ಮಡಿಕೇರಿ, ಜು.24 :ಕೊಡಗು ಜಿಲ್ಲೆಯನ್ನು ಅನಾಥ ಮಾನಸಿಕ ಅಸ್ವಸ್ಥರ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದ್ದು, ಇದರ ಅಂಗವಾಗಿ ತಾ.25ರಿಂದ ‘ವಿಕಾಸ ಅಭಿಯಾನ’ವನ್ನು ಆಯೋಜಿಸಲಾಗುತ್ತಿದೆ ಎಂದು ವಿಕಾಸ್ ಜನ ಸೇವಾ ಟ್ರಸ್ಟ್ನ ಪದಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಟ್ರಸ್ಟ್ನ ಅಧ್ಯಕ್ಷ ಹೆಚ್.ಕೆ.ರಮೇಶ್ ಹಾಗೂ ಇತರರು, ವಿಕಾಸ್ ಜನ ಸೇವಾ ಟ್ರಸ್ಟ್ ಹಾಗು ಪ್ರಜಾಸತ್ಯ ಪತ್ರಿಕೆಯ ಸಹಯೋಗದಲ್ಲಿ ಈ ಅಭಿಯಾನ ನಡೆಯಲಿದ್ದು, ಕೊಡಗು ಜಿಲ್ಲೆಯಲ್ಲಿ ಅನಾಥ ಮಾನಸಿಕ ಅಸ್ವಸ್ಥರು ಕಂಡು ಬಂದಲ್ಲಿ ತಮ್ಮ ಸಂಸ್ಥೆಗೆ ಮಾಹಿತಿ ನೀಡಿದಲ್ಲಿ ಅವರನ್ನು ಕರೆತಂದು ಬೆಂಗಳೂರಿನಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ರವಾನಿಸುವದರೊಂದಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು.
ಕಳೆದ ಎರಡೂವರೆ ವರ್ಷದ ಹಿಂದೆ ಆರಂಭವಾಗಿರುವ ಟ್ರಸ್ಟ್, ಜಿಲ್ಲೆಯ ಅನಾಥ ನೊಂದ ಜೀವಗಳಿಗೆ ಆಶ್ರಯ ಮತ್ತು ಪುನರ್ವಸತಿ ಕಲ್ಪಿಸುವದರೊಂದಿಗೆ ನೊಂದ ನಿರಾಶ್ರಿತರು, ಮಹಿಳೆಯರು, ಹಿರಿಯ ನಾಗರಿಕರು, ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದೆ. ಈಗಾಗಲೇ 20ಮಂದಿ ನೊಂದ ಅನಾಥ ಜೀವಿಗಳಿಗೆ ಸಂಸ್ಥೆ ಆಶ್ರಯ ನೀಡಿದ್ದು, 19 ಮಂದಿ ಅಂಧ ವಿಕಲಚೇತನರಿಗೆÉ ನೇತ್ರ ತಜ್ಞ ಡಾ|| ಪ್ರಶಾಂತ್ ಅವರ ಮೂಲಕ ಉಚಿತವಾಗಿ ಕಣ್ಣಿನ ಚಿಕಿತ್ಸೆ ಕೊಡಿಸಿದೆ. ಜಿಲ್ಲಾಸ್ಪತ್ರೆ, ಆರೋಗ್ಯ ಇಲಾಖೆ, ವಿಕಲಚೇತನರ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲೆಯ ಸ್ಥಳೀಯ ಸಂಘಸಂಸ್ಥೆಗಳ ಸಹಕಾರದಿಂದ ನಾಲ್ಕು ಮಂದಿ ಅನಾಥ ಮಾನಸಿಕ ಅಸ್ವಸ್ಥರಿಗೆ ಬೆಂಗಳೂರಿನ ಆರ್ವಿಎಂ ಆಸ್ಪತ್ರೆಯಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಕೊಡಗು ಜಿಲ್ಲೆಯನ್ನು ಅನಾಥ ಮಾನಸಿಕ ಅಸ್ವಸ್ಥರ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಉದ್ದೇಶವನ್ನು ಟ್ರಸ್ಟ್ ಹೊಂದಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಸಂಘಸಂಸ್ಥೆಗಳು, ಸಾರ್ವಜನಿಕರ ನೆರವನ್ನು ಪಡೆಯಲಾಗುತ್ತದೆ. ಜಿಲ್ಲೆಯ ಯಾವದೇ ನಗರ, ಪಟ್ಟಣ, ಗ್ರಾಮಗಳಲ್ಲಿ ಅನಾಥ ಮಾನಸಿಕ ಅಸ್ವಸ್ಥರು ಕಂಡು ಬಂದಲ್ಲಿ ಅವರನ್ನು ಮಡಿಕೇರಿಯಲ್ಲಿರುವ ಟ್ರಸ್ಟ್ನ ಕಚೇರಿ ಕರೆತರಬಹುದು ಅಥವಾ ಸಂಸ್ಥೆಗೆ (08272-223433 ಅಥವಾ 9483110528)ಗೆ ಕರೆ ಮಾಡಿದಲ್ಲಿ ನಾವೇ ಅವರನ್ನು ಕರೆತರುವ ವ್ಯವಸ್ಥೆ ಮಾಡಲಿರುವದಾಗಿ ಹೇಳಿದರು. ಈ ಅಭಿಯಾನವನ್ನು ಜಿಲ್ಲಾಧಿಕಾರಿ ಪಿ.ಐ ಶ್ರೀವಿದ್ಯಾ ಅವರು ಆಂಬ್ಯುಲೆನ್ಸ್ ಚಾಲನೆ ಮಾಡುವ ಮೂಲಕ ಉದ್ಘಾಟಿಸಲಿದ್ದಾರೆ.
ಜು.25ರಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಡ್ಲೂರು ಸತ್ಯನಾರಾಯಣಾ ಚಾರ್ಯ, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿಜಯಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಸುಮನ್ ಡಿ.ಪಣ್ಣೇಕರ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ|| ರಾಜೇಶ್ ಸುರಗಿಹಳ್ಳಿ, ಮಕ್ಕಳ ತಜ್ಞ ಡಾ|| ಬಿ.ಸಿ.ನವೀನ್ಕುಮಾರ್, ಜಿಲ್ಲಾಸ್ಪತ್ರೆಯ ಅಧೀಕ್ಷಕ ಡಾ|| ಜಗದೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಲ್ಲೇಸ್ವಾಮಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಅಧಿಕಾರಿ ದೇವರಾಜು , ಬೆಂಗಳೂರು ಆರ್ವಿಎಂ ಫೌಂಡೇಷನ್ನ ಫೋಸಾ ಆಸ್ಪತ್ರೆಯ ಸಂಯೋಜಕ ಶಂಕರ್, ವಿಕಾಸ್ ಜನಸೇವಾ ಟ್ರಸ್ಟ್ನ ಗೌರವಾಧ್ಯಕ್ಷ ಹೆಚ್.ಪಿ.ಪುಟ್ಟಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಟ್ರಸ್ಟ್ನ ಗೌರವಾಧ್ಯಕ್ಷ ಹೆಚ್.ಪಿ.ಪುಟ್ಟಪ್ಪ ಮಾತನಾಡಿ, ಸರಕಾರದಿಂದ ಸೂಕ್ತ ಜಾಗ ದೊರೆತಲ್ಲಿ ಮಡಿಕೇರಿಯಲ್ಲಿ ಅನಾಥಾಶ್ರಮ ಹಾಗೂ ಶಾಲೆಯೊಂದನ್ನು ಆರಂಭಿಸುವ ಉದ್ದೇಶ ಹೊಂದಿರುವದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ ಖಜಾಂಚಿ ಬಿ.ಕೆ. ನವೀನ್ ಹಾಗೂ ನಿರ್ದೇಶಕ ರಂಜನ್ ಹಾಜರಿದ್ದರು.