ನವದೆಹಲಿ ಜು.23 : ಕಾಲೇಜುಗಳಲ್ಲಿ ರ್ಯಾಗಿಂಗ್ ಪ್ರವೃತ್ತಿಗೆ ಕಡಿವಾಣ ಹಾಕಲು ಎಷ್ಟೇ ಕಠಿಣ ಕ್ರಮಗಳನ್ನು ಕೈಗೊಂಡರೂ ಕಳೆದ ಮೂರು ವರ್ಷಗಳಲ್ಲಿ ವಿಶ್ವವಿದ್ಯಾಲಯ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ರ್ಯಾಗಿಂಗ್ ಪ್ರಕರಣಗಳು ದ್ವಿಗುಣವಾಗಿದೆ ಎಂಬ ಆತಂಕಕಾರಿ ವಿಷಯ ಬಹಿರಂಗಗೊಂಡಿದೆ. ವಿಶ್ವವಿದ್ಯಾಲಯ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ರ್ಯಾ ಗಿಂಗ್ ಪ್ರಕರಣಗಳು ದ್ವಿಗುಣವಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 2015ರಲ್ಲಿ 423 ದೂರುಗಳು ದಾಖಲಾಗಿದ್ದು ಪಶ್ಚಿಮ ಬಂಗಾಳದಲ್ಲಿ ಹೆಚ್ಚು ದೂರುಗಳು ದಾಖಲಾಗಿತ್ತು. ಇನ್ನು 2016ರಲ್ಲಿ 5,215 ಮತ್ತು 2017ರಲ್ಲಿ 901 ರ್ಯಾ ಗಿಂಗ್ ದೂರುಗಳು ದಾಖಲಾಗಿವೆ ಎಂದರು. ಕಳೆದ ವರ್ಷ ಹೆಚ್ಚಾಗಿ ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಪಶ್ಚಿಮಬಂಗಾಳದಲ್ಲಿ ಹೆಚ್ಚು ದೂರುಗಳು ದಾಖಲಾಗಿದ್ದು ಕಳೆದ ಮೂರು ವರ್ಷಗಳಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ) ಅನುದಾನಿತ ವಿಶ್ವವಿದ್ಯಾಲಯಗಳಲ್ಲಿ 1,839 ದೂರುಗಳು ದಾಖಲಾಗಿವೆ. ಇವುಗಳ ಪೈಕಿ 812 ಪ್ರಕರಣಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡಲಾಗಿದ್ದು 309 ಪ್ರಕರಣಗಳಲ್ಲಿ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ ಎಂದರು.