ಮಡಿಕೇರಿ, ಜು. 20: ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿ ಗೊಳಪಡುವ ಎರಡನೇ ಮೊಣ್ಣಂಗೇರಿಯಲ್ಲಿ ಮತ್ತೊಮ್ಮೆ ಭೂಮಿ ಬಾಯ್ತೆರೆದಿದೆ. ಈ ಹಿಂದೆ ಬಿರುಕುಬಿಟ್ಟ ಸ್ಥಳದಲ್ಲಿಯೇ ಭೂಮಿ ಬಿರುಕು ಬಿಟ್ಟು ಆತಂಕ ಮೂಡಿಸಿದೆ.ಬೆಟ್ಟ- ಗುಡ್ಡಗಳಿಂದ ಕೂಡಿರುವ ಪ್ರದೇಶ ವಾಗಿರುವ ಎರಡನೇ ಮೊಣ್ಣಂಗೇರಿಯಲ್ಲಿ ಭೂಮಿ ಸುಮಾರು ಎರಡು ಕಿ.ಮೀ. ವರೆಗೆ ಬಿರುಕುಬಿಟ್ಟಿದೆ. ಮೊನ್ನೆಯಿಂದಲೇ ಸಣ್ಣದಾಗಿ ಬಿರುಕು ಬಿಟ್ಟಂತೆ ಗೋಚರಿಸಿದ್ದು, ಇಂದು ದೊಡ್ಡದಾಗಿ ಬಿರುಕು ಕಾಣಿಸಿಕೊಂಡಿದೆ. ಮೇಲಿಂದಲೇ ಬಿರುಕು ಕಾಣಿಸಿಕೊಂಡು ಕಾಂಕ್ರೀಟ್ ರಸ್ತೆ ಕೂಡ ಸೀಳಿ ಹೋಗಿದೆ. ಕಾಂಕ್ರೀಟ್ ರಸ್ತೆಯಲ್ಲಿ ಸುಮಾರು 4 ಇಂಚುಗಳಷ್ಟು ಅಗಲದಲ್ಲಿ ಬಿರುಕು ಬಿಟ್ಟಿದೆ. ರಸ್ತೆಯ ಕೆಳಬದಿ 100 ಮೀಟರ್‍ನಷ್ಟು ಮಣ್ಣು ಕೂಡ ಜಗ್ಗಿರುವದು ಗೋಚರಿಸಿದೆ. ಬಿರುಕು ಅಲ್ಲಿನ ನಿವಾಸಿ ಬಾಬು ಪೂಜಾರಿ ಅವರ ಅಂಗಳದ ಮೂಲಕ ಸಾಗಿದೆ. ಆದರೆ ಮನೆಗೆ ಯಾವದೇ ಹಾನಿಯಾಗಿಲ್ಲ.
ಕಳೆದ 2013ರಲ್ಲಿ ಕೂಡ ಇದೇ ಸ್ಥಳದಲ್ಲಿ ರಸ್ತೆಯಲ್ಲಿ ಭಾರೀ ಬಿರುಕು ಕಾಣಿಸಿ ಕೊಂಡು, ಕೆಲವು ಮನೆ ಯೊಳಗೂ ಬಿರುಕು ಬಿಟ್ಟಿತ್ತು. ಆದರೆ ಈ ಬಾರಿ ಮನೆಯಲ್ಲಿ ಯಾವದೇ ಬಿರುಕು ಕಾಣಿಸಿಕೊಂಡಿಲ್ಲ.
ತಹಶೀಲ್ದಾರ್ ಭೇಟಿ
ಬಿರುಕು ಬಿಟ್ಟ ಸ್ಥಳಕ್ಕೆ ಇಂದು ಸಂಜೆ ಮಡಿಕೇರಿ ತಾಲೂಕು ತಹಶೀಲ್ದಾರ್ ಕುಸುಮ ಹಾಗೂ ಗ್ರಾಮಾಂತರ ಠಾಣಾಧಿಕಾರಿ ಚೇತನ್ ಅವರುಗಳು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ತಾ. 21ರಂದು (ಇಂದು) ಗಣಿ ಮತ್ತು ಭೂವಿಜ್ಞಾನಿಗಳನ್ನು ಸ್ಥಳ ಪರಿಶೀಲನೆಗೆ ಕಳುಹಿಸುವದಾಗಿ ಅವರು ಹೇಳಿದ್ದಾರೆ.
-ಚಿತ್ರ, ಮಾಹಿತಿ : ಅಗೋಳಿಕಜೆ ಧನಂಜಯ