ಕುಶಾಲನಗರ, ಜು. 20: ನೂರಾರು ಸಂಖ್ಯೆಯ ಭದ್ರತಾ ಸಿಬ್ಬಂದಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ದೊರೆಗೆ ಭದ್ರತೆ ನೀಡುವ ನಡುವೆ ಸಾಮಾನ್ಯ ಕಾರ್ಯಕರ್ತರಿಗೆ ತಮ್ಮ ನೆಚ್ಚಿನ ನಾಯಕನನ್ನು ನೋಡುವ ಅವಕಾಶ ಸಿಗದೆ ಪೆಚ್ಚುಮೋರೆ ಹಾಕಿ ಹೋಗಬೇಕಾದ ಪ್ರಸಂಗ ಒಂದೆಡೆಯಾದರೆ ವರದಿಗೆಂದು ತೆರಳಿದ ಪತ್ರಿಕಾ, ಮಾಧ್ಯಮ ಬಳಗಕ್ಕೆ ಕಾರ್ಯಕ್ರಮದ ಸುದ್ದಿ ಮಾಡಲು ಸಂಪೂರ್ಣ ಪ್ರಮಾಣದಲ್ಲಿ ಅಡ್ಡಿಯಾದ ಸನ್ನಿವೇಶ ಗುರುವಾರ ಹಾರಂಗಿಯಲ್ಲಿ ತಲೆದೋರಿತು. ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮ ನಿಮಿತ್ತ ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿದ್ದರೂ ಮುಖ್ಯಮಂತ್ರಿಗಳು ಆಗಮಿಸಿದ ಬೆನ್ನಲ್ಲೇ ಇಡೀ ಅಣೆಕಟ್ಟು ಆವರಣದಲ್ಲಿ ಗಲಿಬಿಲಿ ವಾತಾವರಣ ಸೃಷ್ಟಿಯಾಗಿ ಕಾರ್ಯಕ್ರಮ ಗೊಂದಲಮಯವಾಗಿ ಮೂಡಿ ಬಂದಿರುವದಂತೂ ನಿಜ.
ಒಂದೆಡೆ ಮುಖ್ಯಮಂತ್ರಿಗಳ ಭದ್ರತಾ ಸಿಬ್ಬಂದಿಗಳು, ಇನ್ನೊಂದೆಡೆ ಜಿಲ್ಲೆಯ ಹಾಗೂ ನೆರೆಯ ಜಿಲ್ಲೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ರಾಜ್ಯದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಜೊತೆಗೆ ಮೂರು ಪಕ್ಷಗಳ ನೂರಾರು ಸಂಖ್ಯೆಯ ಕಾರ್ಯಕರ್ತರು ಮುಗಿಬೀಳುವದರೊಂದಿಗೆ ಅದರ ಮಧ್ಯೆ ಸಿಲುಕಿಕೊಂಡ ಪತ್ರಿಕಾ ಮಾಧ್ಯಮದವರ ಗೋಳು ಹೇಳತೀರದು.
ಹಾರಂಗಿ ಅಣೆಕಟ್ಟೆಯ ಪ್ರಾರಂಭದ ಗೇಟ್‍ನಲ್ಲಿ ಭದ್ರತಾ ಸಿಬ್ಬಂದಿಗಳು ಒಳಬರಲು ಸಹಕರಿಸಿದರೂ ಹಾರಂಗಿ ಆವರಣದಲ್ಲಿದ್ದ ಕೆಲವು ಪೊಲೀಸರು ಮಾತ್ರ ಯಾರನ್ನೂ ಒಳಬಿಡಲು ಅನುಮತಿಯೇ ಕಲ್ಪಿಸುತ್ತಿರಲಿಲ್ಲ. ಮುಖ್ಯಮಂತ್ರಿಗಳು ಮತ್ತು ಸಚಿವರು, ಜನಪ್ರತಿನಿಧಿಗಳು ಬಾಗಿನ ಅರ್ಪಿಸುವ ಸಂದರ್ಭವಂತೂ ಭದ್ರತಾ ಸಿಬ್ಬಂದಿಗಳ ಒತ್ತಡದ ನಡುವೆ ಸ್ಥಳೀಯ ರಾಜಕಾರಣಿಗಳು ನುಸುಳಿಕೊಂಡು ತಮ್ಮ ಅಸ್ತಿತ್ವವನ್ನು ಪ್ರದರ್ಶಿಸುವದರೊಂದಿಗೆ ಛಾಯಾಚಿತ್ರಗಾರರಿಗೆ ಬಹುತೇಕ ಅಡ್ಡಿಯಾಗಿದ್ದರು.
ಇನ್ನು ಪ್ರವಾಸಿ ಮಂದಿರಕ್ಕೆ ಮುಖ್ಯಮಂತ್ರಿಗಳು ಆಗಮಿಸಿದ್ದೇ ತಡ ನೂರಾರು ಕಾರ್ಯಕರ್ತರು ತಾಮುಂದು ನಾಮುಂದು ಎಂಬಂತೆ ಮುಖ್ಯಮಂತ್ರಿಗಳಿಗೆ ಹಸ್ತಲಾಘವ ಮಾಡಲು ಮುಗಿಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮುಖ್ಯಮಂತ್ರಿಗಳ ಭೇಟಿ ಸಂದರ್ಭ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳಲ್ಲದೆ ನೆರೆಯ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಭಾಗಗಳಿಂದಲೂ ಭದ್ರತೆಗೆ ನಿಯೋಜಿಸಲಾಗಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ತರಾತುರಿಯ ಸಿದ್ಧತೆಗಳೊಂದಿಗೆ ಮುಖ್ಯಮಂತ್ರಿಗಳ ಸ್ವಾಗತಕ್ಕಾಗಿ ಬಹುತೇಕ ತಯಾರಿ ನಡೆಸಿದ್ದರು. ಆದರೆ ನೆರೆಯ ಮಂಡ್ಯ ಜಿಲ್ಲೆಯಿಂದ ಬಂದ ಪೊಲೀಸ್ ಅಧಿಕಾರಿಯೊಬ್ಬ ಮುಖ್ಯಮಂತ್ರಿಗಳನ್ನು ಹೊರತುಪಡಿಸಿದಂತೆ ಉಳಿದ ಎಲ್ಲರ ಮೇಲೂ ತನ್ನ ದರ್ಪ ತೋರಿಸುತ್ತಿದ್ದ ದೃಶ್ಯ ಕಂಡುಬಂತು. ಆಕ್ರೋಶಗೊಂಡ ಪಕ್ಷದ ಕಾರ್ಯಕರ್ತರುಗಳು ಅವರ ಮೇಲೆ ಮುಗಿ ಬೀಳುವ ಸಾಧ್ಯತೆ ಕಂಡ ತಕ್ಷಣ ಈ ಅಧಿಕಾರಿ ಎಚ್ಚೆತ್ತುಕೊಂಡಿದ್ದು ಆಯಿತು. ಇದರೊಂದಿಗೆ ಹಾರಂಗಿ ಪ್ರವಾಸಿ ಮಂದಿರದ ಪ್ರವೇಶ ದ್ವಾರದಲ್ಲಿಯೇ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದು ಇನ್ನೂ ಹೆಚ್ಚಿನ ಅವಾಂತರಕ್ಕೆ ಕಾರಣವಾಯಿತು.
ಈ ನಡುವೆ ಸಂಘಸಂಸ್ಥೆಗಳ ಪ್ರಮುಖರು ನಾಡಿನ ದೊರೆಗೆ ಮನವಿ ಪತ್ರಗಳ ಮಹಾಪೂರವನ್ನೇ ಹರಿಸಲು ತಂದಿದ್ದರೂ ಇದನ್ನು ನೆಮ್ಮದಿಯಾಗಿ ನೀಡಲು ಈ ಪೊಲೀಸ್ ಅಧಿಕಾರಿಗಳ ಅಸಹಕಾರ ಧೋರಣೆಯಿಂದ ಸಾಧ್ಯವಾಗಿಲ್ಲ ಎನ್ನುವದು ಬಹುತೇಕರ ರೋದನವಾಗಿತ್ತು. ಇಷ್ಟೆಲ್ಲಾ ನಡೆಯುತ್ತಿದ್ದಂತೆ ಕೊಡಗು ಜಿಲ್ಲಾ ಜೆಡಿಎಸ್ ಪಕ್ಷದ ಅತೃಪ್ತರ ಗುಂಪೊಂದರಲ್ಲಿ ಆಕ್ರೋಶದ ಕಟ್ಟೆ ಒಡೆದು ಪ್ರತಿಭಟನೆಗೆ ಎದುರಾಗಿದ್ದೂ ನಡೆಯಿತು. ತಮ್ಮ ನೆಚ್ಚಿನ ಮುಖ್ಯಮಂತ್ರಿಗಳ ಬಳಿ ತೆರಳಲು ಪೊಲೀಸರು ಅಡ್ಡಿ ಮಾಡಿದ್ದು ಅಲ್ಲದೆ ಇತರ ಪಕ್ಷದ ಮುಖಂಡರುಗಳಿಗೆ ಭೇಟಿಯಾಗಲು ಆಸ್ಪದ ಕಲ್ಪಿಸಿದ್ದು ಇವರ ಕೋಪಕ್ಕೆ ಕಾರಣವಾಗಿತ್ತು. ಏಕಾಏಕಿ ತಮ್ಮ ಪಕ್ಷದ ಮುಖಂಡರ ವಿರುದ್ಧವೇ ಘೋಷಣೆ ಕೂಗುವದರೊಂದಿಗೆ ತಮ್ಮ ಅತೃಪ್ತಿ ವ್ಯಕ್ತಪಡಿಸಿದ ಘಟನೆ ನಡೆಯಿತು.
ಇವೆಲ್ಲಾ ವಿಷಯಗಳನ್ನು ವರದಿ ಮಾಡಲು ಬೆಳಗಿನಿಂದ ಮಳೆಯ ನಡುವೆ ಕಾಯುತ್ತಿದ್ದ ಜಿಲ್ಲೆಯ ಹಾಗೂ ನೆರೆ ಜಿಲ್ಲೆಗಳ ಪತ್ರಕರ್ತರು ಹಾಗೂ ಮಾಧ್ಯಮ ಬಳಗದ ಸದಸ್ಯರು ಮಾತ್ರ ನೂರಾರು ಕಾರ್ಯಕರ್ತರ ನಡುವೆ ಸಿಲುಕುವದರೊಂದಿಗೆ ಸಮರ್ಪಕವಾಗಿ ವರದಿ ಮಾಡಲು ಅಡ್ಡಿಯಾಗಿದ್ದಂತೂ ಸತ್ಯ. ಹಾರಂಗಿಗೆ ಮುಖ್ಯಮಂತ್ರಿ ಆಗಮನದ ಸಂದರ್ಭ ಇಡೀ ವ್ಯವಸ್ಥೆ ಅಸ್ತವ್ಯಸ್ಥವಾಗುವದರೊಂದಿಗೆ ಗೊಂದಲದ ಗೂಡಾಗಿತ್ತು.
ಕೆಲವು ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಪತ್ರಕರ್ತರನ್ನೂ ತಳ್ಳಾಡುತ್ತಿದ್ದ ದೃಶ್ಯ ಕಂಡುಬಂತು. ಪತ್ರಿಕಾ ಮಾಧ್ಯಮದವರೊಂದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡುತ್ತಿದ್ದ ಸಂದರ್ಭ ಬಹುತೇಕ ಪಕ್ಷದ ಕಾರ್ಯಕರ್ತರು ಮುಖ್ಯಮಂತ್ರಿಗಳ ಮಾತನ್ನು ಸೆರೆ ಹಿಡಿಯುವ ಸಲುವಾಗಿ ತಮ್ಮ ಮೊಬೈಲ್‍ಗಳನ್ನು ಹಿಡಿದು ಚಿತ್ರೀಕರಿಸುವದರೊಂದಿಗೆ ಅಡ್ಡಿ ಮಾಡುತ್ತಿದ್ದುದು ಕಂಡುಬಂತು. ಸಂಬಂಧಿಸಿದ ಅಧಿಕಾರಿಗಳು ಸರಕಾರಿ ಕಾರ್ಯಕ್ರಮವೊಂದರ ಸಂದರ್ಭ ಮಾಧ್ಯಮದ ಮಂದಿಗೆ ಯಾವದೇ ರೀತಿಯ ಸೂಕ್ತ ಕನಿಷ್ಟ ವ್ಯವಸ್ಥೆ ಕಲ್ಪಿಸದಿರುವದು ಮಾತ್ರ ನಿಜಕ್ಕೂ ವಿಷಾದನೀಯ. ಇನ್ನು ಮುಂದಾದರೂ ಸಂಬಂಧಿಸಿದ ಜಿಲ್ಲಾಡಳಿತ ಸರಕಾರಿ ಕಾರ್ಯಕ್ರಮ ಸಂದರ್ಭ ಇಂತಹ ಅಚಾತುರ್ಯ ನಡೆಯದಂತೆ ಎಚ್ಚರವಹಿಸಬೇಕಾಗಿದೆ.
-ಸಿಂಚು