ಬೆಂಗಳೂರು, ಜು.23 : ಟಿವಿ ಮಾಧ್ಯಮಗಳು ಘನತೆ, ಗೌರವ ಕಾಪಾಡಿಕೊಂಡು ವರದಿಗಳನ್ನು ಮಾಡಬೇಕು ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಸೋಮವಾರ ಮಾಧ್ಯಮಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರೇವಣ್ಣ, ನಾನು ಬೇರೆ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡುವದಿಲ್ಲ. ಹಸ್ತಕ್ಷೇಪ ಮಾಡುವದಕ್ಕೆ ನನಗೇನೂ ಹುಚ್ಚು ಹಿಡಿದಿದೆಯೇ? ಎಂದು ಪ್ರಶ್ನಿಸಿದರು. ಬೇರೆ ಇಲಾಖೆಗಳಲ್ಲಿ ನಾನೇಕೆ ಹಸ್ತಕ್ಷೇಪ ಮಾಡಲಿ, ನಾನ್ಯಾಕೆ ನನ್ನ ಇಲಾಖೆ ಬಿಟ್ಟು ಬೇರೆ ಕಡೆ ತಲೆ ಹಾಕಲಿ, ಮುಜರಾಯಿ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದೇನೆ, ಆ ಅಧಿಕಾರಿಗಳ ಜತೆ ಸಭೆ ಮಾಡಿದ್ದೇನೆ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿದ್ದೀರಿ ಎಂದು ಮಾಧ್ಯಮದವರ ಮೇಲೆ ಹರಿಹಾಯ್ದಿದ್ದಾರೆ. ಈ ಹಿಂದೆ ವಾರ ಪತ್ರಿಕೆಯೊಂದು ನನ್ನ ವಿರುದ್ಧ ನಿರಂತರವಾಗಿ ಸುದ್ದಿ ಮಾಡಿತ್ತು. ಆದರೂ ನಾನು ಐದು ಬಾರಿ ಎಂಎಲ್‍ಎ ಆದೆ. ನೀವು ಏನೇ ಮಾಡಿದರೂ ನಾನು ಹೆದರುವದಿಲ್ಲ. ಸುಳ್ಳು ಸುದ್ದಿ ಮಾಡಿ ನಿಮ್ಮ ಹೆಸರು ನೀವೇ ಹಾಳು ಮಾಡಿಕೊಳ್ಳುತ್ತೀರಿ. ನಿಮಗೆ ಹೆದರಿ ನಾನು ಮನೆಗೆ ಓಡಿ ಹೋಗುವದಿಲ್ಲ. ನಿಮಗೆ ಬೇಕಾದ ಹಾಗೆ ಸುದ್ದಿ ಮಾಡಿಕೊಳ್ಳಿ ಎಂದು ಕಿಡಿಕಾರಿದರು.