ಗೋಣಿಕೊಪ್ಪಲು, ಜು.20: ಜೆಡಿಎಸ್ ಪಕ್ಷ ಜಿಲ್ಲೆಯಲ್ಲಿ ಅಧಿಕಾರದಲ್ಲಿ ಇಲ್ಲದ ಸಂದರ್ಭ ಜಿಲ್ಲೆಯ ಜಿಲ್ಲಾಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡು ಜಿಲ್ಲೆಯ ಮುಖಂಡರ ಹಾಗೂ ಕಾರ್ಯಕರ್ತರೊಡಗೂಡಿ ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ರಾಜ್ಯದಲ್ಲಿ ರೈತ ಸ್ನೇಹಿ, ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ಅಧಿಕಾರ ಮಾಡಬೇಕು. ಎಂಬ ಕನಸು ನನ್ನದಾಗಿತ್ತು. ಆ ನಿಟ್ಟಿನಲ್ಲಿ ಇಂದು ರಾಜ್ಯದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅಧಿಕಾರ ಮುಂದುವರೆಸುತ್ತಿದ್ದಾರೆ.ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಕೆಲವು ನಿಷ್ಕ್ರೀಯ ಮುಖಂಡರು ಯಾವದೇ ಕೆಲಸ ಮಾಡದೇ ಇಂದು ಪಕ್ಷ ಅಧಿಕಾರಕ್ಕೆ ಬಂದ ನಂತರ ಅಧಿಕಾರದ ಲಾಲಸೆಯಿಂದ ಜಿಲ್ಲಾಧ್ಯಕ್ಷರ ವಿರುದ್ಧ ಧಿಕ್ಕಾರ ಕೂಗುವ ಮಟ್ಟಿಗೆ ಪರಿಸ್ಥಿತಿ ತಂದೊಡ್ಡಿದ್ದಾರೆ. ಜವಾಬ್ದಾರಿ ವಹಿಸಿಕೊಂಡ ನಂತರ ಪ್ರಾಮಾಣಿಕವಾಗಿ ಪಕ್ಷ ಕಟ್ಟಿದ್ದೇನೆ. ಜನಪರ ಹೋರಾಟದಲ್ಲಿ,ಬಡ ಜನತೆಯ ಕಷ್ಟದಲ್ಲಿ ಭಾಗಿಯಾಗುವ ಮೂಲಕ ಜನತೆಗೆ ನ್ಯಾಯ ಕೊಡಿಸುವ ಪ್ರಯತ್ನದಲ್ಲಿ ತೃಪ್ತಿ ನನಗಿದೆ.
ಮುಖಂಡರಿಗೆ ಪಕ್ಷದ ವರಿಷ್ಟರು ಅಧ್ಯಕ್ಷ ಸ್ಥಾನ ನೀಡಲಿ ನಾನು ಜವಾಬ್ದಾರಿಯಿಂದ ಜಿಲ್ಲಾಧ್ಯಕ್ಷನ ಸ್ಥಾನದಿಂದ ಕೆಳಗಿಳಿಯುತ್ತೇನೆ; ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರನ್ನು ಖುದ್ದು ಭೇಟಿ ಮಾಡಿ ರಾಜೀನಾಮೆ ಪತ್ರವನ್ನು ಸಲ್ಲಿಸುವದಾಗಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.
ಮೂರುವರೇ ವರ್ಷಗಳ ಹಿಂದೆ ವಿ.ಪಿ.ಶಶಿಧರ್ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಂದರ್ಭ ನನ್ನ ರಾಜಕೀಯ ಹಿನ್ನೆಲೆಯನ್ನು ಗಮನಿಸಿದ ಕುಮಾರಸ್ವಾಮಿಯವರು ಜೀವಿಜಯನವರೊಂದಿಗೆ ಚರ್ಚಿಸಿ ನನ್ನನ್ನು ಜಿಲ್ಲಾ ಕಾರ್ಯಾಧ್ಯಕ್ಷನನ್ನಾಗಿ ನೇಮಕ ಮಾಡಿದ್ದರು. ಆ ಸಂದರ್ಭದಲ್ಲೇ ಗೊಂದಲ ನಿರ್ಮಾಣವಾಗಿತ್ತು. ನಂತರ ಕಾರ್ಯಾಧ್ಯಕ್ಷನಾಗಿ, ವೀರಾಜಪೇಟೆ ಕ್ಷೇತ್ರದ ಉಸ್ತುವಾರಿ ಯಾಗಿ ಜವಾಬ್ದಾರಿಯನ್ನು ನಿಬಾಯಿಸಿದೆ. ಮುಂದಿನ ಬೆಳವಣಿಗೆಯಲ್ಲಿ ನನ್ನ ಕಾರ್ಯ ವೈಖರಿಯನ್ನು ಗಮನಿಸಿ ಹೆಚ್ಚಿನ ಜವಾಬ್ದಾರಿ ನೀಡುವ ಮೂಲಕ ಜಿಲ್ಲಾ ಅಧ್ಯಕ್ಷನಾಗಿ ನೇಮಕ ಮಾಡಲಾಯಿತು.
(ಮೊದಲ ಪುಟದಿಂದ) ಜಿಲ್ಲೆಯ ಮೂಲೆ ಮೂಲೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಮೂಲಕ ಸದಸ್ಯತ್ವ ಆಂದೋಲನ ಮೂಲಕ ಪಕ್ಷ ಕಟ್ಟಲಾಯಿತು. ಡಿವೈಎಸ್ಪಿ ಆತ್ಮಹತ್ಯೆ ಪ್ರಕರಣ, ಆನೆ ಮಾನವ ಸಂಘರ್ಷ, ಹುಲಿ ಹಾವಳಿ,ದಿಡ್ಡಳ್ಳಿ ಬಡ ಜನತೆಯ ಹೋರಾಟದಲ್ಲಿ ಉಪಾವಾಸ ಸತ್ಯಾಗ್ರಹ, ರೈತರ ಆತ್ಮಹತ್ಯೆ ವಿಷಯಕ್ಕೆ ಸಂಬಂಧಿಸಿದಂತೆ ನೂರಾರು ಕಾರ್ಯಕ್ರಮಗಳು, ವೈಯಕ್ತಿಕ ಪರಿಹಾರ ವಿತರಣೆ ನೀಡುವ ಮೂಲಕ ರಾಜ್ಯಾಧ್ಯಕ್ಷ ಕುಮಾರಸ್ವಾಮಿ,ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ರವರೊಂದಿಗೆ ನೊಂದ ರೈತರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿಸುವ ಮೂಲಕ ಧೈರ್ಯ ತುಂಬಿದ್ದೇನೆ. ಪಕ್ಷಕ್ಕೆ ಯಾವದೇ ಅಧಿಕಾರವಿಲ್ಲದ ಸಮಯದಲ್ಲಿ ಪಕ್ಷ ಕಟ್ಟುವ ಮೂಲಕ ನೊಂದವರ ಪರ ಧ್ವನಿ ಎತ್ತಿದ್ದೇನೆ. ಈ ಸಂಬಂಧ ದಾಖಲೆ ಪತ್ರಗಳು ಪಕ್ಷದ ಕಛೇರಿ ಯಲ್ಲಿ ಗಮನಿಸಬಹುದಾಗಿದೆ ಎಂದು ಹೇಳಿಕೆ ನೀಡಿದ್ದಾರೆ.