ಮಡಿಕೇರಿ, ಜು. 23: ಆಂಜನೇಯ ದೇವಸ್ಥಾನ ಹುಂಡಿ ಹಣ ಕದ್ದಿದ್ದ ನಾಲ್ವರು ಖದೀಮರನ್ನು ಮಡಿಕೇರಿ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರು ಈ ಹಿಂದೆ ಹಲವಾರು ಕ್ರಿಮಿನಲ್ ಮೊಕದ್ದಮೆಗಳಲ್ಲಿ ಭಾಗಿಗಳಾಗಿದ್ದು, ಅನೇಕ ವರ್ಷಗಳ ಕಾಲ ಸೆರೆ ವಾಸವನ್ನು ಅನುಭವಿಸಿದ್ದಾರೆ.ನಾಲ್ವರು ಆರೋಪಿಗಳಾದ ಸುಂಟಿಕೊಪ್ಪ ಹಾಲೇರಿಯ ಸುರೇಶ್, ಕೇರಳ ಕಂಜಿಗೋಡ್‍ನ ಸುಭಾಷ್, ಹುಣಸೂರಿನ ಸುರೇಶ್ ನಾರಾಯಣ್, ಹಾಸನದ ದೊಡ್ಡಮಗ್ಗೆ ಹೋಬಳಿಯ ಕುಮಾರ್ ಇವರುಗಳನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿ ಇಂದು ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳ ಪೈಕಿ ಸುರೇಶ್ ಹಾಗೂ ಸುಭಾಷ್ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿ ಸುಮಾರು 10 ವರ್ಷ ಜೈಲುವಾಸ ಅನುಭವಿಸಿ ಇತ್ತೀಚೆಗಷ್ಟೆ ಬಿಡುಗಡೆಗೊಂಡಿದ್ದರು. ಸುರೇಶ್ ನಾರಾಯಣ್ ಕೂಡ ಕೊಲೆ ಮೊಕದ್ದಮೆ ಇತ್ಯಾದಿಗಳಲ್ಲಿ ಭಾಗಿಯಾಗಿ ಸುಮಾರು 8 ವರ್ಷ ಸಜೆ ಅನುಭವಿಸಿದ್ದ. ಇತ್ತೀಚೆಗಷ್ಟೆ ಬಿಡುಗಡೆಗೊಂಡಿದ್ದ. ಕುಮಾರ್ ಎಂಬಾತ ಅರಣ್ಯ ಅಪರಾಧ ಇನ್ನಿತರ ಹಲವು ಕ್ರಿಮಿನಲ್ ಮೊಕದ್ದಮೆಗಳಲ್ಲಿ ಪಾಲ್ಗೊಂಡು ಮೂರು ತಿಂಗಳ ಸಜೆ ಅನುಭವಿಸಿ ಇತ್ತೀಚೆಗೆ ಬಿಡುಗಡೆಗೊಂಡಿದ್ದ. ಈ ನಾಲ್ವರು ಆರೋಪಿಗಳು ಬಹುತೇಕ ದೇವಾಲಯಗಳಲ್ಲಿ ಹುಂಡಿಗಳನ್ನು ಕಳವು ಮಾಡುವ ದಂಧೆ ನಡೆಸುತ್ತಿದ್ದರು. ಜೊತೆಗೆ ಮನೆಗಳಿಗೆ ನುಗ್ಗಿಯೂ ಕಳವು ಮಾಡುತ್ತಿದ್ದರು. ಮಡಿಕೇರಿ ಗ್ರಾಮಾಂತರ ವಿಭಾಗ, ಸುಂಟಿಕೊಪ್ಪ, ಕೊಣನೂರು, ಮೈಸೂರು, ಸಕಲೇಶಪುರ ಮೊದಲಾದ ಕಡೆ ಕಳವು ಪ್ರಕರಣಗಳ ಮೊಕದ್ದಮೆ ಈ ಆರೋಪಿಗಳ ವಿರುದ್ಧ ದಾಖಲಾಗಿದ್ದು, ಅದೇ ಹಿನ್ನೆಲೆಯಲ್ಲಿ ಸಜೆ ಅನುಭವಿಸಿದ್ದರು. ಆದರೆ ಬಿಡುಗಡೆಗೊಂಡ ಬಳಿಕವೂ ಕುಕೃತ್ಯವನ್ನು ಮುಂದುವರೆಸಿದ್ದು, ಇತ್ತೀಚೆಗಷ್ಟೆ ಚುನಾವಣಾ ಮುನ್ನಾ ದಿನ ಮಡಿಕೇರಿಯ ಬ್ರಾಹ್ಮಣರ ಬೀದಿ, ಚೆಟ್ಟಳ್ಳಿ ಹಾಗೂ ಸುಂಟಿಕೊಪ್ಪಗಳಲ್ಲಿ ಮನೆಗಳಿಗೆ ನುಗ್ಗಿ ಕಳವು ಮಾಡಿದ್ದರು. ಅಲ್ಲದೇ, ಸಕಲೇಶಪುರದ ಮಸೀದಿಯೊಳಗೆ ನುಗ್ಗಿ ಹಣ ದೋಚಿದ್ದರು.
ಈ ಖದೀಮರು ಮಡಿಕೇರಿ ನಗರದ ಆಂಜನೇಯ ದೇವಾಲಯಕ್ಕೂ ಬೀಗ ಮುರಿದು ನುಗ್ಗಿ ತಾ. 21ರ ರಾತ್ರಿ ಹುಂಡಿಯ ಹಣವನ್ನು ಕಳವು ಮಾಡಿದ್ದರು. ಬಳಿಕ ವ್ಯಾಂಡಮ್ ಎಂಟರ್‍ಪ್ರೈಸಸ್ ಮುಂದೆ ನಿಲ್ಲಿಸಿದ್ದ ಪ್ಯಾಷನ್ ಹೋಂಡಾ ಬೈಕನ್ನು ಕದ್ದು ಪರಾರಿಯಾಗಿದ್ದು, ಬಳಿಕ ಪೊಲೀಸರ ಬಲೆಗೆ ಸಿಲುಕಿದರು. ಕಳವು ಮೊಕದ್ದಮೆ ಸಂಬಂಧ ದೇವಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್ ಅವರು ಲಿಖಿತ ದೂರು ಸಲ್ಲಿಸಿದ್ದರು.
ವಶವಾದ ಹುಂಡಿ ಹಣ
ಮಡಿಕೇರಿ ನಗರ ಪೊಲೀಸರು ಕಾರ್ಯಾಚರಣೆಯಲ್ಲಿ ಯಶಸ್ಸು ಸಾಧಿಸಿದ್ದು, ನಾಲ್ವರು ಆರೋಪಿಗಳಿಂದ ಆಂಜನೇಯ ದೇವಾಲಯದಿಂದ ಕಳವಾಗಿದ್ದ ರೂ. 32 ಸಾವಿರ ಹಣವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಅಪಹರಣಗೊಂಡ ಬೈಕನ್ನು ವಶಕ್ಕೆ ಪಡೆದಿದ್ದಾರೆ.
ಸಿಸಿ ಕ್ಯಾಮೆರಾ ಸಹಾಯ
ಆರೋಪಿಗಳ ಪತ್ತೆಗೆ ಸಿಸಿ ಕ್ಯಾಮೆರಾ ನೆರವನ್ನು ಪಡೆಯಲಾಗಿದೆ. ಆರೋಪಿಗಳು ಆಂಜನೇಯ ದೇವಾಲಯಕ್ಕೆ ನುಗ್ಗಿ ಕಳವು ಮಾಡಿದ ಬಳಿಕ ಆರೋಪಿಗಳ ಪೈಕಿ ಇಬ್ಬರು ಬೈಕ್ ಕಳವು ಮಾಡುತ್ತಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವ್ಯಾಂಡಮ್ ಎಂಟರ್‍ಪ್ರೈಸಸ್‍ನಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಓರ್ವ ಆರೋಪಿಯ ಸ್ಪಷ್ಟ ಚಹರೆ ಪತ್ತೆಯಾಗಿದೆ. ಇದರ ಆಧಾರದಲ್ಲಿ ತನಿಖೆ ಮುಂದುವರಿಸಿದ ಪೊಲೀಸರಿಗೆ ಇನ್ನಿತರ ಆರೋಪಿಗಳ ಸುಳಿವು ದೊರೆತು ನಾಲ್ವರನ್ನು ಬಂಧಿಸಲು ಸಹಕಾರಿಯಾಯಿತು ಎಂದು ತಿಳಿದುಬಂದಿದೆ.
ಆರೋಪಿಗಳ ಪೈಕಿ ಸುರೇಶ್ ಮತ್ತು ಸುಭಾಷ್ ಕಳ್ಳತನದಲ್ಲಿ ನುರಿತವರಾಗಿದ್ದರು. ಕುಮಾರ್ ಇವರಿಬ್ಬರಿಗೆ ನೆರವು ನೀಡುತ್ತಿದ್ದ. ಸುರೇಶ್ ನಾರಾಯಣ ಕದ್ದ ಮಾಲುಗಳನ್ನು ಮಾರಾಟ ಮಾಡುವಲ್ಲಿ ನಿಸ್ಸೀಮನಾಗಿದ್ದ ಎಂದು ಮಾಹಿತಿ ಲಭ್ಯವಾಗಿದೆ.
ಕಾರ್ಯಾಚರಣೆ ತಂಡ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪಣ್ಣೇಕರ್ ಅವರ ನಿರ್ದೇಶನದ ಮೇರೆಗೆ ಡಿವೈಎಸ್‍ಪಿ ಸುಂದರ್‍ರಾಜ್, ವೃತ್ತ ನಿರೀಕ್ಷಕ ಮೇದಪ್ಪ ಮಾರ್ಗದರ್ಶನಲ್ಲಿ ಮಡಿಕೇರಿ ನಗರ ಠಾಣಾಧಿಕಾರಿ ಷಣ್ಮುಗಂ, ಎಎಸ್‍ಐ ಸುಬ್ಬಯ್ಯ, ಸಿಬ್ಬಂದಿಗಳಾದ ರಾಯ್, ಸಿದ್ಧಾರ್ಥ, ದಿನೇಶ್ ಹಾಗೂ ಮಧು ಇವರುಗಳು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಸಫಲರಾದರು.