ಮಡಿಕೇರಿ, ಜು. 23: ಇಲ್ಲಿಗೆ ಸಮೀಪದ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಸ್ತೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ನಿನ್ನೆ ದಿನ ಕೊನೆಗೂ ನೆಲಕಚ್ಚಿದೆ. ಮೊನ್ನೆಯಷ್ಟೇ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಶಾಲೆಗೆ ಖುದ್ದು ಭೇಟಿ ನೀಡಿ ಶಿಥಿಲಗೊಂಡಿರುವ ಕಟ್ಟಡದ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳುವಂತೆ ಪ್ರಸ್ತಾಪಿಸಿದ್ದರು.

ಗಾಳಿಬೀಡು ಗ್ರಾ.ಪಂ. ಅಧ್ಯಕ್ಷ ಸುಭಾಷ್ ಸೋಮಯ್ಯ ಹಾಗೂ ಕೆಲವು ಗ್ರಾಮಸ್ಥರು ಈ ಶಾಲಾ ಕಟ್ಟಡವನ್ನು ಗ್ರಾಮೀಣ ಚಟುವಟಿಕೆಗಳಿಗಾಗಿ ಸ್ತ್ರೀಶಕ್ತಿ ಸ್ವಸಹಾಯ ಗುಂಪು, ಯುವ ಸಂಘಟನೆಗಳಿಗೆ ಬಿಟ್ಟು ಕೊಡುವಂತೆ ಬೇಡಿಕೆ ಇಟ್ಟಿದ್ದರು. ಒಂದು ವೇಳೆ ಇಲಾಖೆಯು ಬಿಟ್ಟುಕೊಟ್ಟರೆ ಕಟ್ಟಡದ ನಿರ್ವಹಣೆಯನ್ನು ಗ್ರಾ.ಪಂ. ನೋಡಿಕೊಳ್ಳುವದಾಗಿಯೂ ಸಲಹೆ ನೀಡಿದ್ದರು. ಈ ಬಗ್ಗೆ ಇಲಾಖೆಯ ಮೇಲಧಿಕಾರಿಗಳೊಂದಿಗೆ ಮಾತುಕತೆಯ ಭರವಸೆಯನ್ನು ಶಾಸಕರು ನೀಡಿದ್ದರು.

ಇತ್ತ ನಿನ್ನೆ ದೇವಸ್ತೂರುವಿನಲ್ಲಿ ಆಟಿ ಕ್ರೀಡಾಕೂಟಕ್ಕೆ ಶಾಸಕದ್ವಯರಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ ಹಾಗೂ ಇತರರು ತೆರಳುವಷ್ಟರಲ್ಲಿ ಈ ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿದು ಕಟ್ಟಡವೇ ಇಬ್ಭಾಗವಾಗಿರುವ ದೃಶ್ಯ ಎದುರಾಯಿತು. ಪಕ್ಕದಲ್ಲೇ ಅಂಗನವಾಡಿಯಿದ್ದು, ಭಾನುವಾರವಾದ್ದರಿಂದ ಅಪಾಯ ಸಂಭವಿಸಿಲ್ಲವೆಂದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು.

-ಶ್ರೀಸುತ