ಕುಶಾಲನಗರ, ಜು. 23: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ಹಾಗೂ ಕುಶಾಲನಗರ ವಲಯ ಮಟ್ಟದ ಪ್ರಗತಿ ಬಂಧು ಸ್ವಸಹಾಯ ಸಂಘದ ಸದಸ್ಯರುಗಳಿಗೆ ಪರಿಸರ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮ ಗುಡ್ಡೆಹೊಸೂರು ಗ್ರಾಮದಲ್ಲಿ ನಡೆಯಿತು. ಅಲ್ಲಿನ ಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಸ್ಥಳೀಯ ಕೃಷಿ ಪ್ರಶಸ್ತಿ ವಿಜೇತ ಧನಪಾಲ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ನದಿ, ತೊರೆಗಳು ಕಲುಷಿತಗೊಳ್ಳದಂತೆ ಜಾಗೃತಿ ವಹಿಸುವದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಜೀವ ಜಲವನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಇಂದಿನಿಂದಲೇ ಕಾರ್ಯಯೋಜನೆ ರೂಪಿಸುವದು ಅಗತ್ಯವಾಗಿದೆ.

ಜಲ ಮೂಲಗಳಿಗೆ ಪ್ಲಾಸ್ಟಿಕ್ ತ್ಯಾಜ್ಯ ಸೇರದಂತೆ ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕಿದೆ ಎಂದರು. ಪ್ರಾಸ್ತಾವಿಕ ನುಡಿಗಳಾಡಿದ ವಲಯ ಮೇಲ್ವಿಚಾರಕ ಹರೀಶ್, ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆ ಬಗ್ಗೆ ಸದಸ್ಯರಲ್ಲಿ ಜಾಗೃತಿ ಮೂಡಿಸಿದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯೆ ಪಾರ್ವತಿ, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿ ಗಳು ಸೇರಿದಂತೆ 100 ಕ್ಕೂ ಅಧಿಕ ಸದಸ್ಯರು ಪಾಲ್ಗೊಂಡಿದ್ದರು.