ಮಡಿಕೇರಿ, ಜು. 23: ಪ್ರಾಧ್ಯಾಪಕ, ಕವಿ ಹಾಗೂ ಪ್ರಗತಿಪರ ಕೃಷಿಕ ಡಾ.ಕರುಣಾಕರ ನಿಡಿಂಜಿ ಅವರ ಅರೆಭಾಷಾ ಕವನವೊಂದನ್ನು ಕನ್ನಡ ಪಠ್ಯದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮಂಗಳೂರು ವಿಶ್ವವಿದ್ಯಾನಿಲಯವು ಸುಳ್ಯ ಹಾಗೂ ಕೊಡಗು ವಲಯದ ಹಲವರ ಮಾತೃಭಾಷೆ ಯಾಗಿರುವ ಅರೆಭಾಷೆಗೆ ವಿಶ್ವವಿದ್ಯಾನಿಲಯ ಮಟ್ಟದ ಮನ್ನಣೆ ನೀಡಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಎಸ್ಸಿ. ದ್ವಿತೀಯ ವರ್ಷದ ಕನ್ನಡ ಪಠ್ಯ ದಲ್ಲಿ ಡಾ.ಕರುಣಾಕರರ ‘ ನೀಲಿದಾರಿ’ ಕವನಸಂಕಲನದ ‘ ಹೀಂಗೊಂದುಟ್ಟು ಸತ್ಯ’ ಈ ಅರೆಭಾಷೆ ಕವನವನ್ನು ಓದಲು ವಿದ್ಯಾರ್ಥಿಗಳಿಗೆ ಅವಕಾಶವಾಗಿದೆ.

ನಿಡಿಂಜಿ ವೆಂಕಪ್ಪ ಗೌಡ- ಕಾವೇರಮ್ಮ ದಂಪತಿಯ ಹಿರಿಯ ಪುತ್ರರಾಗಿರುವ ಡಾ.ಕರುಣಾಕರ ನಿಡಿಂಜಿಯವರು ಮಡಿಕೇರಿ ತಾಲೂಕು ಚೆಂಬು ಗ್ರಾಮದವರು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಏಳು ವರ್ಷ ಸೇವೆ ಸಲ್ಲಿಸಿದ ಇವರು ಕಳೆದ 24 ವರ್ಷಗಳಿಂದ ಮಡಿಕೇರಿ ಫೀ.ಮಾ.ಕಾರ್ಯಪ್ಪ ಕಾಲೇಜಿನಲ್ಲಿ ಕನ್ನಡ ಅತಿಥಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಉತ್ತಮ ಕೃಷಿಕರೂ ಆಗಿರುವ ಡಾ.ನಿಡಿಂಜಿಯವರು ಇತ್ತೀಚೆಗೆ ಏರುಮಡಿ ಕೃಷಿ ಪದ್ಧತಿ ಬಗ್ಗೆ ವಿಶೇಷ ಅಧ್ಯಯನ ನಡೆಸಿ ರೈತರು ಹೇಗೆ ಆಹಾರ ಸ್ವಾವಲಂಬಿಗಳಾಗಬಹುದು ಎಂಬದನ್ನು ತೋರಿಸಿದ್ದಾರೆ.

ಇವರ ರಚನೆಗಳು ಆಕಾಶವಾಣಿ ಮಡಿಕೇರಿ ಕೇಂದ್ರದ ಭಕ್ತಿ ಸಂಗೀತ ವಿಭಾಗದಲ್ಲಿ ಪ್ರಸಾರಗೊಂಡಿವೆ.