ಮಡಿಕೇರಿ, ಜು.20: ಅಧಿಕಾರಿಗಳು ಸ್ಥಳೀಯ ಸಮಸ್ಯೆಗಳನ್ನು ಅರಿತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ಮಾತ್ರ ಸರಕಾರ ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದು, ತಪ್ಪಿದಲ್ಲಿ ಶಿಸ್ತು ಕ್ರಮ ಜರುಗಿಸಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಳೆಹಾನಿ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ನಿನ್ನೆ ರಾತ್ರಿ ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳ ಮಾಹಿತಿ ಪಡೆದು ಅವರು ಮಾತನಾಡಿದರು.
ಅಧಿಕಾರಿಗಳು ಶ್ರದ್ಧೆಯಿಂದ ಕೆಲಸ ಮಾಡಿದ್ದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಸೇವೆ ನೀಡಲು ಸಾಧ್ಯವಿದ್ದು, ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದ ಅವರು, ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಸುಮ್ಮನಿರಲು ಅಸಾಧ್ಯವೆಂದು ಸೂಚ್ಯವಾಗಿ ಎಚ್ಚರಿಸಿದರು.
ಮಳೆಯಿಂದ ಹಾನಿಯಾಗಿರುವ ರಸ್ತೆ, ಸೇತುವೆ, ವಾಸದ ಮನೆ, ಬೆಳೆಹಾನಿ, ವಿದ್ಯುತ್, ಹಾಗೆಯೇ ಸರ್ಕಾರಿ ಕಟ್ಟಡಗಳ ನಷ್ಟಕ್ಕೆ ಸಂಬಂಧಿಸಿ ದಂತೆ, ಈಗಾಗಲೇ ಸುಮಾರು 329 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜು ಮಾಡಲಾಗಿದೆ. ಪರಿಹಾರ ಸಂಬಂಧ ಅಗತ್ಯ ಹಣ ಬಿಡುಗಡೆ ಮಾಡಲಾಗುವದು. ರಸ್ತೆ, ಸೇತುವೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಳೆಯಿಂದ ಹಾನಿಯಾಗಿರುವದನ್ನು ಸರಿಪಡಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡು ಸರ್ಕಾರಕ್ಕೆ ಕಳುಹಿಸಿಕೊಡುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಜೂನ್, ಜುಲೈ ಎರಡು ತಿಂಗಳು ಕೃಷಿ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಿಗೆ ತೆರಳಿ ರೈತರಿಗೆ ಸಲಹೆ, ಮಾರ್ಗದರ್ಶನ ಹಾಗೂ ನೆರವು ನೀಡಬೇಕು. ಈ ಎರಡು ತಿಂಗಳುಗಳನ್ನು ಗಂಭೀರವಾಗಿ ಪರಿಗಣಿಸಿ ಕರ್ತವ್ಯ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ನೆನಪಿಸಿದ ಅವರು, ಹಳ್ಳಿಗಳಿಗೆ ತೆರಳಿ ಜನರ ಸಂಕಷ್ಟ ಆಲಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮಳೆಯಿಂದ
(ಮೊದಲ ಪುಟದಿಂದ) ಹಾನಿಯಾಗಿರುವ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲು ಹೆಚ್ಚಿನ ನಿಬಂಧನೆಗಳನ್ನು ಹಾಕದೆ, ಮನೆ ನಿರ್ಮಾಣ ಮಾಡಿಕೊಡಬೇಕು ಎಂದು ಅವರು ಸಲಹೆ ಮಾಡಿದರು.
ಕಾಫಿ ಬೆಳೆಗಾರರಿಗೆ ಪರಿಹಾರ ವಿತರಣೆ ಮಾಡಬೇಕು. ಮಳೆಯಿಂದಾಗಿರುವ ನಷ್ಟ ಸಂಬಂಧ ಕಾಫಿ ಬೆಳೆಗಾರರನ್ನು ರಕ್ಷಣೆ ಮಾಡಬೇಕು. ಪರಿಸರ ಸಂರಕ್ಷಣೆ ಯು ಸಹ ಮಾಡಬೇಕು ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಇದೇ ಸಂದರ್ಭ ತಿಳಿಸಿದರು.
ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ ಮಳೆಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ತಹಶೀಲ್ದಾರರು ನೇರವಾಗಿ ಪರಿಹಾರ ವಿತರಣೆ ಮಾಡುವಂತಾಗಬೇಕು. ಉಪ ವಿಭಾಗಾಧಿಕಾರಿಯವರ ನೇತೃತ್ವದಲ್ಲಿ ಸಮಿತಿ ಅಗತ್ಯವಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸುತ್ತಾ, ಅಧಿಕ ಮಳೆಯಿಂದ ನಾಟಿಗದ್ದೆಗಳು ಮುಳುಗಡೆಯಾಗಿರುವ ಹಮ್ಮಿಯಾಲ - ಮುಟ್ಲುವಿಗೆ ಅಧಿಕಾರಿಗಳು ತೆರಳಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಶಾಸಕ ಅಪ್ಪಚ್ಚುರಂಜನ್, ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ದನಿಗೂಡಿಸಿದರು.
ಇದಕ್ಕೆ ಧ್ವನಿಗೂಡಿಸಿದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾ ರರು ಶೀಘ್ರದಲ್ಲಿ ಮ¼ Éಯಿಂದ ಹಾನಿಯಾಗಿರುವ ಮನೆಗಳ ಕುಟುಂಬದವರಿಗೆ ಪರಿಹಾರ ವಿತರಣೆ ಮಾಡಬೇಕು. ಅಂಗನವಾಡಿ, ಶಾಲಾ ಕಟ್ಟಡಗಳ ರಿಪೇರಿಗೆ ಹಣ ಬಿಡುಗಡೆ ಮಾಡಲಾಗುವದು. ಈ ಸಂಬಂಧ ಪಟ್ಟಿಯನ್ನು ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಇದೇ ವೇಳೆ ಸೂಚನೆ ನೀಡಿದರು.
ಪ್ರಥಮ ದರ್ಜೆ ಕಾಲೇಜುಗಳು, ಪದವಿ ಪೂರ್ವ ಕಾಲೇಜುಗಳು ಹಾಗೂ ಪ್ರೌಢಶಾಲೆಗಳಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಿದೆ. ಆ ನಿಟ್ಟಿನಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೂ ಅನುಮತಿ ನೀಡಲಾಗಿದೆ ಎಂದು ಸಚಿವ ರೇವಣ್ಣ ನೆನಪಿಸಿದರು. ಜಿಲ್ಲಾ ಪಂಚಾಯತ್ ನೂತನ ಭವನ ನಿರ್ಮಾಣ ಕಾಮಗಾರಿಯನ್ನು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣ ಗೊಳಿಸುವಂತೆ ಸಲಹೆ ಮಾಡಿದ ಅವರು, ಕಾಮಗಾರಿ ವಿಳಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಕೊಡವ ಹೆರಿಟೇಜ್ ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಮುಖ್ಯಮಂತ್ರಿ ಗಮನಕ್ಕೆ ತಂದರಲ್ಲದೆ, ಕೆಲಸವಾಗದಿದ್ದರೂ ರೂ. 86 ಲಕ್ಷ ಹಣ ಬಿಡುಗಡೆ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಕೊಡವ ಹೆರಿಟೇಜ್ ಕಟ್ಟಡ ಸಂಬಂಧ ಗಂಭೀರವಾಗಿ ಪರಿಗಣಿಸ ಲಾಗುವದು, ಈ ಸಂಬಂಧ ವರದಿ ಕಳುಹಿಸಿ ಕೊಡುವಂತೆ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರರಿಗೆ ಸೂಚನೆ ನೀಡಿದರು.
ಮೈಸೂರು-ಮಡಿಕೇರಿ-ಮಾಣಿ ಮಾರ್ಗದ ರಸ್ತೆ ಕಾಮಗಾರಿಗೆ ಕ್ರಿಯಾ ಯೋಜನೆ ರೂಪಿಸಿ ಸರಕಾರಕ್ಕೆ ತುರ್ತು ಸಲ್ಲಿಸಿ ಟೆಂಡರ್ ಆಹ್ವಾನಿಸುವಂತೆ ಲೋಕೋ¥ Àಯೋಗಿ ಎಂಜಿನಿಯರ್ ಗಳಿಗೆ ಎಚ್.ಡಿ.ರೇವಣ್ಣ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೆ.ಜಿ.ಬೋಪಯ್ಯ ಕೊಡ್ಲಿಪೇಟೆ-ಮಾಕುಟ್ಟ ರಸ್ತೆ ನಿರ್ಮಾಣ ಕೈಗೆತ್ತಿಕೊಳ್ಳಬೇಕಿದೆ. ಹಾಗೆಯೇ ಪಾಣತ್ತೂರು-ಕರಿಕೆ-ಭಾಗಮಂಡಲ ರಸ್ತೆ ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕು ಎಂದು ಮುಖ್ಯಮಂತ್ರಿ ಅವರ ಗಮನಕ್ಕೆ ತಂದರು.
ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಭತ್ತದ ಸಸಿ ಮಡಿ ನಾಶವಾಗಿದ್ದು, ಇದರಿಂದ ಭತ್ತದ ಬೀಜವನ್ನು ಉಚಿತವಾಗಿ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಸಂದರ್ಭ ಮಾತನಾಡಿದ ಎಚ್.ಡಿ.ರೇವಣ್ಣ ತಹಶೀಲ್ದಾರರು, ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಹಾನಿಗೆ ಸಂಬಂಧಿಸಿದಂತೆ ಜಂಟಿ ಪರಿಶೀಲನೆ ಮಾಡಬೇಕು ಎಂದು ಸೂಚನೆ ನೀಡಿದರು. ಕೆ.ಜಿ. ಬೋಪಯ್ಯ ಮಾತನಾಡಿ ಮಡಿಕೇರಿ ತಾಲೂಕಿನಲ್ಲಿ ಹೆಚ್ಚು ಮಳೆಯಾಗು ತ್ತಿದೆ ಹೀಗಿದ್ದೂ ಕಾಫಿ ಬೆಳೆ ನಷ್ಟವಾಗಿಲ್ಲ ಎಂದು ವರದಿ ನೀಡಿರುವದಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.
ಇದಕ್ಕೆ ಧ್ವನಿಗೂಡಿಸಿದ ಎಚ್.ಡಿ.ರೇವಣ್ಣ ಕಾಫಿ ಬೋರ್ಡ್ ನಲ್ಲಿ ಐಎಎಸ್ ಅಧಿಕಾರಿಗಳು ಕಾರ್ಯದರ್ಶಿ ಯಾಗಿದ್ದು, ಇವರು ಮೇಲುಸ್ತುವಾರಿ ನೋಡಿಕೊಳ್ಳಬೇಕು. ಆದರೆ ಮುಖ್ಯಮಂತ್ರಿ ಅವರು ಆಗಮಿಸಿರುವ ಸಭೆಗೆ ಬಂದಿಲ್ಲ. ಒಂದು ಅರ್ಜಿಯೂ ಬಂದಿಲ್ಲ ಎಂದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ತೋಟಗಳಲ್ಲಿ ಮರಗಳು ಉರುಳಿ ಬೀಳುತ್ತಿವೆ. ಇಂತಹ ಮರಗಳನ್ನು ಮಾಲೀಕರು ಬಳಸಿಕೊಳ್ಳುವಂತಾU Àಬೇಕು ಎಂದು ಕೆ.ಜಿ.ಬೋಪಯ್ಯ ಸಿಎಂ ಅವರ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಎಚ್.ಡಿ.ರೇವಣ್ಣ ಅವರು ಈಗಾಗಲೇ ದಾಖಲೆ ಇರುವ ಭೂಮಿಯ ಮಾಲೀಕರು ಅವರವರ ತೋಟದಲ್ಲಿ ಮಳೆಗೆ ಬಿದ್ದಿರುವ ಮರಗಳನ್ನು ಬಳಸಿಕೊಳ್ಳಲು ಅವಕಾಶ ನೀಡಬೇಕು. ಆ ನಿಟ್ಟಿನಲ್ಲಿ ನಿಯಮಗಳನ್ನು ಪಾಲಿಸಬೇಕಿದೆ ಎಂದು ಸಲಹೆ ಮಾಡಿದರು. ಅರಣ್ಯ ಇಲಾಖೆ ಅಧಿಕಾರಿಗಳು ಜನ ಸಾಮಾನ್ಯರಿಗೆ ತೊಂದರೆ ನೀಡಬಾರದು. ರಸ್ತೆ ಮಾಡಲು ಬಿಡುವುದಿಲ್ಲ ಎಂದರೆ ಹೇಗೆ ಎಂದು ಎಚ್.ಡಿ.ರೇವಣ್ಣ ಅವರು ಪ್ರಶ್ನಿಸಿದರು. ಕಡಮಕಲ್ಲು-ಸುಬ್ರಹ್ಮಣ್ಯ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡುತ್ತಿಲ್ಲ. ನಮ್ಮ ವಿರುದ್ದ (ಶಾಸಕರ) ಸುಪ್ರಿಂಕೋರ್ಟ್‍ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಾವು ಜೈಲಿಗೆ ಹೋಗಲು ಸಿದ್ಧ ರಸ್ತೆ ಆಗಲಿ ಎಂದು ಕೆ.ಜಿ.ಬೋಪಯ್ಯ ಆಗ್ರಹಿಸಿದರು.
ಕಡಮಕಲ್ಲು ಸುಬ್ರಹ್ಮಣ್ಯ ರಸ್ತೆ ನಿರ್ಮಾಣಕ್ಕಾಗಿ ಅರಣ್ಯ ಇಲಾಖೆಗೆ ಪ್ರತ್ಯೇಕವಾಗಿ ಪುಷ್ಪಗಿರಿ ಪಕ್ಕದ ಹಮ್ಮಿಯಾಲದಲ್ಲಿ 47 ಎಕರೆ ಭೂಮಿಯನ್ನು ನೀಡಿದ್ದೇವೆ. ಆದರೂ ಸಹ ರಸ್ತೆ ನಿರ್ಮಾಣ ಮಾಡದೆ ಮೀನಮೇಷ ಎಣಿಸುತ್ತಿ ದ್ದಾರೆ ಎಂದು ಅವರು ಕಿಡಿಕಾರಿದರು. ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಎಚ್.ಡಿ. ಕುಮಾರಸ್ವಾಮಿ ಅರಣ್ಯ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕೆಲವು ಸಮಸ್ಯೆಗಳನ್ನು ಸರಿಪಡಿಸಿ ಕೊಂಡು ಕಾರ್ಯನಿರ್ವ ಹಿಸಬೇಕು ಎಂದು ತಿಳಿ ಹೇಳಿದರು.
ಅರಣ್ಯ ಇಲಾಖೆಯಿಂದ ಅಳವಡಿಸಿರುವ ಸೋಲಾರ್ ಬೇಲಿ ಕಳಪೆಯಾಗಿದೆ ಎಂದು ಶಾಸಕರು ಗಳಾದ ಕೆ.ಜಿ.ಬೋಪಯ್ಯ, ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ ಅಸಮಾಧಾನ ವ್ಯಕ್ತಪಡಿಸುತ್ತಾ ಈ ಬಗ್ಗೆ ತನಿಖೆ ಆಗಬೇಕೆಂದು ಅಲ್ಲದೆ, ಎಂ.ಪಿ. ಅಪ್ಪಚ್ಚುರಂಜನ್ ಜಿಲ್ಲೆಯ ಕಾಫಿ ತೋಟಗಳಲ್ಲಿ 200 ಆನೆಗಳು ಬೀಡು ಬಿಟ್ಟಿವೆ, ಆದರೆ ಸೋಲಾರ್ ಬೇಲಿ ಅಳವಡಿಸಿರುವದಾದರೂ ಯಾಕೆ ಎಂದು ಪ್ರಶ್ನಿಸಿದರು.
ಕೆ.ಜಿ.ಬೋಪಯ್ಯ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಕೇಂದ್ರದಿಂದ ಸಾಕಷ್ಟು ಅನುದಾನ ಬಿಡುಗಡೆ ಯಾಗುತ್ತಿದೆ. ಆದರೆ ಸಮಪರ್ಕ ವಾಗಿ ಅನುಷ್ಠಾನ ವಾಗುತ್ತಿಲ್ಲ ಟೀಕಿಸಿದರು. ಪೆರುಂಬಾಡಿ ಬಳಿ ಕಳೆದ ವರ್ಷ 25 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ. ಇದುವರೆಗೆ ಹಣ ಬಿಡುಗಡೆಯಾಗಿಲ್ಲ ಎಂದು ಮುಖ್ಯಮಂತ್ರಿ ಅವರ ಗಮನಕ್ಕೆ ತಂದರು. ಇದಕ್ಕೆ ರೇವಣ್ಣ ಅವರು ತಕ್ಷಣವೇ ಹಣ ಬಿಡುಗಡೆ ಮಾಡಲಾಗುವದು ಎಂದು ಭರವಸೆ ನೀಡಿದರು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವ್ಯಾಪ್ತಿಯಲ್ಲಿ ಹೆಚ್ಚಿನ ಗ್ಯಾಂಗ್ ಮೆನ್‍ಗಳ ವಿಶೇಷ ತಂಡ ರಚಿಸಿಕೊಂಡು ಹೊಸ ಕಂಬಗಳನ್ನು ಅಳವಡಿಸುವದು, ಸುಟ್ಟು ಹೋಗಿರುವ ಟ್ರಾನ್ಸ್ ಫಾರ್ಮರ್‍ಗಳನ್ನು ಬದಲಾಯಿಸು ವದು ಮತ್ತಿತರ ಕಾರ್ಯವನ್ನು ನಿರ್ವಹಿಸುವಂತೆ ಎಚ್.ಡಿ.ರೇವಣ್ಣ ಸಲಹೆ ಮಾಡಿದರು. ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಬೋಜೇಗೌಡ, ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್ ಅವರು ಹಲವು ವಿಚಾರಗಳ ಕುರಿತು ಮಾತನಾಡಿ ದರು. ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಇತರರು ಇದ್ದರು.
ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಮಳೆ ಹಾನಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿ ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ 108 ಲಕ್ಷ ರೂ., ಟೌನ್ ಪಂಚಾಯಿತಿ ವ್ಯಾಪ್ತಿಯಲ್ಲಿ 75 ಲಕ್ಷ ರೂ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 4,822 ಲಕ್ಷ ರೂ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ 1263 ಲಕ್ಷ ರೂ., ಸಣ್ಣ ನೀರಾವರಿ 1190 ಲಕ್ಷ ರೂ., ಸೆಸ್ಕ್ ವ್ಯಾಪ್ತಿಯಲ್ಲಿ 131 ಲಕ್ಷ ರೂ., ಪಿಎಂಜಿ ಎಸ್‍ವೈ ವ್ಯಾಪ್ತಿಯಲ್ಲಿ 7 ಲಕ್ಷ ರೂ., ರಾಷ್ಟ್ರೀಯ ಹೆದ್ದಾರಿ ವಿಭಾಗದಲ್ಲಿ 113 ಲಕ್ಷ ರೂ., ಒಟ್ಟಾರೆ ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಸುಮಾರು 329 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಗಮನ ಸೆಳೆದರು.