ಮಡಿಕೇರಿ, ಜು. 24: ಕಳೆದ ಹಲವು ದಿನಗಳಿಂದ ನಿರಂತರವಾಗಿ ಮುಂಗಾರು ಮಳೆಯನ್ನು ಎದುರಿಸುತ್ತಿರುವ ಕೊಡಗು ಜಿಲ್ಲೆಯ ಹಲವೆಡೆಗಳಲ್ಲಿ ಮಳೆ ಈ ಹಿಂದಿಗಿಂತ ತುಸು ಕಡಿಮೆಯಾಗಿದ್ದರೂ, ಜಿಲ್ಲಾ ಕೇಂದ್ರವಾದ ಮಂಜಿನ ನಗರಿ ಮಡಿಕೇರಿ ಭಾಗಮಂಡಲ, ತಲಕಾವೇರಿ ಮತ್ತಿತರ ಕಡೆಗಳಲ್ಲಿ ಬಿರುಸು ತೋರುತ್ತಿದೆ.

ಜಿಲ್ಲಾ ಕೇಂದ್ರದಲ್ಲಿ ಮಳೆ ಗಾಳಿಯೊಂದಿಗೆ ತೀರಾ ಚಳಿಯ ವಾತಾವರಣವೂ ಮುಂದುವರಿ ಯುತ್ತಿದ್ದು, ಮಂಗಳವಾರವೂ ಮಳೆಯ ರಭಸ ಹೆಚ್ಚಾಗಿತ್ತು. ತೀರಾ ಚಳಿಯ ಸನ್ನಿವೇಶದೊಂದಿಗೆ ಗಾಳಿಯೂ ಆಗಾಗ್ಗೆ ಬೀಸುತ್ತಿರುವ ಹಿನ್ನೆಲೆಯಲ್ಲಿ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಮಳೆ ಇಳಿಮುಖವಾಗುವದನ್ನು ಕಾಯುವಂತಾಗಿದೆ.

ಮಡಿಕೇರಿ ಮಾತ್ರವಲ್ಲದೆ ಜಿಲ್ಲೆಯ ಕೆಲವು ಗ್ರಾಮೀಣ ಪ್ರದೇಶಗಳಲ್ಲೂ ರಭಸದ ಮಳೆಯಾಗುತ್ತಿರುವ ಕುರಿತು ವರದಿಯಾಗಿದೆ. ಈಗಾಗಲೇ ಅತಿವೃಷ್ಟಿಯಿಂದಾಗಿ ಜಿಲ್ಲೆಯು ಹಲವಷ್ಟು ಸಮಸ್ಯೆಗಳನ್ನು ಎದುರಿಸಿದ್ದು, ಮಳೆಯ ಪ್ರಮಾಣ ಇನ್ನೂ ಮುಂದುವರಿಯುತ್ತಿರುವದರಿಂದ ಇನ್ನಷ್ಟು ಹಾನಿ ಸಂಭವಿಸುವ ಸಾಧ್ಯತೆ ಬಗ್ಗೆ ಜನತೆ ಅದರಲ್ಲೂ ಬೆಟ್ಟ ಪ್ರದೇಶದಂತಹ ಆಯಕಟ್ಟಿನ ಸ್ಥಳದಲ್ಲಿ ನೆಲೆಸಿರುವ ಮಂದಿ ಆತಂಕ ಪಡುವಂತಾಗಿದೆ. ಇನ್ನು ಕೃಷಿ ಫಸಲುಗಳು ದಿನೇ ದಿನೇ ನೆಲಕಚ್ಚುತ್ತಿರುವದು ಮುಂದಿನ ಭವಿಷ್ಯದ ಬಗ್ಗೆ ದಿಗಿಲು ಮೂಡಿಸುತ್ತಿದೆ.

ಮಡಿಕೇರಿಗೆ ಅಧಿಕ ಮಳೆ

ಕಳೆದ 24 ಗಂಟೆಯಲ್ಲಿ ವರದಿಯಾದಂತೆ ಜಿಲ್ಲಾ ಕೇಂದ್ರ ಮಡಿಕೇರಿಗೆ ಅಧಿಕ ಮಳೆಯಾಗಿದೆ. ಮಡಿಕೇರಿ ನಗರ ಹಾಗೂ ಹೋಬಳಿ ಯಲ್ಲಿ 3.88 ಇಂಚು ಮಳೆಯಾಗಿದೆ. ತಾಲೂಕಿನ ಭಾಗಮಂಡಲ ಹಾಗೂ ಸಂಪಾಜೆ ಹೋಬಳಿಯಲ್ಲೂ 2.96 ಇಂಚು ಮಳೆ ಸುರಿದಿದ್ದರೆ, ನಾಪೋಕ್ಲು ಹೋಬಳಿಯಲ್ಲಿ 1.59 ಇಂಚು ಮಳೆಯಾಗಿದೆ.

ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿಯಲ್ಲಿ 2.48 ಇಂಚು, ಸುಂಟಿಕೊಪ್ಪ 1.17, ಸೋಮವಾರಪೇಟೆ 1.40, ಶನಿವಾರಸಂತೆ 0.93 ಹಾಗೂ ಕೊಡ್ಲಿಪೇಟೆ ಹೋಬಳಿಯಲ್ಲಿ 0.76 ಇಂಚು ಮಳೆಯಾಗಿದೆ.

ವೀರಾಜಪೇಟೆ ತಾಲೂಕಿನ ಶ್ರೀಮಂಗಲ ಹೋಬಳಿಯಲ್ಲಿ 1.69 ಇಂಚು, ವೀರಾಜಪೇಟೆ 1.04 ಹಾಗೂ ಹುದಿಕೇರಿಯಲ್ಲಿ 0.76 ಇಂಚು ಸರಾಸರಿ ಮಳೆ ಕಳೆದ 24 ಗಂಟೆಯಲ್ಲಿ ದಾಖಲಾಗಿದೆ.

ಹಾರಂಗಿ ಜಲಾಶಯಕ್ಕೆ 12086 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ನದಿಗೆ 11,970 ಕ್ಯೂಸೆಕ್ಸ್ ನೀರು ಹಾಗೂ ನಾಲೆಗೆ 550 ಕ್ಯೂಸೆಕ್ಸ್ ನೀರನ್ನು ಬಿಡಲಾಗುತ್ತಿದೆ.