟಿಯನ್ನೇ ಸಿದ್ಧಗೊಳಿಸಿ ಸುಮಾರು 70 ಪುಟಗಳ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ.
ಆ ಬೆನ್ನಲ್ಲೇ ರಾಜ್ಯದ ಮುಖ್ಯಮಂತ್ರಿಗಳು ಕೊಡಗಿನ ಜನತೆ ಆತಂಕಗೊಳ್ಳದಂತೆ ಭರವಸೆಯ ನುಡಿಯೊಂದಿಗೆ ರೂ. 100 ಕೋಟಿ ವಿಶೇಷ ನೆರವು ಘೋಷಿಸುವ ಮೂಲಕ ಹೊಸ ಆಶಯ ಹುಟ್ಟಿಸಿ ಇಲ್ಲಿಂದ ನಿರ್ಗಮಿಸಿದ್ದಾರೆ. ಈ ಭರವಸೆಯನ್ನು ಈಡೇರಿಸುವ ದಿಸೆಯಲ್ಲಿ ಜಿಲ್ಲಾಡಳಿತ ಕೂಡ ವಿವಿಧ ಯೋಜನೆಗಳ ಅನುಷ್ಠಾನದತ್ತ ಕಾರ್ಯೋನ್ಮುಖವಾಗುವ ವಿಶ್ವಾಸವಿದ್ದು, ಮುಂದೆ ಕಾದು ನೋಡಬೇಕಿದೆ.