ಭಾಗಮಂಡಲ, ಜು. 20: ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಜಲವಿವಾದ ಸಂಬಂಧ ಕಾವೇರಿ ನ್ಯಾಯಮಂಡಳಿ ಅಥವಾ ಕಾವೇರಿ ನಿರ್ವಹಣಾ ಸಮಿತಿ ಪ್ರಾಧಿಕಾರ ನೀಡುವ ತೀರ್ಪಿಗಿಂತ, ಕಾವೇರಿ ತಾಯಿ ನೀಡುವ ತೀರ್ಪು ಅತ್ಯಂತ ದೊಡ್ಡದಾಗಿದ್ದು, ಎಲ್ಲರಿಗೆ ಸಮಾಧಾನಕರವಾದದ್ದು ಎಂದು ರಾಜ್ಯ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಇಂದು ದಂಪತಿ ಸಮೇತರಾಗಿ ಅವರು ತಲಕಾವೇರಿ - ಭಾಗಮಂಡಲ ಕ್ಷೇತ್ರಗಳ ದರ್ಶನದೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮ ದೊಂದಿಗೆ ಮಾತನಾಡುತ್ತಿದ್ದರು.
ಕಾವೇರಿ ವಿವಾದ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಪ್ರಸಕ್ತ ಕಾವೇರಿ ಮಾತೆಯ ಕೃಪೆಯಿಂದ ಹಾಗೂ ಪ್ರಕೃತಿ ಮಾತೆಯ ದಯೆಯಿಂದ ರಾಜ್ಯದೆಲ್ಲೆಡೆ ಉತ್ತಮ ಮಳೆಯೊಂದಿಗೆ ಜನತೆಗೆ ನೀರಿನ ಬವಣೆ ನೀಗಿದೆ ಎಂದರಲ್ಲದೆ, ಕರ್ನಾಟಕದ ನಾಲ್ಕೂ ಜಲಾಶಯಗಳು ಭರ್ತಿಗೊಂಡು ನಾಡಿಗೆ ಸುಭಿಕ್ಷೆ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಹೀಗಾಗಿ ನ್ಯಾಯ ಮಂಡಳಿ ನೀಡುವ ತೀರ್ಪಿಗಿಂತ ಕಾವೇರಿ ಮಾತೆಯ ತೀರ್ಪು ಎಲ್ಲರಿಗೆ ಸಮಧಾನಕರವೆಂದು ಬಣ್ಣಿಸಿದರು, ಇಲ್ಲಿ ವಿಶೇಷ ಪೂಜೆಯೊಂದಿಗೆ ರಾಜ್ಯ ಎಲ್ಲ ಜಲಾಶಯಗಳು ಮತ್ತು ತಾಯಿ ಚಾಮುಂಡೇಶ್ವರಿಗೂ ಸರಕಾರದ ಪರವಾಗಿ ಪೂಜೆ ಸಲ್ಲಿಸುವದಾಗಿ ನುಡಿದರು.
ರಾಜ್ಯದ ರೈತರು ಸೇರಿದಂತೆ ಜನತೆಯ ಕ್ಷೇಮಕ್ಕಾಗಿ ಈ ಸಂದರ್ಭ ವಿಶೇಷ ಪ್ರಾರ್ಥನೆ ಸಲ್ಲಿಸುವದಾಗಿಯೂ ಮುಖ್ಯಮಂತ್ರಿಗಳು ಮಾರ್ನುಡಿದರು.
ಮೂಢನಂಬಿಕೆ ಸರಿಯಲ್ಲ : ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಜೆ.ಹೆಚ್. ಪಟೇಲ್ ಕಾವೇರಿಗೆ ಆಗಮಿಸಿದ್ದರಿಂದ ಅಧಿಕಾರ ಕಳೆದು ಕೊಂಡರೆಂದು ಬಿಂಬಿಸಲಾಗುತ್ತಿದ್ದು, ಇಂತಹ ಮೂಢ ನಂಬಿಕೆಯಲ್ಲಿ ತಮಗೆ ವಿಶ್ವಾಸವಿಲ್ಲವೆಂದು ಅಭಿಪ್ರಾಯಪಟ್ಟರು. ಅವರ ಬಳಿಕ 19 ವರ್ಷ ಕಳೆದಿದ್ದು, ತಾನು ಆಗಮಿಸಿದ್ದೇನೆ. ಮೂಢ ನಂಬಿಕೆ ನಮ್ಮ ಸೃಷ್ಟಿಯಾಗಿದ್ದು, ದೇವರ ಅನುಗ್ರಹದಿಂದಷ್ಟೇ ಅಧಿಕಾರ ಸಹಿತ ಎಲ್ಲವೂ ಫಲಿಸಲಿದೆ ಎಂಬ ನಂಬಿಕೆ ತಮ್ಮದೆಂದು ಒತ್ತಿ ಹೇಳಿದರು.
ಉಡುಪಿ ಶಿರೂರು ಮಠಾಧೀಶರ ಸಾವಿನ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಆ ಬಗ್ಗೆ ತನಿಖೆ ನಡೆಯುತ್ತಿದ್ದು, ತಾವೇನು ಹೇಳುವದಿಲ್ಲವೆಂದು ಮಾತಿಗೆ ತೆರೆ ಎಳೆದರು.
(ಮೊದಲ ಪುಟದಿಂದ)
ಧರ್ಮ ಕಾಪಾಡಲಿದೆ : ಕರ್ನಾಟಕದ ಬೃಹತ್ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಗಳೊಂದಿಗೆ ಪೂಜೆಯಲ್ಲಿ ಪಾಲ್ಗೊಂಡು ಬಳಿಕ ಮಾತನಾಡುತ್ತಾ, ಕಾವೇರಿ ಮಾತೆಯ ಅನುಗ್ರಹ ಬೇಡಲು ಇಲ್ಲಿಗೆ ಬಂದಿದ್ದು, ಈ ವರ್ಷ ಉತ್ತಮ ಮಳೆಯೊಂದಿಗೆ ರಾಜ್ಯದ ಎಲ್ಲ ಜಲಾಶಯಗಳು ಭರ್ತಿಗೊಂಡು ಮುಖ್ಯಮಂತ್ರಿಗಳು ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದ್ದಾರೆ ಎಂದು ಉಲ್ಲೇಖಿಸಿದರು.
ಯಾರು ಧರ್ಮವನ್ನು ಕಾಪಾಡುತ್ತಾರೋ ಅವರನ್ನು ಧರ್ಮವು ರಕ್ಷಿಸಲಿದೆ ಎಂದ ಸಚಿವರು, ನಾಡಿಗೆ ಸುಭಿಕ್ಷೆಯೊಂದಿಗೆ ಎಲ್ಲರ ಒಳಿತಿಗಾಗಿ ಈ ವೇಳೆ ಪ್ರಾರ್ಥಿಸಿಕೊಳ್ಳುತ್ತಾ, ಮುಂದೆ ಮೈಸೂರಿನಲ್ಲಿ ಶ್ರೀ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲು ಮುಖ್ಯಮಂತ್ರಿ ಗಳೊಂದಿಗೆ ಜಲಸಂಪನ್ಮೂಲ ಸಚಿವರಾಗಿ ಪಾಲ್ಗೊಳ್ಳುತ್ತಿರುವದಾಗಿ ವಿವರಿಸಿದರು. ಜನತೆಯ ಸಂಕಷ್ಟ, ದುಃಖ ದಾರಿದ್ರ್ಯವನ್ನು ದೇವಿ ನಿವಾರಿಸಲೆಂದು ಅವರು ಆಶಿಸಿದರು.
ಗಣ್ಯರ ಪಾಲ್ಗೊಳ್ಳುವಿಕೆ : ಇಂದು ಮುಖ್ಯಮಂತ್ರಿ ದಂಪತಿಯೊಂದಿಗೆ ರಾಜ್ಯ ಜಲಸಂಪನ್ಮೂಲ ಸಚಿವರಲ್ಲದೆ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಶಾಸಕರುಗಳಾದ ಕೆ.ಜಿ. ಬೋಪಯ್ಯ, ವೀಣಾ ಅಚ್ಚಯ್ಯ, ಪಿರಿಯಾಪಟ್ಟಣ ಶಾಸಕ ಮಹದೇವ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಸದಸ್ಯೆ ಕೆ.ಪಿ. ಚಂದ್ರಕಲಾ, ಮಾಜೀ ಎಂ.ಎಲ್.ಸಿ. ಅರುಣ್ ಮಾಚಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಹೊಸೂರು ಸತೀಶ್ ಜೋಯಪ್ಪ, ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಸದಸ್ಯರುಗಳಾದ ಡಾ. ಕಾವೇರಪ್ಪ, ಕೆದಂಬಾಡಿ ರಮೇಶ್, ಮೀನಾಕ್ಷಿ, ಸುಭಾಷ್ ಸಹಿತ ವಿವಿಧ ಪಕ್ಷಗಳ ಪದಾಧಿಕಾರಿಗಳು ಇದ್ದರು.
ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಸರಕಾರದ ಉಸ್ತುವಾರಿ ಕಾರ್ಯದರ್ಶಿ ಕಲ್ಪನಾ, ಕರ್ನಾಟಕ ದಕ್ಷಿಣ ವಲಯ ಐ.ಜಿ. ಸೌಮೇಂದ್ರ ಮುಖರ್ಜಿ, ಎಸ್ಪಿ ಸುಮನ್ ಪಣ್ಣೇಕರ್, ದೇವಾಲಯ ತಕ್ಕರಾದ ಕೋಡಿ ಮೋಟಯ್ಯ, ಬಳ್ಳಡ್ಕ ಅಪ್ಪಾಜಿ, ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್, ಪಾರುಪತ್ತೆಗಾರ ಪೊನ್ನಣ್ಣ ಮುಂತಾದವರಿದ್ದರು. ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಹಿತ ಗಣ್ಯರನ್ನು ಮಂಗಳವಾದ್ಯದೊಂದಿಗೆ ಬರಮಾಡಿ ಕೊಳ್ಳಲಾಯಿತು. ಉಭಯ ಕ್ಷೇತ್ರಗಳಲ್ಲಿ ವಿಶೇಷ ಪೂಜೆಯೊಂದಿಗೆ ಅನಿತಾ ಕುಮಾರಸ್ವಾಮಿ ಕಾವೇರಿ ಮಾತೆಗೆ ವಸ್ತ್ರ ಸಹಿತ ಮಂಗಲದ್ರವ್ಯ ಸಮರ್ಪಿಸಿ ಭಕ್ತಿ ನಮನ ಸಲ್ಲಿಸಿದರು. ಅರ್ಚಕರುಗಳಾದ ರವಿಭಟ್, ನಾರಾಯಣಾಚಾರ್, ಪ್ರಶಾಂತ್ ಆಚಾರ್, ದೇವತಾ ಕೈಂಕರ್ಯ ನೆರವೇರಿಸಿದರು. ದೇವಾಲಯ ಸಮಿತಿಯಿಂದ ಮುಖ್ಯಮಂತ್ರಿ ದಂಪತಿ ಹಾಗೂ ಸಚಿವರುಗಳನ್ನು ಗೌರವಿಸಲಾಯಿತು. ಜಿಲ್ಲಾಧಿಕಾರಿ ಶ್ರೀವಿದ್ಯಾ ಕುಮಾರಸ್ವಾಮಿ ದಂಪತಿಗೆ ಸ್ಮರಣಿಕೆ ನೀಡಿದರು. ಕ್ಷೇತ್ರದ ಅಭಿವೃದ್ಧಿ ಸಂಬಂಧ ಅಧ್ಯಕ್ಷರು ಮನವಿ ಸಲ್ಲಿಸಿದರು. ಧಾರಾಕಾರ ಮಳೆಯ ನಡುವೆ ಕ್ಷೇತ್ರ ದರ್ಶನದೊಂದಿಗೆ ಪೂಜೆ ನೆರವೇರಿಸಲಾಯಿತು. ಡಿವೈಎಸ್ಪಿ ಕೆ.ಎಸ್. ಸುಂದರ್‍ರಾಜ್ ಹಾಗೂ ಪೊಲೀಸ್ ತಂಡ ವಿಶೇಷ ಭದ್ರತೆ ಕೈಗೊಂಡಿದ್ದು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.