ಕೂಡಿಗೆ, ಜು. 20: ಕೂಡಿಗೆ ಗ್ರಾಮ ಪಂಚಾಯಿತಿಯ ವಿಶೇಷ ಸಭೆ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲ ಅಧ್ಯಕ್ಷತೆಯಲ್ಲಿ ಕೂಡಿಗೆ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಮಾಂಸದ ಮಳಿಗೆಗಳಿಗೆ ಗ್ರಾಮ ಪಂಚಾಯಿತಿ ನಿಯಮದಂತೆ ಪರವಾನಿಗೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಪರವಾನಿಗೆ ಪಡೆಯಲು ಕೋಳಿ ಮಾಂಸ ಮಾರಾಟಕ್ಕೆ ರೂ. 1.5 ಲಕ್ಷ, ಹಂದಿ ಮಾಂಸ ಮಾರಾಟಕ್ಕೆ ರೂ. 15 ಸಾವಿರ ಹಣ ನೀಡಿ, ನಿಯಮದನುಸಾರವಾಗಿ ತೀರ್ಮಾನ ಕೈಗೊಳ್ಳಲಾಯಿತು.

ಇದೇ ಸಂದರ್ಭ ಸೀಗೆಹೊಸೂರು ಗ್ರಾಮದ ಪರಿಶಿಷ್ಟ ಜಾತಿಯ ರವಿ ಎಂಬವರ ಐದು ಹಸುಗಳು ವಿಷ ಆಹಾರ ಸೇವನೆ ಮಾಡಿ ಮೃತಪಟ್ಟಿದ್ದು, ರವಿ ಅವರಿಗೆ ಪರಿಶಿಷ್ಟ ಜಾತಿಯ ಅನುದಾನದಲ್ಲಿ ಪರಿಹಾರ ನೀಡುವ ಬಗ್ಗೆ ಚರ್ಚಿಸಲಾಯಿತು. 2018-19ನೇ ಸಾಲಿನ ಕಾಮಗಾರಿಗಳ ಕ್ರಿಯಾಯೋಜನೆ ಬಗ್ಗೆ ಹಾಗೂ ಮೂಲಭೂತ ಸೌಲಭ್ಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆದವು.

ಪೇಮಲೀಲಾ ಮಾತನಾಡಿ, ಕ್ರಿಯಾಯೋಜನೆ ತಯಾರಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವದು ಎಂದರು. ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷ ಗಿರೀಶ್‍ಕುಮಾರ್ ಹಾಗೂ ಸರ್ವ ಸದಸ್ಯರು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸ್ವಾಮಿನಾಯಕ್ ಇದ್ದರು.