ಗೋಣಿಕೊಪ್ಪಲು, ಜು.23: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯು ವೀರಾಜಪೇಟೆಯ ಪುರಭವನ ಸಭಾಂಗಣದಲ್ಲಿ ನಡೆಯಿತು.ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅವರ ರಾಜೀನಾಮೆ ವಿಷಯದಲ್ಲಿ ಚರ್ಚೆಗಳು ನಡೆದವು. ಈ ಸಂದರ್ಭ ಕಾನೂರಿನ ಪಕ್ಷದ ಮುಖಂಡರಾದ ಸುರೇಶ್ ಅವರು ಸಂಕೇತ್ ಪೂವಯ್ಯ ಅವರ ರಾಜೀನಾಮೆಯು ಅಂಗೀಕಾರವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸದ್ಯದಲ್ಲೇ ವೀಕ್ಷಕರ ತಂಡ ಕೊಡಗಿಗೆ ಆಗಮಿಸಿ ನೂತನ ಅಧ್ಯಕ್ಷರ ನೇಮಕಾತಿ ಬಗ್ಗೆ ಚರ್ಚೆ ನಡೆಸಲಿದೆ ಎಂದು ಮಾಹಿತಿ ಒದಗಿಸುತ್ತಿದ್ದಂತೆಯೇ ಸಭೆಯು ಗೊಂದಲದಲ್ಲಿ ಮುಳುಗಿತು. ಗೊಂದಲದ ನಡುವೆ ತನ್ನ ಮಾತನ್ನು ಮುಂದುವರಿಸಿದ ಸುರೇಶ್ ಪಕ್ಷ ಸಂಘಟನೆಯಲ್ಲಿ ಸಂಕೇತ್ ವಿಫಲರಾಗಿದ್ದಾರೆ. ವೀರಾಜಪೇಟೆ ಕ್ಷೇತ್ರದ ಬದಲು ಸೋಮವಾರಪೇಟೆ ಭಾಗದಲ್ಲಿ (ಮೊದಲ ಪುಟದಿಂದ) ಜೀವಿಜಯ ಪರ ಹೆಚ್ಚಾಗಿ ಕೆಲಸ ಮಾಡಿದ್ದರಿಂದ ಈ ಕ್ಷೇತ್ರದಲ್ಲಿ ಸಂಘಟನೆ ಕಟ್ಟಲು ವಿಫಲರಾಗಿದ್ದಾರೆ. ಪಕ್ಷ ಯಾರ ಆಸ್ತಿಯೂ ಅಲ್ಲ. ರಾಜ್ಯದಲ್ಲಿ ಸರ್ಕಾರ ಇರುವುದರಿಂದ ಕಾರ್ಯಕರ್ತರ ಕಷ್ಟ ಸುಖಗಳಿಗೆ ಮುಖಂಡರು ಸ್ಪಂದಿಸಬೇಕು ಎಂದರು.
ಪಕ್ಷದ ಮತ್ತೊಬ್ಬ ಪ್ರಮುಖ ಕಾರ್ಯಪ್ಪ ಮಾತನಾಡಿ ಕ್ಷೇತ್ರದಲ್ಲಿ ಯಾರನ್ನೂ ವಿಶ್ವಾಸಕ್ಕೆ ಪಡೆಯದ ಹಿನ್ನೆಲೆಯಲ್ಲಿ ಪಕ್ಷಕ್ಕೆ ಹೀನಾಯ ಸೋಲಾಗಿದೆ. ಮುಂದೆ ಪಕ್ಷ ಗಟ್ಟಿಯಾಗಲು ಹೊಸ ಅಧ್ಯಕ್ಷರ ನೇಮಕಾತಿ ನಡೆಯಬೇಕು. ರಾಜೀನಾಮೆ ನೀಡಿದವರನ್ನು ಮತ್ತೆ ಒತ್ತಾಯಿಸಬೇಡಿ ಎಂದರು. ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಂತೆ ಸಭೆಯಲ್ಲಿ ಮಾತನಾಡುತ್ತಿದ್ದ ಕಾರ್ಮಾಡು ಸುಬ್ಬಣ್ಣ ಸೇರಿದಂತೆ ಇನ್ನಿತರ ಮುಖಂಡರ ಮಾತುಗಳು ಕೇಳಿಸಲಾರದ ಪರಿಸ್ಥಿತಿ ನಿರ್ಮಾಣವಾಯಿತು. ಅಂತಿಮವಾಗಿ ಯಾವದೇ ನಿರ್ಣಯ ಕೈಗೊಳ್ಳದೆ ಸಭೆಯಿಂದ ಒಬ್ಬೊಬ್ಬರಾಗಿಯೇ ನಿರ್ಗಮಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ, ವೀರಾಜಪೇಟೆಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಎಸ್.ಹೆಚ್ ಮತೀನ್ ಯಾವದೇ ನಿರ್ಣಯ ಕೈಗೊಳ್ಳಲು ಸಾಧ್ಯವಾಗಿಲ್ಲ ವೆಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಪಕ್ಷದ ಮುಖಂಡರಾದ ಪಿ.ಎ ಮಂಜುನಾಥ್, ಅಮ್ಮಂಡ ವಿವೇಕ್, ಅಜ್ಜಮಾಡ ಮುತ್ತಮ್ಮ, ಅಮ್ಮತ್ತಿ ಜಯಮ್ಮ, ಶಂಕ್ರು ನಾಚಪ್ಪ, ಸಣ್ಣುವಂಡ ಶ್ರೀನಿವಾಸ್, ಮನೆಯಪಂಡ ಬೆಳ್ಳಿಯಪ್ಪ ಮುಂತಾದವರು ಹಾಜರಿದ್ದರು.
ರಾಜೀನಾಮೆ ಹಿಂಪಡೆಯವಂತೆ ಒತ್ತಾಯ
ಸಭೆಯನ್ನು ಮುಗಿಸಿದ ಬಳಿಕ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಒಗ್ಗಟ್ಟಾಗಿ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ನಿವಾಸಕ್ಕೆ ತೆರಳಿ ರಾಜಕೀಯ ಬೆಳವಣಿಗೆ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದರು.
ರಾಜೀನಾಮೆ ವಿಚಾರದಲ್ಲಿ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ವಿಷಯ ತಿಳಿಸದೆ ರಾಜೀನಾಮೆ ಸಲ್ಲಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ನಂತರ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚಿಸಿ ಯಾವದೇ ಕಾರಣಕ್ಕೂ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಅಂಗೀಕರಿಸ ದಂತೆ ಖುದ್ದು ಭೇಟಿ ನೀಡಿ ಇಲ್ಲಿಯ ನೈಜ ಪರಿಸ್ಥಿತಿಯನ್ನು ಕುಮಾರಸ್ವಾಮಿ ಹಾಗೂ ದೇವೇಗೌಡÀರಿಗೆ ಮನವರಿಕೆ ಮಾಡಿಕೊಡುವದಾಗಿ ಮುಖಂಡರು ತಿಳಿಸಿದರು.
ಮುಖಂಡರು ಸಂಕೇತ್ ಅವರ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸುವಂತೆ ಕೇಳಿಕೊಂಡರು. ಈ ಸಂದರ್ಭ ಮನಸ್ಸಿಗೆ ನೋವಾಗಿ ರಾಜೀನಾಮೆ ತೀರ್ಮಾನ ಮಾಡಿದ್ದೆ. ಎಲ್ಲರಿಗೂ ತಿಳಿದಿರುವಂತೆ ಜಿಲ್ಲೆಯ ಉದ್ದಗಲಕ್ಕೂ ಸಂಚರಿಸಿ ಪಕ್ಷ ಕಟ್ಟಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಇದರಲ್ಲಿ ನನಗೆ ಆತ್ಮತೃಪ್ತಿ ಇದೆ. ಪಕ್ಷ ಯಾವದೇ ಜವಾಬ್ದಾರಿ ನೀಡಿದರು ಅದನ್ನು ನಡೆಸಿಕೊಂಡು ಹೋಗುತ್ತೇನೆ ಆತುರದಲ್ಲಿ ಕೈಗೊಂಡ ತೀರ್ಮಾನಕ್ಕೆ ಮನ್ನಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭ ಪಕ್ಷದ ಮುಖಂಡರಾದ ಪಾಣತ್ತಲೆ ವಿಶ್ವನಾಥ್, ಸಂಪಾಜೆ ಆದಂ, ಎಸ್.ಹೆಚ್ ಮತೀನ್,ಪಿ.ಎ ಮಂಜುನಾಥ್, ಅಮ್ಮಂಡ ವಿವೇಕ್, ಮಂಡೆಪಂಡ ಮದನ್, ಮುತ್ತಪ್ಪ, ಹರ್ಷ, ಪರಮಾಲೆ ಗಣೇಶ್, ಅಜ್ಜಮಾಡ ಮುತ್ತಮ್ಮ, ಶಂಕ್ರು ನಾಚಪ್ಪ, ಅಮ್ಮತ್ತಿ ಜಯಮ್ಮ, ಪಂದಿಯಂಡ ರವಿ, ಇಟ್ಟೀರ ಸಂಪತ್, ಸಕ್ಲೈನ್, ನೂರ್, ಅಯಾಸ್, ಅಶ್ರಫ್ ಅಲಿ, ಸುಮಿತ್ರ, ವೀಣಾ, ವಲ್ಲಂಡ ಕಮಲ, ಸರಸ್ವತಿ, ಆರ್ಮುಗಂ, ಬಾಳೆಲೆಯ ಮಾಪಂಗಡ ಟಾಟು, ಮುಕ್ಕಾಟೀರ ಗಣೇಶ್, ಶಿವನಂಜಪ್ಪ, ಸಜ್ಜು ಮೊಣ್ಣಪ್ಪ, ನಾಪಂಗಡ ಅಪ್ಪಣ್ಣ ಮುಂತಾದವರು ಉಪಸ್ಥಿತರಿದ್ದರು.