ಸಿದ್ದಾಪುರ, ಜು. 24: ಇಲ್ಲಿಗೆ ಸಮೀಪದ ಅಭ್ಯತ್‍ಮಂಗಲ ಕೃಷಿ ಪತ್ತಿನ ಸಹಕಾರ ಸಂಘ ಪ್ರಸ್ತುತ ವರ್ಷ ರೂ. 45ಲಕ್ಷ ಲಾಭ ಗಳಿಸಿರುವದಾಗಿ ಸಂಘದ ಮಹಾಸಭೆಯಲ್ಲಿ ತಿಳಿಸಲಾಯಿತು. ನೆಲ್ಯಹುದಿಕೇರಿ ಯಲ್ಲಿರುವ ಸಂಘದ ಕಟ್ಟಡದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ.ಎ. ಬೋಪಯ್ಯ ವಹಿಸಿದ್ದರು. ರೂ. 45 ಲಕ್ಷ ಲಾಭ ದೊರಕಿದ್ದು, ಸದಸ್ಯರಿಗೆ ಶೇಕಡ 25 ರಷ್ಟು ಡಿವಿಡೆಂಡ್ ಹಣ ವಿತರಿಸಲಾಗಿದೆ. ಅಲ್ಲದೇ ಮುಂಬರುವ ಆಗಸ್ಟ್ ತಿಂಗಳ 18 ರಂದು ಸಂಘದ ಚುನಾವಣೆ ನಡೆಯಲಿರುವ ದಾಗಿ ಸಭೆಗೆ ಮಾಹಿತಿ ನೀಡಿದರು.

ಸಂಘದ ಸದಸ್ಯ ವಸಂತ್‍ಕುಮಾರ್ ಹೊಸಮನೆ ಮಾತನಾಡಿ ಸಹಕಾರ ಸಂಘ ಈಚೆಗೆ ನೂತನ ಕಟ್ಟಡವೊಂದನ್ನು ನಿರ್ಮಿಸಿದ ಬಳಿಕ ಕಟ್ಟಡದ ಉದ್ಘಾಟನೆಗೆ ಜನಪ್ರತಿನಿಧಿಗಳನ್ನು ಆಹ್ವಾನಿಸದೆ ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರುಗಳೇ ಉದ್ಘಾಟನೆ ಮಾಡಿರುವದರ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಸರ್ಕಾರದ ಅನುದಾನವನ್ನು ಬಳಸಿಕೊಂಡು ನಿರ್ಮಿಸಿದ ಕಟ್ಟಡದ ಉದ್ಘಾಟನೆಗೆ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸದೇ ಉದ್ಘಾಟನೆ ಮಾಡಿರುವದು ಎಷ್ಟು ಸರಿ ಎಂದು ಇತರ ಸದಸ್ಯರೂ ಸಭಾಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ನೂತನ ಸರ್ಕಾರದ ಸಾಲಮನ್ನಾ ಯೋಜನೆಯ ಕುರಿತು ಸದಸ್ಯರು ಮಾಹಿತಿ ಬಯಸಿದ ಮೇರೆಗೆ ಸಂಘದ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ಸದಸ್ಯರಿಗೆ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು. ನೂತನ ಸರ್ಕಾರದ ಸಾಲ ಮನ್ನ ಯೋಜನೆಗಳ ಕುರಿತು ಯಾವದೇ ಅಧಿಕೃತ ಮಾಹಿತಿ ಲಭ್ಯವಾಗಿರುವದಿಲ್ಲ; ಆದರೆ ಹಿಂದಿನ ಸರ್ಕಾರ ಕೃಷಿಕರಿಗೆ ಘೋಷಿಸಿದ ರೂ. 50 ಸಾವಿರ ಸಾಲಮನ್ನಾದ ಬಾಪ್ತು ಹಣ ಬಂದಿರುವದಾಗಿ ಮಾಹಿತಿ ನೀಡಿದರು.

ಇದೇ ಸಂದರ್ಭ ಕೊಡಗು ಜಿಲ್ಲಾ ಯೂನಿಯನ್ ಬ್ಯಾಂಕ್ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಸಂಘದ ನಿರ್ದೇಶಕ ಪಿ.ಸಿ. ಅಚ್ಚಯ್ಯ ಮತ್ತು ಕುಶಾಲನಗರ ಎಪಿಸಿಎಂಎಸ್ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಸಂಘದ ನಿರ್ದೇಶಕ ಕೆ.ಎಂ. ಪ್ರಸನ್ನಕುಮಾರ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸಹಕಾರ ಸಂಘದ ಉಪಾಧ್ಯಕ್ಷ ಎಚ್.ಎನ್. ಮಾದಪ್ಪ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ಹಾಗೂ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.

-ಸುಧಿ