ಸೋಮವಾರಪೇಟೆ, ಜು. 23: ಜಿಲ್ಲೆಯ ಸೋಮವಾರಪೇಟೆ ತಾಲೂಕಿ ನಲ್ಲಿ ಬೆಂಕಳ್ಳಿ ಎಂಬ ಗ್ರಾಮವಿದೆ ಎಂಬದನ್ನೇ ಜನಪ್ರತಿನಿಧಿಗಳು ಮರೆತಿರುವಂತಿದೆ. ಚುನಾವಣೆ ಸಂದರ್ಭ ಮಾತ್ರ ಇಲ್ಲಿಗೆ ಎಡತಾಕುವ ಮಂದಿ ನಂತರ ಇತ್ತ ತಲೆಹಾಕುವ ದಿರಲಿ.., ಈ ಗ್ರಾಮವನ್ನೇ ಸ್ಮøತಿ ಪಟಲದಿಂದ ಮರೆತುಬಿಡುತ್ತಾರೆ. ಇಲ್ಲಿನ ಮಂದಿ ಮಾತ್ರ ಹೊಳೆಯಲ್ಲಿ ಮುಳುಗೇಳುತ್ತಾ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿರುತ್ತಾರೆ.

ಬೆಂಕಳ್ಳಿ ಗ್ರಾಮದ ಸಮಸ್ಯೆಗಳ ಸಾಲಿನಲ್ಲಿ ಅಗ್ರ ಸ್ಥಾನದಲ್ಲಿರುವದು ಸೇತುವೆ ಸಮಸ್ಯೆ. ಗ್ರಾಮದ ಬದನೆಗುಂಡಿ ಹೊಳೆಗೆ ಸೇತುವೆ ನಿರ್ಮಿಸಿ ನಮ್ಮನ್ನು ಬದುಕಿಸಿ ಎಂದು ಅದೆಷ್ಟು ಬಾರಿ ಅವಲತ್ತುಕೊಂಡರೂ ಸಹ ಜನನಾಯಕರ ಮನಸ್ಸು ಮಾತ್ರ ಕರಗಿಲ್ಲ. ಅಧಿಕಾರಿಗಳಂತೂ ಸರ್ಕಾರದ ಸಂಬಳ ಬಂದರೆ ಸಾಕು ಎಂಬಂತಹ ಅಸಡ್ಡೆ ತೋರುವದು ತಪ್ಪಿಲ್ಲ.

ತಾಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಯ ಪುಷ್ಪಗಿರಿ ಬೆಟ್ಟತಪ್ಪಲಿಗೆ ಹೊಂದಿಕೊಂಡಂತೆ ಇರುವ ಬೆಂಕಳ್ಳಿ ಗ್ರಾಮದಲ್ಲಿ ಹರಿಯುವ ಈ ಹೊಳೆ ಮಳೆಗಾಲದಲ್ಲಿ ಆಚೆ ಬದಿಯ ಜನರನ್ನು ಹೊರಜಗತ್ತಿನಿಂದ ಬೇರ್ಪಡಿಸುತ್ತದೆ.

3 ಕಿ.ಮೀ. ಬಳಸು ದಾರಿ: ಗ್ರಾಮದ ಶಿಲ್ಪ ವಿಜಯ, ಕಾಂತಿ ಶಿವಯ್ಯ, ರೇಖಾ ವೀರರಾಜು, ಗುಣವತಿ ಶಂಕರ, ವಿಜಿತ ಕುಟ್ಟಪ್ಪ, ರೇಷ್ಮ ಅಪ್ಪಯ್ಯ, ಆಶಾಕುಮಾರಿ ಧರ್ಮಪ್ಪ, ರಮೇಶ್, ಅರುಣ, ಸುರೇಶ್, ಪಾಪಯ್ಯ, ಲಲಿತ, ಚಿನ್ನವ್ವ ಕಾಳಪ್ಪ, ಯಶೋಧ ಹೂವಯ್ಯ, ಚಂದ್ರಾವತಿ ಮಲ್ಲಪ್ಪ, ವಿನಯ, ಯೋಗೇಶ್ ಸೇರಿದಂತೆ ಇತರರ ಮನೆ ಹಾಗೂ ಕೃಷಿ ಪ್ರದೇಶಗಳಿಗೆ ಮಳೆಗಾಲದಲ್ಲಿ ತೆರಳಲು ಹೊಳೆ ಅಡ್ಡಿಯಾಗಿದ್ದು, ಸೇತುವೆ ಇಲ್ಲದ್ದರಿಂದ 3 ಕಿ.ಮೀ. ಬಳಸಿಕೊಂಡು ಸಾಗಬೇಕಿದೆ.

ಮಳೆಗಾಲದಲ್ಲಿ ಸಂಪರ್ಕ ಕಡಿತ: ಹೊಳೆಯ ಆಚೆ ಬದಿಯಲ್ಲಿ 6 ಕುಟುಂಬಗಳು ವಾಸವಿದ್ದು, ಮಳೆಗಾಲದಲ್ಲಿ ಬದನೆಗುಂಡಿ ಹೊಳೆ ತುಂಬಿ ಹರಿಯುವದರಿಂದ ಹೊರ ಜಗತ್ತಿನ ಸಂಪರ್ಕ ಕಳೆದುಕೊಳ್ಳುತ್ತಾರೆ. ಈ ಭಾಗದಲ್ಲಿರುವ ಮಂದಿಯ ಗದ್ದೆ, ತೋಟಗಳು ಹೊಳೆಯ ಆ ಬದಿಯಲ್ಲಿರುವದರಿಂದ ಯಾವದೇ ಕೆಲಸ ಕಾರ್ಯ ಮಾಡಲೂ ಅಸಾಧ್ಯವಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಹಿಂದೆ ಶಾಂತಳ್ಳಿಯ ಕೃಷ್ಣಕುಮಾರ್ ಅವರು ತಾ.ಪಂ. ಸದಸ್ಯರಾಗಿದ್ದ ಸಂದರ್ಭ ಹೊಳೆಯವರೆಗೂ ರಸ್ತೆಗಾಗಿ ಬೋಡ್ರಸ್ ಕಲ್ಲುಗಳನ್ನು ಹಾಕಿರುವದನ್ನು ಹೊರತುಪಡಿಸಿದರೆ, ನಂತರ ಗೆದ್ದುಬಂದ ಜನಪ್ರತಿನಿಧಿಗಳು ಇತ್ತ ತಲೆಹಾಕಿಯೂ ನೋಡಿಲ್ಲ.

ಹೊಳೆಯ ಆಚೆ ಬದಿಯಿರುವ ಮನೆಗಳಲ್ಲಿ ಯಾವದೇ ವಿದ್ಯಾರ್ಥಿಗಳಿಲ್ಲ. ಹೊಳೆಗೆ ಸೇತುವೆ ನಿರ್ಮಿಸದ ಹಿನ್ನೆಲೆ ಮಳೆಗಾಲದಲ್ಲಿ ಶಾಲಾ ಕಾಲೇಜಿಗೆ ತೆರಳುವದು ಅಸಾಧ್ಯ. ಹೀಗಾಗಿ ಪಟ್ಟಣ ಭಾಗದಲ್ಲಿರುವ ನೆಂಟರಿಷ್ಟರ ಮನೆಯಲ್ಲಿ ಮಕ್ಕಳನ್ನು ಬಿಡಬೇಕಿದೆ ಎಂದು ಗ್ರಾಮದ ಶಿಲ್ಪ ಅವರು ತಮ್ಮ ಸ್ಥಿತಿಯನ್ನು ವಿವರಿಸಿದ್ದಾರೆ.

‘ಹೊಳೆಯ ಆಚೆ ಬದಿಯಲ್ಲಿರುವ ಕೃಷಿ ಪ್ರದೇಶಗಳಿಗೆ ತೆರಳಲು ಅಸಾಧ್ಯವಾಗಿರುವ ಹಿನ್ನೆಲೆ, ಕೃಷಿ ಕಾರ್ಯ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಗದ್ದೆ ನಾಟಿ, ತೋಟಕ್ಕೆ ಗೊಬ್ಬರ ಹಾಕಲೂ ಸಹ ಸಮಸ್ಯೆಯಾಗಿದೆ. ಈ ಹೊಳೆಗೆ ಸೇತುವೆ ನಿರ್ಮಿಸಿಕೊಡಿ ಎಂದು ಅದೆಷ್ಟು ಬಾರಿ ಮನವಿ ಮಾಡಿದ್ದರೂ ಯಾರೂ ಸ್ಪಂದಿಸುತ್ತಿಲ್ಲ’ ಎಂದು ಗ್ರಾಮಸ್ಥ ವಿಜಯ್ ಆರೋಪಿಸಿದ್ದಾರೆ.

‘ಇಂದಲ್ಲ ನಾಳೆ ಸೇತುವೆ ನಿರ್ಮಿಸುತ್ತಾರೆ ಎಂಬ ಆಶಾವಾದದಿಂದ ಇಷ್ಟು ದಶಕಗಳ ಕಾಲ ಅಂತಹ ಸಂಕಷ್ಟದಲ್ಲಿಯೂ ಜೀವಿಸಿದ್ದೇವೆ. ಮುಂದಿನ ಸರ್ಕಾರಕ್ಕೆ ಪ್ರಸ್ತಾವನೆ : ಅಭಿಯಂತರ ವೀರೇಂದ್ರ: ಬೆಂಕಳ್ಳಿ ಗ್ರಾಮದ ಜನರ ಬೇಡಿಕೆಯಾಗಿರುವ ಸೇತುವೆಗೆ ಕಳೆದ 5 ವರ್ಷಗಳ ಹಿಂದೆಯೇ ಕ್ರಿಯಾಯೋಜನೆ ತಯಾರಿಸಿ ಪಶ್ಚಿಮಘಟ್ಟಗಳ ಅಭಿವೃದ್ಧಿ ಯೋಜನೆಯಡಿ ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಅಲ್ಲಿಂದ ಅನುದಾನ ಬಿಡುಗಡೆಯಾಗಿಲ್ಲ. ಗ್ರಾಮಸ್ಥರು ಒಪ್ಪಿದರೆ ಕಾಲು ಸೇತುವೆ ನಿರ್ಮಿಸಲು ಜಿ.ಪಂ.ಮೂಲಕ ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗುವದು ಎಂದು ಜಿ.ಪಂ. ಅಭಿಯಂತರ ವೀರೇಂದ್ರ ‘ಶಕ್ತಿ’ಗೆ ತಿಳಿಸಿದ್ದಾರೆ.

ಕಾಲು ಸೇತುವೆ ನಿರ್ಮಿಸಲು ಕ್ರಮ-ತಹಶೀಲ್ದಾರ್ : ಬೆಂಕಳ್ಳಿ ಗ್ರಾಮದ ಸೇತುವೆ ಸಮಸ್ಯೆ ಬಗ್ಗೆ ಇಲಾಖಾಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಗುವದು. ಕಾಲು ಸೇತುವೆ ನಿರ್ಮಿಸಲು ಮಳೆಹಾನಿ ಪರಿಹಾರ ನಿಧಿಯಡಿ ಅನುದಾನ ಕಲ್ಪಿಸಲು ಕ್ರಮಕೈಗೊಳ್ಳಲಾಗುವದು ಎಂದು ತಹಶೀಲ್ದಾರ್ ಮಹೇಶ್ ತಿಳಿಸಿದ್ದಾರೆ.

ಸೌಕರ್ಯ ಕಲ್ಪಿಸಿ - ಕೆ.ಎಂ. ಲೋಕೇಶ್: ಬೆಂಕಳ್ಳಿ ಗ್ರಾಮಕ್ಕೆ ಕಳೆದ 20 ವರ್ಷಗಳ ಹಿಂದೆ ರಸ್ತೆಗಾಗಿ ಬೋಡ್ರಸ್ ಕಲ್ಲುಗಳನ್ನು ಹಾಕಿದ್ದನ್ನು ಹೊರತುಪಡಿಸಿದರೆ ಬೇರಿನ್ಯಾವದೇ ಕೆಲಸ ಮಾಡಿಲ್ಲ. ಚುನಾಯಿತ ಜನಪ್ರತಿನಿಧಿಗಳು ಈ ಗ್ರಾಮದ ಮೇಲೆ ಹೆಚ್ಚಿನ ಗಮನವನ್ನೇ ಹರಿಸುತ್ತಿಲ್ಲ. ಜನತೆಯ ಬಹುಕಾಲದ ಬೇಡಿಕೆಯಾದ ಸೇತುವೆ ನಿರ್ಮಿಸಲು ಜಿ.ಪಂ. ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಮುಂದಾಗಬೇಕು.

ಕೆ.ಎಂ. ಲೋಕೇಶ್, ತಾ.ಪಂ. ಮಾಜೀ ಅಧ್ಯಕ್ಷ