*ಸಿದ್ದಾಪುರ, ಜು. 23: ಇಲ್ಲಿಗೆ ಸಮೀಪದ ತ್ಯಾಗತ್ತೂರು, ಅಭ್ಯತ್‍ಮಂಗಲ ವ್ಯಾಪ್ತಿಯಲ್ಲಿ ಭಾರೀ ಗಾಳಿ-ಮಳೆಗೆ ಮರಗಳು ಉರುಳಿ ಬಿದ್ದು, ವಿದ್ಯುತ್ ಕಂಬಗಳು ತುಂಡರಿಸಿ ಸಾಕಷ್ಟು ಹಾನಿಯಾಗಿದೆ. ತ್ಯಾಗತ್ತೂರು ಬಸ್ ನಿಲ್ದಾಣದ ಮೇಲೆ ಮರ ಬಿದ್ದು ಜಖಂಗೊಂಡಿದೆ.ಯಾಹೂ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ವಿದ್ಯುತ್ ಟ್ರಾನ್ಸ್‍ಫಾರ್ಮರ್‍ಗೆ ಸಂಪೂರ್ಣ ಹಾನಿಯಾಗಿದೆ. ವಾಲ್ನೂರು-ತ್ಯಾಗತ್ತೂರು ವ್ಯಾಪ್ತಿಯಲ್ಲಿ ಸುಮಾರು 80 ರಷ್ಟು ಭಾರೀ ಗಾತ್ರದ ಮರಗಳು ಬಿದ್ದಿದ್ದು, 65 ರಷ್ಟು ವಿದ್ಯುತ್ ಕಂಬಗಳು ತುಂಡರಿಸಿವೆ. ಅಭ್ಯತ್‍ಮಂಗಲದಿಂದ ಚೆಟ್ಟಳ್ಳಿವರೆಗೆ 25 ಮರಗಳು ಉರುಳಿವೆ.
ಕಳೆದ ಒಂದು ತಿಂಗಳಿನಿಂದ ವಿದ್ಯುತ್ ಇಲ್ಲದೆ ತುರ್ತು ಕೆಲಸ ಕಾರ್ಯಗಳಿಗೆ ಸನಿಹದ ನಂಜರಾಯಪಟ್ಟಣಕ್ಕೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸೆಸ್ಕ್ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದರಾದರೂ ಮತ್ತೆ ಮರ ಬಿದ್ದು, ತೊಂದರೆಯಾಗುತ್ತಿದೆ.