ಮಡಿಕೇರಿ, ಜು. 20: ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಪ್ರತಿಯೊಬ್ಬರೂ ನೆಮ್ಮದಿಯ ಬದುಕನ್ನು ಕಂಡುಕೊಳ್ಳಬೇಕು. ಆ ನಿಟ್ಟಿನಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ಥಂಭವಾಗಿರುವ ಮಾಧ್ಯಮ ಕ್ಷೇತ್ರದಿಂದ ಹೆಚ್ಚಿನ ನಿರೀಕ್ಷೆಯನ್ನು ಸಮಾಜ ಬಯಸುತ್ತದೆ ಎಂದು ಹಿರಿಯ ನ್ಯಾಯವಾದಿ ಎಚ್.ಎಸ್. ಚಂದ್ರಮೌಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಕೊಡಗು ಪತ್ರಿಕಾ ಭವನ ಟ್ರಸ್ಟ್ ಮತ್ತು ಕೊಡಗು ಪತ್ರಕರ್ತರ ವೇದಿಕೆಯ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಿಕಾ ಭವನದಲ್ಲಿ ಆಯೋಜಿತ ಪತ್ರಿಕಾ ದಿನಾಚರಣೆ ಯನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯ ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗಗಳು ತಪ್ಪೆಸಗದಂತೆ ನೊಡಿಕೊಳ್ಳಬೇಕಾದ ಪತ್ರಿಕಾ ಕ್ಷೇತ್ರ ಅತ್ಯಂತ ಜಾಗರೂಕವಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆಯೆಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಅಪಾಯ: ಹಿಂದೆ 80ರ ದಶಕದಲ್ಲಿ ಮಾಧ್ಯಗಳಲ್ಲಿನ ಸುದ್ದಿಗಳಿಗೆ ನಿಖರತೆ ಇತ್ತು. ಪ್ರಸ್ತುತ ಪತ್ರಿಕಾ ಕ್ಷೇತ್ರದೊಂದಿಗೆ ದೃಶ್ಯ ವಾಹಿನಿಗಳು, ಸಾಮಾಜಿಕ ಜಾಲ ತಾಣಗಳು ಪ್ರಭಾವಯುತವಾಗಿ ಬೆಳೆಯುತ್ತಿವೆ.
(ಮೊದಲ ಪುಟದಿಂದ) ಮಾಧ್ಯಮಗಳು ವಿಷಯದ ಸತ್ಯಾಸತ್ಯತೆಯನ್ನು ಅರಿತು ಅದನ್ನು ಓದುಗನಿಗೆ ನೀಡುವದು ಅವಶ್ಯ ಎಂದರು.
ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಸಾಹಿತಿ ಬಿ.ಎ.ಷಂಶುದ್ದೀನ್ ಮಾತನಾಡಿ, ಸಮಾಜದ ಹಳಿ ತಪ್ಪಿದಾಗ ಅದನ್ನು ಸರಿದಾರಿಗೆ ತಂದು ಎಚ್ಚರಿಕೆ ನೀಡುವ ಸ್ಥಾನದಲ್ಲಿರಬೇಕು ಎಂದರು.
ಜನವಲಯಕ್ಕೆ ಬೇಡವಾದ ಕಾರ್ಯವನ್ನು ಸರ್ಕಾರ ಕೈಗೊಂಡರೆ ಅದನ್ನು ತಡೆಯುವ ಶಕ್ತಿ ಇರುವ, ಚಳವಳಿಗಳನ್ನು ಹುಟ್ಟುಹಾಕುವ ಸಾಮಥ್ರ್ಯ ಹೊಂದಿರುವ ಪತ್ರಿಕೆಗಳಿಂದ ಪ್ರಸ್ತುತ ಎಲ್ಲರನ್ನು ಒಂದಾಗಿ ಬೆಸೆಯುವ ಕಾರ್ಯ ನಡೆಯಲಿ ಎಂದರು.
ಪುಸ್ತಕ ಅನಾವರಣ: ಸಾಹಿತಿ ಬೆಸೂರು ಮೋಹನ್ ಪಾಳೇಗಾರ್ ಅವರು ರಚಿಸಿದ ‘ಆಧುನಿಕ ಚಲನಶೀಲ ಜೀವಜಗತ್ತು’ ಮತ್ತು ‘ಮಾನವನ ದೇಹದ ಕ್ರಿಯೆಯೇ ವೈಜ್ಞಾನಿಕ ಅರಿವು’ ಎನ್ನುವ ಎರಡು ಪುಸ್ತಕಗಳನ್ನು ಹಿರಿಯ ಪತ್ರಕರ್ತ ಟಿ.ಪಿ. ರಮೇಶ್ ಮತ್ತು ಸಾಹಿತಿ ಬಿ.ಎ.ಷಂಶುದ್ದೀನ್ ಅನಾವರಣ ಗೊಳಿಸಿದರು.
ಈ ಸಂದರ್ಭ ಮಾತನಾಡಿದ ಸಾಹಿತಿ ಬೆಸೂರು ಮೋಹನ್ ಪಾಳೇಗಾರ್ ನಮ್ಮ ಭಾಷೆ ಮತ್ತು ಜಾನಪದ ಉಳಿಯಬೇಕಾದರೆ ಮಕ್ಕಳಿಗೆ ಪುಸ್ತಕಗಳನ್ನು, ಪತ್ರಿಕೆಗಳನ್ನು ಓದಲು ಪ್ರಚೋದಿಸಬೇಕು. ಇದಕ್ಕೆ ಬದಲಾಗಿ ಮಕ್ಕಳ ಕೈಗೆ ಮೊಬೈಲ್‍ಗಳನ್ನು ನೀಡುವದು ಬಹುದೊಡ್ಡ ತಪ್ಪೆಂದು ತಿಳಿಸಿದರಲ್ಲದೆ, ಇದೇ ಸಂದರ್ಭ ಎರಡು ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಸಭಿಕರನ್ನು ರಂಜಿಸಿದರು.
ಟಿ.ಪಿ.ರಮೇಶ್ ಮಾತನಾಡಿ, ಸಮಾಜದ ವಿವಿಧ ವಿಚಾರಗಳ ಕುರಿತಾದ ಅರಿವಿನ ಮೂಲಕ ಪ್ರಬುದ್ಧ ಪತ್ರಕರ್ತರಾಗಿ ರೂಪುಗೊಳ್ಳಲು ಸಾಧ್ಯವಿದೆಯೆಂದು ತಿಳಿಸಿ, ಪತ್ರಿಕಾ ಭವನ ಟ್ರಸ್ಟ್ ಮೂಲಕ ಪ್ರತಿ ಎರಡು ತಿಂಗಳಿಗೊಮ್ಮೆ ಚಿಂತನಶೀಲವಾದ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸ ಲಾಗುತ್ತದೆಂದು ತಿಳಿಸಿದರು.
ಕೊಡಗು ಪತ್ರಕರ್ತರ ವೇದಿಕೆಯ ಅಧ್ಯಕ್ಷ ಶ್ರೀಧರ ನೆಲ್ಲಿತ್ತಾಯ ಮಾತನಾಡಿ, ಪತ್ರಿಕಾ ಕ್ಷೇತ್ರಕ್ಕೆ ಬರಲಿಚ್ಛಿಸುವವರು ಇತರ ಯಾವದೇ ಆಸೆ ಆಕಾಂಕ್ಷೆಗಳನ್ನು ಮೀರಿದ ಸೇವಾ ಮನೋಭಾವನೆಯ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ಬರಬೇಕೆಂದು ಕಿವಿ ಮಾತುಗಳನ್ನಾಡಿದರು.
ಧನ ಸಹಾಯ ವಿತರಣೆ: ಇದೇ ಸಂದರ್ಭ ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಮಾಜಿ ಪ್ರಧಾನ ಕಾರ್ಯದರ್ಶಿ ದಿ. ಕೆ.ಬಿ. ಮಹಂತೇಶ್ ಅವರ ಪುತ್ರಿ ಸಹನಾ ಕೆ.ಎಂ.ಮತ್ತು ಹಾಕತ್ತೂರಿನ ವಿದ್ಯಾರ್ಥಿ ಜೆ.ಎಂ.ಜ್ಞಾನೇಶ್ ಅವರ ಶಿಕ್ಷಣಕ್ಕೆ ಪೂರಕವಾಗಿ ಧನ ಸಹಾಯ ವಿತರಿಸಲಾಯಿತು.
ಸಭಾಧ್ಯಕ್ಷತೆ ವಹಿಸಿದ್ದ ಕೊಡಗು ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಬಿ.ಎನ್.ಮನುಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಾಯಕ ಲಿಯಾಕತ್ ಆಲಿ ಪ್ರಾರ್ಥಿಸಿ, ಟ್ರಸ್ಟಿ ಬಿ.ಕೆ. ತಿಮ್ಮಪ್ಪ ಕಾರ್ಯಕ್ರಮ ನಿರೂಪಿಸಿ, ಖಜಾಂಚಿ ಕೇಶವ ಕಾಮತ್ ಗಣ್ಯರ ಸಂದೇಶ ವಾಚಿಸಿದರು.ಟ್ರಸ್ಟಿ ವಿ.ಪಿ. ಸುರೇಶ್ ಮೋಹನ್ ಪಾಳೇಗಾರ್ ಅವರನ್ನು ಸಭೆಗೆ ಪರಿಚಯಿಸಿದರೆ, ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ಸ್ವಾಗತಿಸಿ, ಟ್ರಸ್ಟಿ ಮಧೋಷ್ ಪೂವಯ್ಯ ವಂದಿಸಿದರು.