ಗೋಣಿಕೊಪ್ಪ ವರದಿ, ಜು. 23: ನಾಯಕತ್ವ ಗುಣ ಬೆಳೆಸಿಕೊಳ್ಳುವದ ರೊಂದಿಗೆ ಉತ್ತಮ ಸಂಘಟಕರಾಗುವ ದಿಟ್ಟತನ ಕೂಡ ಬೆಳೆಸಿಕೊಳ್ಳಬೇಕು ಎಂದು ಶಕ್ತಿ ಪತ್ರಿಕೆ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಸಲಹೆ ನೀಡಿದರು.

ಗೋಣಿಕೊಪ್ಪ ಕಾವೇರಿ ಪದವಿ ಪೂರ್ವ ಕಾಲೇಜು ಶೈಕ್ಷಣಿಕ ವರ್ಷದ ರಾಷ್ಟ್ರೀಯ ಸೇವಾ ಯೋಜನೆ ಉದ್ಘಾಟನೆ ಹಾಗೂ ಕಾವೇರಿ ದರ್ಶಿನಿ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯ ಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯನ್ನು ದೀಪ ಬೆಳೆಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳುವ ದರೊಂದಿಗೆ ಸಂಘಟಕರಾಗುವ ದಿಟ್ಟತನ ಕೂಡ ಬೆಳೆಸಿಕೊಳ್ಳಬೇಕು. ನಾಯಕತ್ವದ ಮೂಲಕ ಸಂಘಟಿತರಾಗಿ ಸಮಾಜಕ್ಕೆ ಕಾಣಿಕೆ ನೀಡಲು ಸಾಧ್ಯವಿದೆ ಎಂದರು. ಇಂದಿನ ರಾಜಕೀಯ ವ್ಯವಸ್ಥೆಯನ್ನು ಮುಂದಿಟ್ಟುಕೊಂಡರೆ ಸಮರ್ಥರು ರಾಜಕೀಯಕ್ಕೆ ಬರಬೇಕು ಎಂಬವದನ್ನು ಅರ್ಥೈಸುತ್ತಿದೆ. ನಾಯಕತ್ವದೊಂದಿಗೆ ಸಮರ್ಥರಾಗಲು ಮುಂದಾಗಬೇಕು. ಇಂದಿನ ಸಮಾಜಕ್ಕೆ ಇದು ಅನಿವಾರ್ಯ ಎಂದರು.

ನಮ್ಮ ವ್ಯಕ್ತಿತ್ವ ನಮ್ಮನ್ನು ಮತ್ತೊಬ್ಬರು ಮೆಚ್ಚಿ ಅನುಸರಿಸುವಂತೆ ಇರಬೇಕು. ಅದ್ದರಿಂದ ಸಮಾಜದಲ್ಲಿ ಬದಲಾವಣೆ ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.

ಕಾಲೇಜು ವಾರ್ಷಿಕ ಸಂಚಿಕೆ ಕಾವೇರಿ ದರ್ಶಿನಿ ಬಿಡುಗಡೆಗೊಳಿಸಿ ಮಾತನಾಡಿದ, ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ, ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಬೇಕು. ಪೋಷಕರ ಸಂಕಷ್ಟ ಅರಿತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಈ ಸಂದರ್ಭ ಸೆಸ್ಕ್ ಲೈನ್‍ಮೆನ್ ಹಲಗನಾಯಕ ಅವರ ಉತ್ತಮ ಸೇವೆ ಯನ್ನು ಪರಿಗಣಿಸಿ ಕಾಲೇಜು ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

ಕಾವೇರಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ. ಎ. ಸಿ. ಗಣಪತಿ, ಕಾರ್ಯದರ್ಶಿ ಕೆ. ಜಿ. ಉತ್ತಪ್ಪ, ಪ್ರಾಂಶುಪಾಲ ಎಸ್. ಎಸ್. ಮಾದಯ್ಯ, ಪೋಷಕ ಹಾಗೂ ಆಧ್ಯಾಪಕ ಸಮಿತಿ ಅಧ್ಯಕ್ಷೆ ಪಿ.ವಿ. ಮಿಲನ, ಎನ್‍ಎಸ್‍ಎಸ್ ಯೋಜನಾಧಿಕಾರಿ ತಿರುಮಲ್ಲಯ್ಯ, ವಿಶೇಷ ಸಂಚಿಕೆ ಸಂಚಾಲಕಿ ಕೆ. ಎಂ. ಕುಸುಮ್ ಉಪಸ್ಥಿತರಿದ್ದರು.