ನಾಪೋಕ್ಲು, ಜು. 20: ಮಳೆ ಗಾಳಿಯ ಅಬ್ಬರಕ್ಕೆ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿದ್ದು, ಗ್ರಾಮಗಳು ಕತ್ತಲಲ್ಲಿ ಮುಳುಗಿವೆ. ಸಮೀಪದ ಬಲ್ಲಮಾವಟಿ ಗ್ರಾಮದಲ್ಲಿ ಮಂಗಳವಾರ ರಸ್ತೆಯಂಚಿನ ಮೂರು ವಿದ್ಯುತ್ ಕಂಬಗಳು ಮುರಿದಿದ್ದು, ವಿದ್ಯುತ್ ಕಡಿತಗೊಂಡು ಬಲ್ಲಮಾವಟಿ ಹಾಗೂ ಪೇರೂರು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಸ್ಥರು ಕತ್ತಲಲ್ಲಿ ಕಳೆಯುವಂತಾಗಿದೆ. ಅಯ್ಯಂಗೇರಿ ಗ್ರಾಮ ವ್ಯಾಪ್ತಿಯಲ್ಲಿ ಕಳೆದ ಹತ್ತು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಭಾಗಮಂಡಲದಿಂದ ಅಯ್ಯಂಗೇರಿಗೆ ವಿದ್ಯುತ್ ಪೂರೈಕೆ ಆಗುತ್ತಿದ್ದು, ಗಾಳಿ ಮಳೆಯಿಂದ ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿರುವ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಐದಾರು ದಿನಗಳಿಂದ ಅಯ್ಯಂಗೇರಿ - ಭಾಗಮಂಡಲ ರಸ್ತೆ ಜಲಾವೃತವಾಗಿದ್ದು, ಬಸ್ ಸಂಚಾರ ಸ್ಥಗಿತಗೊಂಡಿತ್ತು. ಪ್ರವಾಹ ಇಳಿದಿರುವದರಿಂದ ಬಸ್ ಸಂಚಾರ ಪುನರಾರಂಭಗೊಂಡಿದೆ. ಭಾಗಮಂಡಲದಿಂದ ಅಯ್ಯಂಗೇರಿಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ಕಂಬಗಳು ಜಲಾವೃತ ಗದ್ದೆಗಳಲ್ಲಿ ಹಾದುಹೋಗಿರುವದರಿಂದ ಲೈನ್ ದುರಸ್ತಿಪಡಿಸಲು ಕಾಲಾವಕಾಶ ಬೇಕು ಎಂದು ಸೆಸ್ಕ್ ಇಲಾಖೆಯ ಸಿಬ್ಬಂದಿಗಳು ಅಸಹಾಯಕತೆ ವ್ಯಕ್ತಪಡಿಸಿದರು.

ವಿವಿಧೆಡೆಗಳಲ್ಲಿ ಹೊಸದಾಗಿ ಕಂಬಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕ ಒದಗಿಸಲು ಕ್ರಮಕೈಗೊಳ್ಳಬೇಕಿದೆ. ವಿದ್ಯುತ್ ಸಂಪರ್ಕ ಮಾತ್ರವಲ್ಲದೆ ದೂರವಾಣಿ ಸಂಪರ್ಕವೂ ಕಡಿತ ಗೊಂಡಿರುವದರಿಂದ ಪಂಚಾಯಿತಿ ಹಾಗೂ ಬ್ಯಾಂಕ್ ಕೆಲಸ ಕಾರ್ಯಗಳಿಗೆ ಅಡ್ಡಿಯುಂಟಾಗಿದೆ. - ದುಗ್ಗಳ