ಮಡಿಕೇರಿ, ಜು. 23: ಎಲ್ಲ ವಾಹನ ಚಾಲಕರು ಮತ್ತು ಮಾಲೀಕರು ಕಾನೂನು ಪಾಲಿಸುವದರೊಂದಿಗೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸದೆ ಜನರ ಪ್ರಾಣ ರಕ್ಷಣೆಯತ್ತ ಜಾಗರೂಕತೆಯಿಂದ ತಮ್ಮ ತಮ್ಮ ವಾಹನಗಳನ್ನು ಚಾಲಿಸಬೇಕೆಂದು ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ಸಲಹೆ ನೀಡಿದ್ದಾರೆ.

ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ವಾಹನಗಳ ಚಾಲಕರು ಹಾಗೂ ಮಾಲೀಕರಿಗೆ ಸಂಚಾರ ನಿಯಮ ಸುರಕ್ಷಾ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾರ್ಗದರ್ಶನ ನೀಡಿದರು. ಅಲ್ಲದೆ ಮೂರ್ನಾಡು ವ್ಯಾಪ್ತಿಯ ಚಾಲಕ-ಮಾಲೀಕರಿಗೂ ಅರಿವು ಕಾರ್ಯಕ್ರಮ ನಡೆಸಿದರು.

ಮುಖ್ಯವಾಗಿ ಸಂಚಾರ ನಿಯಮ ಪಾಲನೆ, ದಾಖಲೆ ಪತ್ರಗಳ ಸಮರ್ಪಕ ನಿರ್ವಹಣೆ, ವಿಮಾ ಪಾವತಿ ದಾಖಲೆ ಸೇರಿದಂತೆ ಚಾಲನಾ ಪತ್ರ, ಸಮವಸ್ತ್ರ ಧರಿಸಿ ಬಾಡಿಗೆ ವಾಹನ ಓಡಿಸುವದು ಸೇರಿದಂತೆ ಪ್ರಮುಖ ಅಂಶಗಳ ಪಾಲನೆಗೆ ಸೂಚಿಸಿದರು.

ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ನಂಜುಂಡಸ್ವಾಮಿ, ಗ್ರಾಮಾಂತರ ಠಾಣಾಧಿಕಾರಿ ಚೇತನ್ ಹಾಗೂ ಸಿಬ್ಬಂದಿ ಸೇರಿದಂತೆ ಗ್ರಾಮೀಣ ಚಾಲಕರು ಮತ್ತು ಮಾಲೀಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.