ಸಿದ್ದಾಪುರ, ಜು. 24: ಒಂದೊಮ್ಮೆ ಕೊಡಗು ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆ ಎಂಬ ಖ್ಯಾತಿ ಗೊಳಗಾಗಿತ್ತು. ಕೃಷಿಯೇ ಇಲ್ಲಿಯ ರೈತರ ಜೀವಾಳವಾಗಿತ್ತು. ಬರಬರುತ್ತಾ ಭತ್ತದ ಕೃಷಿ ಮಾಡಲು ಜನರ ಕೊರತೆ, ಬೆಂಬಲ ಬೆಲೆಯಿಲ್ಲದೆ ಇತ್ತೀಚಿನ ವನ್ಯ ಪ್ರಾಣಿಗಳ ಹಾವಳಿಯಿಂದಾಗಿ ರೈತರಲ್ಲಿ ಉತ್ಸಾಹ ಬತ್ತಿಹೋಗಿ ಕೃಷಿ ಭೂಮಿಗಳನ್ನು ಪಾಳು ಬಿಡು ವಂತಾಯಿತು. ಆದರೂ ಕೆಲವು ರೈತರು ಕೃಷಿಯನ್ನು ಕೈಬಿಡದೆ ಮುಂದುವರಿಸಿ ಕೊಂಡು ಬರುತ್ತಿರುವದು ಸ್ವಾಗತಾರ್ಹ ವಾದರೂ ಕೃಷಿಯ ಮೇಲೆ ಕಾಡಾನೆಗಳ ‘ಕರಿ’ ನೆರಳಿನಿಂದಾಗಿ ಪರಿತಪಿಸುವಂತಾಗಿದೆ. ಭತ್ತದ ನಾಟಿಗಾಗಿ ಸಿದ್ಧಪಡಿಸಿದ್ದ ಅಗೆ (ಸಸಿಮಡಿ) ಕಾಡಾನೆಗಳ ಪಾಲಾಗು ತ್ತಿರುವ ಘಟನೆ ಅಭ್ಯತ್‍ಮಂಗಲದಲ್ಲಿ ಕಂಡು ಬಂದಿದೆ.(ಮೊದಲ ಪುಟದಿಂದ) ಸಕಾಲದಲ್ಲಿ ಮಳೆಯಾದ ಖುಷಿಯಲ್ಲಿ ಇಲ್ಲಿನ ರೈತ ಕೆ.ಎಂ. ರಮೇಶ್ ಅವರು ಕಷ್ಟಪಟ್ಟು ಗದ್ದೆಯನ್ನು ಉತ್ತು, ಬಿತ್ತಿದ್ದರು. ಸಸಿಮಡಿಗಳು ಸೊಗಸಾಗಿ ತಯಾರಾಗಿದ್ದವು. ಇನ್ನೇನು ನಾಡಿದ್ದು, ಅಂದರೆ ಶುಕ್ರವಾರಕ್ಕೆ ನಾಟಿ ಕಾರ್ಯಕ್ಕೆ ತಯಾರಿ ನಡೆದಿತ್ತು. ಆದರೆ, ನಿನ್ನೆ ರಾತ್ರಿ ಲಗ್ಗೆಯಿಟ್ಟ ಕಾಡಾನೆಗಳ ಹಿಂಡು ಗದ್ದೆಯಲ್ಲೆಲ್ಲ ಓಡಾಡಿ, ತುಳಿದು, ತಿಂದು ನಾಶಪಡಿಸಿವೆ. 5 ರಿಂದ 6 ಆನೆಗಳಿರುವ ಹಿಂಡು ಅಭ್ಯತ್‍ಮಂಗಲ ವ್ಯಾಪ್ತಿಯಲ್ಲಿ ಧಾಳಿ ಮಾಡುತ್ತಿದ್ದು, ತೋಟಗಳಿಗೆ ಹಾನಿ ಮಾಡಿವೆ. ಇದೀಗ ಗದ್ದೆಗಿಳಿಯಲಾರಂಭಿಸಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ. ಇಲ್ಲಿನ ನಿವಾಸಿ, ಗಿರೀಶ್ ಹಾಗೂ ಅಂಚೆಮನೆ ಕುಟುಂಬಸ್ಥರ ತೋಟಗಳು ಕಾಡಾನೆಗಳ ಆವಾಸ ಸ್ಥಾನವಾಗಿದೆ.

ಅರಣ್ಯ ಇಲಾಖೆಯವರು ಕಾಡಾನೆಯನ್ನು ಅಟ್ಟಲು ಪ್ರಯತ್ನಿಸಿದರೆ, ಆನೆಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ತೆರಳುತ್ತವೆಯೇ ಹೊರತು ಕಾಡಿಗೆ ಹೋಗುತ್ತಿಲ್ಲ. ಮತ್ತೆ ಅದೇ ಸ್ಥಳಕ್ಕೆ ಬಂದು ಸೇರಿಕೊಳ್ಳುತ್ತವೆ. ಆನೆ ಧಾಳಿಯಿಂದಾಗಿ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಶಾಲಾ ಮಕ್ಕಳು ರಜೆ ಹಾಕಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬದು ಗ್ರಾಮಸ್ಥರ ಆಗ್ರಹವಾಗಿದೆ.

- ಅಂಚೆಮನೆ ಸುಧಿ