ಮಡಿಕೇರಿ, ಜು. 23: ಮಾನವ ಸಂಕುಲಕ್ಕೆ ಅಪಾಯಕಾರಿಯಾಗಿರುವ ಏಡ್ಸ್ ರೋಗದ ವಿರುದ್ಧ ಸಮಾಜದಲ್ಲಿ ಪ್ರತಿಯೊಬ್ಬರು ಜಾಗ್ರತೆ ವಹಿಸಬೇಕೆಂದು ದೆಹಲಿಯ ಏಡ್ಸ್ ನಿಯಂತ್ರಣ ಪ್ರತಿಷ್ಠಾನದ ಮುಖ್ಯಸ್ಥ ಡಾ. ಆರ್.ಕೆ. ವರ್ಮಾ ಕರೆ ನೀಡಿ ದರು. ಅಲ್ಲದೆ, ಏಡ್ಸ್ ಪೀಡಿತರನ್ನು ಸಮಾಜದಲ್ಲಿ ಬಹಿಷ್ಕರಿಸದೆ ಸಹಾನುಭೂತಿಯಿಂದ ನೋಡ ಬೇಕೆಂದು ತಿಳಿಹೇಳಿದರು. ಅಶುಚಿತ್ವ ದಿಂದ ಕೂಡಿದ ಲೈಂಗಿಕ ಸಂಪರ್ಕ, ಅಂಥ ಹೆಚ್.ಐ.ವಿ. ಸೋಂಕಿನ ರೋಗಿಗಳಿಗೆ ನೀಡಿದ ಚುಚ್ಚುಮದ್ದು ಮರು ಬಳಕೆ, ಅಂಥವರ ರಕ್ತದಿಂದ ಬೇರೆಯವರಿಗೂ ಈ ಕಾಯಿಲೆ ಹರಡಲಿದೆ ಎಂದು ಅವರು ಎಚ್ಚರಿಸಿದರು.

ಇಲ್ಲಿನ ಕೂರ್ಗ್ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ಇಂದು ಪೊಲೀಸ್ ಇಲಾಖೆಗೆ ಆಯೋಜಿಸಿದ್ದ ಏಡ್ಸ್ ನಿಯಂತ್ರಣ ಮತ್ತು ಅರಿವು ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎರಡು ದಶಕಗಳ ಹಿಂದೆ ಪರಿಹಾರ ಕಾಣದ ಭಯ ಮೂಡಿಸಿದ್ದ ಏಡ್ಸ್ ಕಾಯಿ ಲೆಗೂ ಇಂದು ಔಷಧೋಪಚಾರ ವಿದ್ದು, ಭಯಪಡುವ ಅಗತ್ಯವಿಲ್ಲ ವೆಂದು ಭರವಸೆಯ ಮಾತನಾಡಿದರು.

ಕೇಂದ್ರ ಸರಕಾರದ ರಕ್ಷಣಾ ಇಲಾಖೆಯಿಂದ ಗಡಿ ಭದ್ರತಾ ಪಡೆ ಯೋಧರಿಗೆ ಅರಿವು ಮೂಡಿಸುವ ಕಿರು ಸಾಕ್ಷ್ಯಚಿತ್ರ ಸಹಿತ, ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವಿಶೇಷ ಕಾರ್ಯಾಗಾರ ದೊಂದಿಗೆ ಜಾಗೃತಿ ಮೂಡಿಸಲಾಯಿತು.

ಜಿಲ್ಲಾ ಏಡ್ಸ್ ನಿಯಂತ್ರಣ ವಿಭಾಗದ ಅಧಿಕಾರಿ ಡಾ. ಶಿವಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜೇಶ್ ಅವರುಗಳು ಉಪಸ್ಥಿತರಿದ್ದು, ಪೊಲೀಸರಿಗೆ ಮಾಹಿತಿ ನೀಡಿದರು. 1980ರ ದಶಕದಲ್ಲಿ ವಿಶ್ವದಲ್ಲಿ ಏಡ್ಸ್ ಕಾಯಿಲೆಯ ಭಯಾನಕತೆ ಎಲ್ಲರನ್ನು ಕಾಡಿದ್ದು, 2000ನೇ ಇಸವಿ ತನಕವೂ ಅನೇಕರು ಸಾವನ್ನಪ್ಪಬೇಕಾಯಿತು ಎಂದು ಬೊಟ್ಟು ಮಾಡಿದರು.

ಅನಂತರದ ವರ್ಷಗಳಲ್ಲಿ ಈ ಕಾಯಿಲೆಗೂ ಪರಿಹಾರದೊಂದಿಗೆ ಔಷಧಿ ಲಭಿಸುವಂತಾಗಿ, ಜನತೆಯ ಭಯ ದೂರವಾಗುವತ್ತ ಸಾರ್ವತ್ರಿಕ ಅರಿವು ಮೂಡಿಸಲಾಗುತ್ತಿದೆ ಎಂದು ಮಾಹಿತಿಯಿತ್ತರು. ಕಾಲೇಜು ಹಂತದ ವಿದ್ಯಾರ್ಥಿ ಸಹಿತ, ಯುವ ಜನತೆ ಈ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕೆಂದು ಅಧಿಕಾರಿಗಳು ನೆನಪಿಸಿದರು.

ಆತ್ಮಸ್ಥೈರ್ಯ ತುಂಬಬೇಕು: ಕಾರ್ಯಾಗಾರದ ಕುರಿತು ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದ ಡಿವೈಎಸ್ಪಿ ಕೆ.ಎಸ್. ಸುಂದರರಾಜ್, ಮಾನವೀಯ ನೆಲೆಯಲ್ಲಿ ನೊಂದವರನ್ನು ಪೊಲೀಸ್ ಸಿಬ್ಬಂದಿಗಳು ಕಾಣುವಂತಾಗಬೇಕೆಂದು ತಿಳಿಹೇಳಿದರು. ವೀರಾಜಪೇಟೆ ಉಪ ವಿಭಾಗದ ಡಿವೈಎಸ್ಪಿ ನಾಗಪ್ಪ ಅವರು, ಹೆಚ್.ಐ.ವಿ. ಸೋಂಕಿನಿಂದ ಬರುವವರನ್ನು ಠಾಣೆಗಳಲ್ಲಿ ಅಸ್ಪøಶ್ಯರಂತೆ ಕಾಣದೆ, ಆತ್ಮಸ್ಥೈರ್ಯ ಕುಗ್ಗದಂತೆ ನೋಡಿಕೊಳ್ಳುವದು ನಮ್ಮ ಕರ್ತವ್ಯವೆಂದು ನೆನಪಿಸಿದರು. ಗ್ರಾಮಾಂತರ ಠಾಣಾಧಿಕಾರಿ ಚೇತನ್ ಕಾರ್ಯಕ್ರಮ ನಿರೂಪಿಸಿದರು.

ಕುಶಾಲನಗರ ಉಪ ವಿಭಾಗದ ಡಿವೈಎಸ್ಪಿ ಮುರಳಿಧರ್ ಸೇರಿದಂತೆ ವೃತ್ತ ನಿರೀಕ್ಷಕರಾದ ಮೇದಪ್ಪ, ಪ್ರದೀಪ್, ನಂಜುಂಡೇಗೌಡ, ಇತರ ಠಾಣಾಧಿಕಾರಿಗಳ ಸಹಿತ ನೂರಾರು ಪೊಲೀಸರು, ಮಹಿಳಾ ಸಿಬ್ಬಂದಿ ಈ ವಿಶೇಷ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.