ಚೆನ್ನೈ, ಜು. 24: ಸೈಂಟ್ ಮೌಂಟ್ ರೈಲು ನಿಲ್ದಾಣದಲ್ಲಿ ರೈಲು ಹತ್ತುವ ವೇಳೆ ನೂಕುನುಗ್ಗಲು ಸಂಭವಿಸಿದ ಪರಿಣಾಮ ಗೋಡೆಗೆ ಬಡಿದು 7 ಮಂದಿ ಸಾವನ್ನಪ್ಪಿ, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ರೈಲು ಚೆನ್ನೈ ಬೀಚ್‍ನಿಂದ ತಿರುಮಲ್ಪುರದತ್ತ ಸಾಗುತ್ತಿರುವ ವೇಳೆ ಸೈಂಟ್ ಮೌಂಟ್ ರೈಲು ನಿಲ್ದಾಣದಲ್ಲಿ ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ಫುಟ್ ಬೋರ್ಡ್‍ನಲ್ಲಿ 30 ಮಂದಿ ಪ್ರಯಾಣ ಮಾಡುತ್ತಿದ್ದರು. ರೈಲು ಸೈಂಟ್ ಮೌಂಟ್ ನಿಲ್ದಾಣದ ಬಳಿ ಬರುತ್ತಿದ್ದಂತೆಯೇ ನೂಕುನುಗ್ಗಲು ಏರ್ಪಟ್ಟಿತ್ತು. ಈ ವೇಳೆ ಸ್ಥಳದಲ್ಲಿದ್ದ ವಿದ್ಯುತ್ ಕಂಬ ಪ್ರಯಾಣಿಕರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹಲವು ಪ್ರಯಾಣಿಕರು ಕೆಳಗೆ ಬಿದ್ದಿದ್ದಾರೆ. ಇದರಲ್ಲಿ ಇಬ್ಬರು ರೈಲುಗಳ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ಮೂವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಪರಿಣಾಮ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗದ ಮಧ್ಯೆಯೇ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ದುರ್ಘಟನೆ ಸಂಭವಿಸುತ್ತಿದ್ದಂತೆಯೇ ರೈಲಿನಲ್ಲಿದ್ದ ಕೆಲ ಪ್ರಯಾಣಿಕರು ತುರ್ತು ಸರಪಳಿಯನ್ನು ಎಳೆದಿದ್ದಾರೆ. ರೈಲು ನಿಂತ ಬಳಿಕ ಗಾಯಾಳುಗಳನ್ನು ರಕ್ಷಣೆ ಮಾಡಲಾಗಿದೆ. ಇಂದು ಸಂಭವಿಸಿದ ದುರಂತದಲ್ಲಿ ಐವರು ಸಾವನ್ನಪ್ಪಿದ್ದು, ಐವರ ಪೈಕಿ ಮೂವರನ್ನು ಶಿವಕುಮಾರಿ, ಭಾರತಿ, ಶಂಕರ್ ಎಂದು ಗುರುತಿಸಲಾಗಿದೆ. ಮತ್ತಿಬ್ಬರ ಗುರುತುಗಳು ಈವರೆಗೂ ಪತ್ತೆಯಾಗಿಲ್ಲ. ಘಟನೆಯಲ್ಲಿ ಇಬ್ಬರು ಪ್ರಯಾಣಿಕರು ಕಾಲುಗಳನ್ನು ಕಳೆದುಕೊಂಡಿದ್ದಾರೆ ಎಂದು ರೈಲ್ವೇ ಪೆÇಲೀಸರು ಮಾಹಿತಿ ನೀಡಿದ್ದಾರೆ.
ವಿಧಾನಸೌಧದಲ್ಲಿ ದಲ್ಲಾಳಿಗಳಿಗೆ ಮಾತ್ರ ತಡೆ
ಬೆಂಗಳೂರು, ಜು. 24: ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳಿಗೆ ಪ್ರವೇಶ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂಬ ಸುದ್ದಿಗೆ ಸಿ.ಎಂ. ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದು, ದಲ್ಲಾಳಿಗಳಿಗೆ ಮಾತ್ರ ತಡೆ, ಮಾಧ್ಯಮಗಳಿಗಲ್ಲ ಎಂದು ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾದ್ಯಮಗಳಿಗೆ ನಿಷೇಧ ಹೇರಲಾಗಿದೆ ಎಂಬ ಮಾಧ್ಯಮಗಳ ಸುದ್ದಿಗೆ ಸ್ಪಷ್ಟನೆ ನೀಡಿದ ಅಂತಹ ಯಾವದೇ ಆದೇಶವನ್ನು ನಾನು ನೀಡಿಲ್ಲ. ವಿಧಾನಸೌಧದಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು ಅವರನ್ನು ತಡೆಯುತ್ತೇವೆ, ಮಾಧ್ಯಮಗಳಿಗೆ ಯಾವದೇ ತಡೆ ಇಲ್ಲ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಕೆಲವರಿಂದ ವಿಧಾನಸೌಧದಲ್ಲಿ ಅನಾನುಕೂಲಗಳು ಆಗುತ್ತಿವೆ. ಸಾರ್ವಜನಿಕರು ಬೆಳಗ್ಗಿನಿಂದ ರಾತ್ರಿಯವರೆಗೆ ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಅಧಿಕಾರಿಗಳಿಗೂ ಕೆಲಸ ಮಾಡಲು ಅನಾನುಕೂಲ ಆಗುತ್ತಿದೆ. ದಲ್ಲಾಳಿಗಳು ಓಡಾಡುತ್ತಿರುವದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜನರಿಗೆ ದಾರಿ ತಪ್ಪಿಸುವವರ ವಿರುದ್ಧ ಎಚ್ಚರಿಕೆ ವಹಿಸುತ್ತೇವೆ. ಕಾನೂನು ಬಾಹಿರ ಚಟುವಟಿಕೆಗಳಾಗದಂತೆ ತಡೆ ಹಾಕುತ್ತೇವೆ ಎಂದು ಹೇಳಿದರು.
ಪ್ರಧಾನಿಯಿಂದ 200 ಹಸುಗಳು ಉಡುಗೊರೆ
ರವಾಂಡಾ, ಜು. 24: ರವಾಂಡಾಗೆ ಭೇಟಿ ನೀಡಿರುವ ಭಾರತದ ಮೊದಲ ಪ್ರಧಾನಿ ನರೇಂದ್ರ ಮೋದಿ ಅವರು ಮಂಗ ರವಾಂಡಾದ ಸ್ಥಳೀಯ ತಳಿಯ 200 ಹಸುಗಳನ್ನು ಉಡುಗೊರೆಯಾಗಿ ನೀಡಿದರು. ಇಂದು ದಕ್ಷಿಣ ಆಫ್ರಿಕಾ ಖಂಡದ ಪಶ್ಚಿಮ ಭಾಗದಲ್ಲಿರುವ ರವಾಂಡಾದ ಮಾದರಿ ಗ್ರಾಮ ರವೆರು ಗ್ರಾಮಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, 200 ಹಸುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಅಲ್ಲಿನ ಸ್ಥಳೀಯ ಸರ್ಕಾರ ಜಾರಿಗೆ ತಂದಿರುವ ‘ಗಿರಿಂಕಾ’ ಯೋಜನೆಗೆ ತಮ್ಮ ಸಹಾಯಹಸ್ತ ಚಾಚಿದ್ದಾರೆ. ರವಾಂಡಾ ಅಧ್ಯಕ್ಷರು 2006 ರಲ್ಲಿ ಪ್ರತಿಯೊಂದು ಬಡ ಕುಟುಂಬವೊಂದಕ್ಕೆ ಹಸುವೊಂದನ್ನು ಉಡುಗೊರೆ ನೀಡುವ ‘ಗಿರಿಂಕಾ’ ಯೋಜನೆಯನ್ನು ಜಾರಿಗೆ ತಂದಿದ್ದರು. ಇಲ್ಲಿಯವರೆಗೆ 3.5 ಲಕ್ಷ ಫಲಾನುಭವಿಗಳಿಗೆ ಯೋಜನೆ ಮುಟ್ಟಿದೆ. ಬಡಕುಟುಂಬವೊಂದಕ್ಕೆ ಒಂದು ಹಸುವನ್ನು ಸರಕಾರ ಉಡುಗೊರೆಯಾಗಿ ನೀಡುತ್ತದೆ. ಆ ಹಸುವಿನಿಂದ ಜನಿಸುವ ಮೊದಲ ಕರು ಹೆಣ್ಣಾಗಿದ್ದರೆ ಆ ಕರುವನ್ನು ಆ ಕುಟುಂಬ ನೆರೆಮನೆಯವರಿಗೆ ಉಡುಗೊರೆಯಾಗಿ ನೀಡುವದು ಈ ಯೋಜನೆಯ ವಿಶೇಷ. ಇದು ಭಾರತದ ಹಳೆಯ ಸಂಪ್ರಾದಾಯ (ಬಳುವಳಿ ಪದ್ಧತಿ) ಕೂಡಾ ಆಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅದೇ ದೇಶದ 200 ಹಸುಗಳನ್ನು ಉಡುಗೂರೆಯಾಗಿ ನೀಡಿದ್ದಾರೆ.
ಸೋಪ-ಮಂಚ ಕೊಂಡೊಯ್ದ ಮಾಜಿ ಸ್ಪೀಕರ್
ಬೆಂಗಳೂರು, ಜು. 24: ವಿಧಾನಸಭೆ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರು ಸರ್ಕಾರಿ ಬಂಗಲೆಯಲ್ಲಿದ್ದ ದುಬಾರಿ ಬೆಲೆಯ ಸೋಫಾಸೆಟ್ ಹಾಗೂ ನಾಲ್ಕು ಮಂಚಗಳನ್ನು ತಮ್ಮ ಸ್ವಂತ ಮನಗೆ ಕೊಂಡೊಯ್ದಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೋಳಿವಾಡ್ ಸ್ಪೀಕರ್ ಆಗಿದ್ದಾಗ ಅವರಿಗೆ ನೀಡಲಾಗಿದ್ದ ಸರ್ಕಾರಿ ಬಂಗಲೆಗೆ ಸರ್ಕಾರದ ಹಣದಿಂದ ಖರೀದಿಸಿದ್ದ ಸೋಫಾ ಹಾಗೂ ಕಾಟ್‍ಗಳು ಈಗ ಅವರ ಸ್ವಂತ ಮನೆ ಸೇರಿವೆ. ಇನ್ನು ಸರ್ಕಾರಿ ಸೋಫಾ ಮತ್ತು ಮಂಚಗಳನ್ನು ತಮ್ಮ ಮನೆಗೆ ಕೊಂಡೊಯ್ದಿರುವದನ್ನು ಸಮರ್ಥಿಸಿಕೊಂಡಿರುವ ಕೆ.ಬಿ. ಕೋಳಿವಾಡ್ ಅವರು, ತಾನು ಸ್ಪೀಕರ್ ಆಗಿದ್ದಾಗ ನನಗೆ ಬೇಕಾದ ರೀತಿ ಪೀಠೋಪಕರಣಗಳನ್ನು ಮಾಡಿಸಿಕೊಂಡಿದ್ದೆ. ಹಾಗಾಗಿ ಒಂದು ಸೋಫಾ ಮತ್ತು ನಾಲ್ಕು ಕಾಟ್‍ನ್ನು ಮನೆಗೆ ತಂದಿದ್ದೇನೆ. ಮುಂಚೆಯೇ ಪೇಮೆಂಟ್ ಮಾಡುತ್ತೀನಿ ಎಂದು ಪತ್ರ ಬರೆದುಕೊಟ್ಟೇ ಅವುಗಳನ್ನು ಮನೆಗೆ ತಂದಿದ್ದೀನಿ ಎಂದು ಹೇಳಿದ್ದಾರೆ. ಈ ಎಲ್ಲ ಪೀಠೋಪಕರಣದ ದರ ಮೂರು ಲಕ್ಷ ರೂಪಾಯಿ ಆಗಬಹುದು. ಈ ಬಗ್ಗೆ ವಿಧಾನಸಭಾ ಕಾರ್ಯದರ್ಶಿಯಿಂದ ಹಣ ಪಾವತಿ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಅವರು ಈ ಪೀಠೋಪಕರಣಗಳಿಗೆ ದರ ನಿಗದಿ ಮಾಡಿದ ಮೇಲೆ ಅದನ್ನು ಭರಿಸುತ್ತೇನೆ. ಈ ಹಿಂದೆಯೂ ಕೆಲ ಸಭಾಧ್ಯಕ್ಷರು ಈ ರೀತಿ ಮಾಡಿದ್ದಿದೆ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಮಹಿಳೆಯರ ನಿಷೇಧ:ಹಿಂದೂಗಳೇ ಟಾರ್ಗೆಟ್
ನವದೆಹಲಿ, ಜು. 24: ಕೇವಲ ಹಿಂದೂಗಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಮಸೀದಿಗಳಲ್ಲೂ ಮಹಿಳೆಯರಿಗೆ ನಿಷೇಧ ಇದೆ ಎಂದು ಕೇರಳದ ಶಬರಿಮಲೆ ದೇವಸ್ಥಾನ ಮಂಡಳಿ ಸುಪ್ರೀಂ ಕೋರ್ಟ್ ವಾದಿಸಿದೆ. ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ನಿಷೇಧ ಕುರಿತು ನಾಲ್ಕು ದಿನಗಳಿಂದ ವಿಚಾರಣೆ ನಡೆಯುತ್ತಿದ್ದು, ಸಂಪ್ರದಾಯದ ಒಂದು ಭಾಗವಾಗಿ ಮಹಿಳೆಯರಿಗೆ ನಿಷೇಧಿಸಲಾಗಿದೆಯೇ? ಹೌದು ಎನ್ನುವದಾದರೆ ಅದು ಧಾರ್ಮಿಕ ನಂಬಿಕೆಯ ಭಾಗ ಎಂದು ಸಾಬೀತುಪಡಿಸುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನಿಕ ಪೀಠ ಸೂಚಿಸಿದೆ. ದೇವಸ್ಥಾನದ ಪರವಾಗಿ ವಾದ ಮಂಡಿಸಿದ ಎಎಂ ಸಿಂಘ್ವಿ ಅವರು, ದೈಹಿಕ ಕಾರಣಗಳಿಂದಾಗಿ ಮಹಿಳೆಯರಿಗೆ ನಿಷೇಧ ಹೇರಲಾಗಿದೆ. ಮಹಿಳೆಯರಿಗೆ ಮುಟ್ಟಿನ ಪರೀಕ್ಷೆ ನಡೆಸಲು ಸಾಧ್ಯವಿಲ್ಲ. ಅಯ್ಯಪ್ಪನ ಮೇಲೆ ನಂಬಿಕೆ ಇರುವವರು ಇದನ್ನು ಹಲವು ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದಾರೆ. ಇದು ಅನಾಗರಿಕ ಮತ್ತು ಅಕ್ರಮದ ವಿಚಾರ ಅಲ್ಲ ಎಂದರು. ತನ್ನ ವಿವಾದಾತ್ಮಕ ನಿಲುವನ್ನು ದೇವಸ್ಥಾನ ಮಂಡಳಿ ಹೇಗೆ ಸಮರ್ಥಿಸಿಕೊಳ್ಳುತ್ತದೆ ಎಂದು ನ್ಯಾಯಮೂರ್ತಿ ಆರ್. ನಾರಿಮನ್ ಅವರು ಎಎಂ ಸಿಂಘ್ವಿ ಅವರಿಗೆ ಪ್ರಶ್ನಿಸಿದರು.
ಆರ್‍ಎಸ್‍ಎಸ್ ಹೇಳಿಕೆಗೆ ಶಿಯಾ ಬೆಂಬಲ
ನವದೆಹಲಿ, ಜು. 24: ಸಾಮೂಹಿಕ ಹಲ್ಲೆಯಂತಹ ಘಟನೆಗಳು ನಿಲ್ಲಬೇಕಿದ್ದರೆ, ಜನರು ಗೋಮಾಂಸ ಸೇವನೆಯನ್ನು ನಿಲ್ಲಿಸಬೇಕೆಂದು ಹೇಳಿದ್ದ ಆರ್‍ಎಸ್‍ಎಸ್ ನಾಯಕನ ಹೇಳಿಕೆಗೆ ಶಿಯಾ ವಕ್ಫ್ ಮಂಡಳಿ ಬೆಂಬಲ ನೀಡಿದೆ. ಆರ್‍ಎಸ್‍ಎಸ್ ನಾಯಕ ಇಂದ್ರೇಶ್ ಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಉತ್ತರಪ್ರದೇಶ ಶಿಯಾ ವಕ್ಫ್ ಮಂಡಳಿ ಮುಖ್ಯಸ್ಥ ವಾಸೀಮ್ ರಿಜ್ವಿಯವರು, ಗೋಮಾಂಸ ಸೇವನೆ ಇಸ್ಲಾಂನಲ್ಲಿ ಪಾಪದ ಕರ್ಮವಾಗಿದ್ದು, ಮುಸ್ಲಿಮರು ಗೋಮಾಂಸ ಸೇವನೆ ನಿಲ್ಲಿಸಬೇಕೆಂದು ಹೇಳಿದ್ದಾರೆ. ಇಂದ್ರೇಶ್ ಕುಮಾರ್ ಅವರ ಹೇಳಿಕೆಯಲ್ಲೂ ಒಂದು ಅಂಶವಿದೆ. ಧಾರ್ಮಿಕ ಭಾವನೆಗಳಿಗೆ ನೋವು ಮಾಡುವ ಕೆಲಸವನ್ನು ಯಾರೂ ಮಾಡಬಾರದು. ಗೋ ಹತ್ಯೆಗೆ ಕಾನೂನು ರೂಪಿಸಿದ್ದೇ ಆದರೆ, ಸಾಮೂಹಿಕ ಹಲ್ಲೆ ಪ್ರಕರಣಗಳು ನಿಲ್ಲುತ್ತವೆ. ಒಂದು ಸಮುದಾಯದ ಗೋವುಗಳಿಗೆ ತಾಯಿಯ ಸ್ಥಾನಮಾನವನ್ನು ನೀಡಿದ್ದು, ಅಂತಹ ಗೋವನ್ನು ಹತ್ಯೆ ಮಾಡಬಾರದು ಎಂದು ಹೇಳಿದ್ದಾರೆ. ಮುಸ್ಲಿಮರು ಗೋವು ಹತ್ಯೆ ಮಾಡುವದು ಮತ್ತು ಗೋಮಾಂಸ ಸೇವನೆ ಮಾಡುವದನ್ನು ನಿಲ್ಲಿಸಬೇಕು. ಗೋಮಾಂಸ ಸೇವನೆ ಇಸ್ಲಾಂ ಧರ್ಮದಲ್ಲಿ ಪಾಪವೆಂದು ಹೇಳಲಾಗುತ್ತದೆ.