ಮಡಿಕೇರಿ, ಜು. 20: ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಕಂಡುಬಾರದಿದ್ದ ರೀತಿಯಲ್ಲಿ ಅಬ್ಬರಿಸಿ ಜಿಲ್ಲೆಯಾದ್ಯಂತ ಆತಂಕ ಸೃಷ್ಟಿಯೊಂದಿಗೆ ವ್ಯಾಪಕ ಹಾನಿಯನ್ನುಂಟುಮಾಡಿದ್ದ ಪ್ರಸಕ್ತ ಸಾಲಿನ ಪುನರ್ವಸು ಮಳೆ ನಕ್ಷತ್ರದ ಮಳೆ ಪೂರ್ಣಗೊಂಡಿದ್ದು, ತಾ. 20 ರಿಂದ ಪುಷ್ಯಮಳೆ ಆರಂಭಗೊಂಡಿದೆ. ಇಡೀ ಜಿಲ್ಲೆಯನ್ನು ಅಲ್ಲೋಲ- ಕಲ್ಲೋಲಗೊಳಿಸುವದರೊಂದಿಗೆ ಶಾಲಾ - ಕಾಲೇಜುಗಳಿಗೂ ಹಲವು ದಿನಗಳ ಕಾಲ ರಜೆ ನೀಡಬೇಕಾದ ಅನಿವಾರ್ಯತೆ ಸೃಷ್ಟಿಸಿದ್ದ ಪುನರ್ವಸು ಮಳೆ ನಕ್ಷತ್ರದ ಮಳೆ ಪೂರ್ಣ ಗೊಳ್ಳುತ್ತಿದೆಯಾದರೂ ಮುಂಗಾರಿನ ಛಾಯೆ ಇನ್ನೂ ಅದೇ ರೀತಿಯಲ್ಲೇ ಮುಂದುವರಿದಿದೆ. ಕಳೆದ ಕೆಲವು ದಿನಗಳ ಹಿಂದೆ ಕಂಡುಬಂದಿದ್ದ ಮಳೆರಾಯನ ಅಬ್ಬರ ಹಾಗೂ ಗಾಳಿಯ ಆರ್ಭಟ ತುಸು ಕಡಿಮೆ ಯಾಗಿದ್ದರೂ ಜನತೆಯ ಆತಂಕ ಇನ್ನೂ ಮರೆಯಾಗಿಲ್ಲ.
ವಾಡಿಕೆಯಂತೆ ಪುಷ್ಯಮಳೆ ನಕ್ಷತ್ರದಲ್ಲೂ ಕೊಡಗು ಜಿಲ್ಲೆ ಬಿರುಮಳೆಯನ್ನು ಎದುರಿಸುವದು ಜಿಲ್ಲೆಯ ಜನತೆಯಲ್ಲಿ ಅರಿವಿದೆ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ವಾತಾವರಣದ ಏರು- ಪೇರಿನಿಂದಾಗಿ ಯಾವದನ್ನೂ ಖಚಿತವಾಗಿ ಹೇಳಲಾಗದು ಎಂಬದು ಅನುಭವಸ್ತರ ಮಾತು. ಹಿಂದಿನ ವರ್ಷಗಳ ಮಳೆಗಾಲಕ್ಕೆ ತುಲನೆ ಮಾಡಿದಲ್ಲಿ ಈಗಾಗಲೇ ಆರಂಭಗೊಂಡಿರುವ ಕಕ್ಕಡಮಾಸ (ಆಟಿ)ದ ಮಳೆಗಾಲ ಮುಂದಿನ ದಿನಗಳಲ್ಲಿ ಯಾವ ರೀತಿ ತನ್ನ ಪ್ರತಾಪ ತೋರಲಿದೆ ಎಂದು ಜನತೆ ಕಾಯುವಂತಾಗಿದೆ. ತಾ. 20ರ ಶುಕ್ರವಾರದಂದು ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಹಲವೆಡೆಗಳಲ್ಲಿ ಬಿರುಸಿನ ಮಳೆಯಾಗಿದೆ. ಮಾತ್ರವಲ್ಲದೆ, ಶೀತದ ಪರಿಸ್ಥಿತಿಯೂ ಈ ಹಿಂದಿನಂತೆಯೇ ಗೋಚರಿಸಿದೆ.
ರಸ್ತೆಯಲ್ಲಿ ಭೂಕುಸಿತ
ನಾಪೆÇೀಕ್ಲು : ನಾಪೆÉÇೀಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೋನಕೆರೆ - ಕೂರುಳಿ ಸಂಪರ್ಕ ರಸ್ತೆಯ ಚೀಯಕಪೂವಂಡ ಸತೀಶ್ ಅವರ ಮನೆಯ ಬಳಿ ಡಾಮರು ರಸ್ತೆಯ ಮಧ್ಯ ಭಾಗದಲ್ಲಿ ಭೂಕುಸಿತ ಉಂಟಾಗಿ ಗುಂಡಿ ನಿರ್ಮಾಣ ಗೊಂಡಿದೆ.
ಇದರಿಂದ ಈ ಭಾಗದಲ್ಲಿ ಸಂಚರಿಸುವ ವಾಹನಗಳಿಗೆ ತಡೆ ಉಂಟಾಗಿದ್ದು,
(ಮೊದಲ ಪುಟದಿಂದ) ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಸ್ಯೆಯಾಗಿದೆ. ಸಂಬಂಧಪಟ್ಟವರು ಕೂಡಲೇ ಗುಂಡಿ ಮುಚ್ಚಿ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಈ ವ್ಯಾಪ್ತಿಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರವಾಹ ಪರಿಸ್ಥಿತಿ : ಕೃಷಿ ಫಸಲು ನಾಶ
ಕುಶಾಲನಗರ : ಕುಶಾಲನಗರ ಸಮೀಪ ಆವರ್ತಿ ಗ್ರಾಮದಲ್ಲಿ ಇತ್ತೀಚಿನ ಭಾರೀ ಮಳೆಗೆ ಕಾಫಿ, ಕರಿಮೆಣಸು, ಅಡಿಕೆ ಸೇರಿದಂತೆ ಭಾರೀ ಪ್ರಮಾಣದ ಕೃಷಿ ಫಸಲುಗಳು ನದಿ ನೀರಿನಲ್ಲಿ ಮುಳುಗಿ ನಾಶಗೊಂಡ ಘಟನೆ ವರದಿಯಾಗಿದೆ. ಆವರ್ತಿ ಬಳಿಯ ಕೃಷಿಕರಾದ ಜೆಮ್ಸಿ ಪೊನ್ನಪ್ಪ, ಕೀರ್ತನ ಪೊನ್ನಪ್ಪ ಅವರುಗಳಿಗೆ ಸೇರಿದ 35 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಾಫಿ ಗಿಡಗಳು, ಕರಿಮೆಣಸು ಬಳ್ಳಿಗಳು ಹಾಗೂ ಇತರೆ ಗಿಡಗಳು 10 ದಿನಗಳ ಕಾಲ ಕಾವೇರಿ ನದಿಯ ಹಿನ್ನೀರಿನಲ್ಲಿ ಮುಳುಗಡೆಯಾಗಿ ಸಂಪೂರ್ಣ ನಾಶಗೊಂಡಿರುವ ದೃಶ್ಯ ಕಂಡುಬಂದಿದೆ.
ಅಂದಾಜು 5 ರಿಂದ 10 ಎಕರೆ ಜಾಗದಲ್ಲಿ ಬೆಳೆಯುತ್ತಿದ್ದ ಗಿಡಗಳು ಕೊಳೆತು ಬೀಳುವದರೊಂದಿಗೆ ಲಕ್ಷಾಂತರ ರೂ.ಗಳ ನಷ್ಟವುಂಟಾಗಿದೆ ಎಂದು ಜೆಮ್ಸಿ ಪೊನ್ನಪ್ಪ ಸ್ಥಳಕ್ಕೆ ತೆರಳಿದ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಕಂದಾಯ ಇಲಾಖೆಗೆ ನಷ್ಟ ಪರಿಹಾರ ಭರಿಸಿಕೊಡುವಂತೆ ಮನವಿ ಮಾಡಲಾಗುವದು ಎಂದು ಅವರು ತಿಳಿಸಿದ್ದಾರೆ.
ಲಕ್ಷ್ಮಣ ತೀರ್ಥ ಪ್ರವಾಹದಿಂದ ಹಾನಿ
ಗೋಣಿಕೊಪ್ಪ ವರದಿ : ಜಿಲ್ಲೆಯಲ್ಲಿ ಈ ಬಾರಿ ಸುರಿದ ಮಳೆಯಿಂದ ಸಾಕಷ್ಟು ಆಸ್ತಿ-ಪಾಸ್ತಿ ಹಾನಿಯಾಗಿದ್ದು, ಲಕ್ಷ್ಮಣ ತೀರ್ಥ ನದಿಯ ಪ್ರವಾಹದಿಂದ ಬಾಳೆಲೆ, ನಿಟ್ಟೂರು, ಕಾನೂರು ಭಾಗದಲ್ಲಿ ಭತ್ತದ ಸಸಿ ಮಡಿಗಳು ನೀರಿನಲ್ಲಿ ಮುಳುಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಭತ್ತದ ಕೃಷಿಗೆ ತಯಾರಾಗಿದ್ದ ರೈತರಿಗೆ ಇದರಿಂದ ಅಪಾರ ಪ್ರಮಾಣದ ನಷ್ಟ ಸಂಭವಿಸಿದ್ದು, ವೀರಾಜಪೇಟೆ ಕೃಷಿ ಇಲಾಖೆ ಸಹಾಯ ನಿರ್ದೇಶಕಿ ಎ.ಜೆ. ರೀನಾ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆಯಿಂದಾಗಿ ಸಾಕಷ್ಟು ರೈತರು ನಷ್ಟ ಅನುಭವಿಸುತ್ತಿದ್ದು, ಭತ್ತದ ಕೃಷಿಯ ಸಂದರ್ಭದಲ್ಲಿ ಸಸಿ ಮಡಿಗಳು ನೀರಿನಲ್ಲಿ ಮುಳುಗಿ ಅಪಾರ ಪ್ರಮಾಣದ ನಷ್ಟವಾಗಿದೆ. ನಷ್ಟದ ಮಾಹಿತಿಯನ್ನು ಇಲಾಖೆಗೆ ಕೃಷಿಕರು ನೀಡಿದರೆ, ಜಿಲ್ಲಾಡಳಿತ ಮಾಹಿತಿ ನೀಡಲಾಗುವದು. ಪರಿಹಾರ ನೀಡಲಾಗುವದು. ರೈತರು ಆಯಾಯ ಹೋಬಳಿ ರೈತ ಸಂಪರ್ಕ ಕೇಂದ್ರ ಹಾಗೂ ಕಂದಾಯ ಇಲಾಖೆಯಲ್ಲಿ ಅರ್ಜಿಯನ್ನು ಸಲ್ಲಿಸುವಂತೆ ತಿಳಿಸಿದರು.