ಮಡಿಕೇರಿ, ಜು. 23 : ಕೊಡಗು ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ರಸ್ತೆಗಳು, ಕಾಲು ಸೇತುವೆಗಳು, ಸರ್ಕಾರಿ ಕಚೇರಿಗಳು, ವಿದ್ಯುತ್‍ಚ್ಛಕ್ತಿ ವಿಪರೀತ ಹಾನಿಯಾಗಿದೆ ಮತ್ತು ಇಲ್ಲಿನ ಕೃಷಿಕರು ಬಿತ್ತಿದ ಬೆಳೆ, ಕಾಫಿ, ಕಾಳುಮೆಣಸು ಮತ್ತಿತರ ತೋಟಗಾರಿಕೆ ಬೆಳೆಗಳು ನಷ್ಟವಾಗಿವೆ. ಆದ್ದರಿಂದ ನಮ್ಮ ಜಿಲ್ಲೆಗೆ ಮಳೆಹಾನಿ ಪರಿಹಾರಕ್ಕಾಗಿ ಹೆಚ್ಚಿನ ಅನುದಾನ ಒದಗಿಸಬೇಕಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಲ್ಲಿ ಜಿ.ಪಂ.ಅಧ್ಯಕ್ಷ ಬಿ.ಎ. ಹರೀಶ್ ಕೋರಿದ್ದಾರೆ.

ಮುಖ್ಯಮಂತ್ರಿಗಳ ಜಿಲ್ಲಾ ಭೇಟಿ ವೇಳೆ ಮನವಿ ಸಲ್ಲಿಸಿದ ಅವರು, ಜಿಲ್ಲಾ ಪಂಚಾಯಿತ್ ರಸ್ತೆಗಳು 4274.74 ಕಿ.ಮೀ ಗಳಿದ್ದು ತುಂಬಾ ವರ್ಷಗಳಿಂದ ರಸ್ತೆ ನಿರ್ವಹಣೆಗೆ ಹಂಚಿಕೆಯಾಗುತ್ತಿರುವ ಅನುದಾನ ಸಾಲುತ್ತಿಲ್ಲ. ಕಳೆದ ಸಾಲಿನಲ್ಲಿ ರಸ್ತೆಗಳ ನಿರ್ವಹಣೆಯನ್ನು ಪಂಚಾಯತ್ ರಾಜ್ ಇಲಾಖೆಗೆ ವಹಿಸದೆ ಸಂಪೂರ್ಣವಾಗಿ ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿತ್ತು. ಈಗ ಗ್ರಾಮೀಣ ರಸ್ತೆಗಳೆಲ್ಲವು ಸಂಪೂರ್ಣ ಹಾಳಾಗಿದೆ. ಆದ್ದರಿಂದ ಈ ಕ್ರಮವನ್ನು ಕೈಬಿಟ್ಟು ಪಂಚಾಯತ್ ರಾಜ್ ಇಲಾಖೆಗೂ ಸಹ ಅನುದಾನ ಒದಗಿಸಲು ಹಾಗೂ ಹೆಚ್ಚುವರಿಯಾಗಿ ರೂ.50 ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕಾಗಿ ತಿಳಿಸಿದರು.

ಸ್ವಚ್ಛ ಭಾರತ ಅಭಿಯಾನ ಕೇವಲ 17 ಗ್ರಾ.ಪಂ.ಗಳಲ್ಲಿ ಕಸ ವಿಲೇವಾರಿ ಸಂಬಂಧಪಟ್ಟಂತೆ ಜಾಗ ನಿಗಧಿ ಪಡಿಸಲಾಗಿದೆ. ಬೆಳವಣಿಗೆಯ ಹಾದಿಯಲ್ಲಿರುವ ಕೊಡಗು ಜಿಲ್ಲೆಯಲ್ಲಿ ಜನಸಂಖ್ಯೆ, ಜನವಸತಿ ಪ್ರದೇಶ ಹೆಚ್ಚಾಗುತ್ತಿದ್ದಂತೆ ತ್ಯಾಜ್ಯ ವಿಲೇವಾರಿಗೆ ಸಮಸ್ಯೆಗಳು ಎದುರಾಗುತ್ತದೆ. ಜೀವನದಿ ಕಾವೇರಿಗೆ ತ್ಯಾಜ್ಯ ವಸ್ತುಗಳು ಸೇರುತ್ತಿದ್ದು ನೀರು ಕಲುಷಿತಗೊಳ್ಳುತ್ತಿದ್ದು, ಕಾವೇರಿಯನ್ನು ಕುಡಿಯುವ ಇತರ ಜಿಲ್ಲೆಗಳಿಗೆ ನೀರು ಮಾಲಿನ್ಯವಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಉಳಿದ 87 ಗ್ರಾ,ಪಂ.ಗಳ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಜಾಗವನ್ನು ನಿಗದಿಪಡಿಸಿ ವ್ಶೆಜ್ಞಾನಿಕವಾಗಿ ಕಸ ವಿಲೇವಾರಿಗೆ ಅನುದಾನವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕಾಗಿ ಅವರು ಮನವಿ ಮಾಡಿದ್ದಾರೆ.

ಪಶ್ಚಿಮಘಟ್ಟ ಅಭಿವೃದ್ಧಿ ಯೋಜನೆಯಡಿ ಕಾಲು ಸೇತುವೆ, ಸಣ್ಣ ಸೇತುವೆ ಮುಂತಾದವುಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗುತ್ತಿತ್ತು. ಆದರೆ ಈಗ ಕೆಲವು ವರ್ಷಗಳಿಂದ ಕಾಮಗಾರಿಗಳಿಗೆ ಅನುದಾನ ನಿಗದಿಯಾಗುತ್ತಿಲ್ಲ. ಈ ವರ್ಷ ಮಳೆಯಿಂದಾಗಿ ನಿರ್ಮಿಸಿದ್ದ ಕಾಲು ಸೇತುವೆಗಳೆಲ್ಲಾ ಸಂಪೂರ್ಣ ಹಾಳಾಗಿದ್ದು, ಪಶ್ಚಿಮ ಘಟ್ಟ ಯೋಜನೆಯಡಿ ವಿಶೇಷವಾಗಿ ಅನುದಾನ ನಿಗದಿಪಡಿಸಲು ಕ್ರಮ ಕೈಗೊಳ್ಳಬೇಕಾಗಿ ತಿಳಿಸಿದರು.

ಹಾರಂಗಿ ಜಲಾಶಯ ನಿರ್ಮಾಣವಾದಲ್ಲಿಂದ ಇಲ್ಲಿಯವರೆಗೆ ಯಾವುದೇ ಹೂಳೆತ್ತಿರುವದಿಲ್ಲ. ಇಲ್ಲಿ ಸಂಗ್ರಹವಾದ ಹೂಳನ್ನು ತೆಗೆದರೆ ನೀರಿನ ಸಂಗ್ರಹಣಾ ಸಾಮಥ್ರ್ಯ ಹೆಚ್ಚಾಗಿ ಇಲ್ಲಿನ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ. ಈ ಸಂಬಂಧ ಕ್ರಮ ಕೈಗೊಳ್ಳಬೇಕಾಗಿ ತಿಳಿಸಿದರು.

ಕೆರೆಗಳ ಪುನಃಶ್ಚೇತನ ಹಾಗೂ ಹೂಳೆತ್ತುವ ಸಂಬಂಧ ಕೊಡಗಿನ 104 ಪಂಚಾಯಿತಿಗಳಲ್ಲಿರುವ ಜಿ.ಪಂ.ವ್ಯಾಪ್ತಿಗೆ ಬರುವ 680 ಕೆರೆಗಳ ಅಭಿವೃದ್ಧಿಗೆ ರೂ.50 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿ ಬೆಳೆಗಾರರಿಗೆ ಸೌಕರ್ಯವನ್ನು ಒದಗಿಸಿ ಕೊಡಬೇಕಾಗಿ ಕೋರಿದ್ದಾರೆ.

ಜಿ.ಪಂ.ನ ಕಚೇರಿ ಹಳೇ ಕೋಟೆ ವಿಧಾನ ಸಭಾಂಗಣದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಟ್ಟಡವು ನಿರ್ವಹಣೆಯಿಲ್ಲದೆ ಅಲ್ಲಲ್ಲಿ ಹೆಂಚುಗಳು ಸೋರಲಾರಂಭಿಸಿದೆ. ನಿರ್ವಹಣೆಗೆ ತುರ್ತು ಕ್ರಮ ಕೈಗೊಳ್ಳದೆ ಇದ್ದರೆ ಕಟ್ಟಡಕ್ಕೆ ಹಾನಿಯಾಗಿ ಐತಿಹಾಸಿಕ ರಾಜರ ಕಾಲದ ಸ್ಮಾರಕ ನಶಿಸುವ ಸಂಭವ ಇರುತ್ತದೆ. ಆದ್ದರಿಂದ ಸದರಿ ಕೋಟೆಯ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬಿ.ಎ.ಹರೀಶ್ ಕೋರಿದ್ದಾರೆ.

ಕೊಡಗು ಜಿ.ಪಂ.ನಲ್ಲಿ ಉಪ ಕಾರ್ಯದರ್ಶಿ, ಮುಖ್ಯ ಲೆಕ್ಕಾಧಿಕಾರಿ, ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ, ಸಹಾಯಕ ಯೋಜನಾಧಿಕಾರಿ(ಡಿಆರ್‍ಡಿಎ ಕೋಶ) ಹುದ್ದೆಗಳು ಮತ್ತು ವೀರಾಜಪೇಟೆ ಮತ್ತು ಸೋಮವಾರಪೇಟೆ ತಾ. ಪಂ.ಇಒ ಹುದ್ದೆ ಖಾಲಿ ಇದ್ದು ಪ್ರಮುಖ ಹುದ್ದೆಗಳು ಖಾಲಿ ಇರುವದರಿಂದ ಆಡಳಿತ ವ್ಯವಸ್ಥೆ ಸೂಕ್ತ ರೀತಿಯಲ್ಲಿ ನಡೆಯಲು ಸಾಧ್ಯವಾಗುತ್ತಿಲ್ಲ. ಜಿ.ಪಂ.ನಲ್ಲಿ ಮಂಜೂರಾದ 93 ಹುದ್ದೆಯಲ್ಲಿ ಕೇವಲ 29 ಮಾತ್ರ ಭರ್ತಿಯಾಗಿದ್ದು, 64 ಹುದ್ದೆಗಳು ಖಾಲಿ ಇರುತ್ತವೆ. ಆದ್ದರಿಂದ ಈ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕಿದೆ.

ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಗೆ ಕಟ್ಟಡಗಳು ಇರುವುದಿಲ್ಲ. ಹಾಸ್ಟೆಲ್‍ಗಳ ಕಟ್ಟಡಗಳು ಬೇರೆ ಇಲಾಖೆಯ ಕಟ್ಟಡದಲ್ಲಿ ನಡೆಯುತ್ತಿವೆ. ಭಾಗಮಂಡಲ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳಿಗೆ ಮಲಗಲು ಹಾಸಿಗೆ ವ್ಯವಸ್ಥೆ ಇಲ್ಲದೆ ದಿನಕ್ಕೆ 2-3 ವಿದ್ಯಾರ್ಥಿಗಳಿಗೆ ಜ್ವರ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಇಲಾಖೆಗಳಿಗೆ ಕಾಯಕಲ್ಪ ಕಲ್ಪಿಸಬೇಕಾಗಿದೆ.

ಹಾಸ್ಟೆಲ್‍ಗಳಲ್ಲಿರುವ ಅಡುಗೆ ಹಾಗೂ ಅಡುಗೆ ಸಹಾಯಕರು 5 ರಿಂದ 15 ವರ್ಷದ ವರೆಗೆ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಈಗ ಹೊಸ ನೇಮಕಾತಿಯಾಗಿರುವದರಿಂದ ಇವರುಗಳೆಲ್ಲ ನಿರುದ್ಯೋಗಿಗಳಾಗಿರುತ್ತಾರೆ. ಇವರು ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಇಲಾಖೆಯಲ್ಲಿ ಕಳೆದಿರುತ್ತಾರೆ. ಈಗ ಬೇರೆ ಕೆಲಸವನ್ನು ಮಾಡಲು ಸಾಧ್ಯವಾಗದೆ ಬಹಳ ತೊಂದರೆಯಲ್ಲಿದ್ದಾರೆ. ಇವರಿಗೆ ಬದಲಿ ವ್ಯವಸ್ಥೆ ಮಾಡಬೇಕಿದೆ.

ಶಿಕ್ಷಣ ಇಲಾಖೆಯ ಕಟ್ಟಡಗಳು ಹಾಗೂ ಅಂಗನವಾಡಿ ಕಟ್ಟಡಗಳು ನಿರ್ವಹಣೆ ಇಲ್ಲದೆ ಇರುವದರಿಂದ ಹಾಗೂ ಈ ವರ್ಷದ ವಿಪರೀತ ಮಳೆ-ಗಾಳಿಯಿಂದ ಹಾಳಾಗಿ ದುಸ್ಥಿತಿಯಲ್ಲಿದೆ. ಶೌಚಾಲಯಗಳು ಸಮರ್ಪಕವಾಗಿ ಇರುವದಿಲ್ಲ. ಆದ್ದರಿಂದ ಈ ಎರಡೂ ಇಲಾಖೆಗಳಿಗೆ ನಿರ್ವಹಣೆಗಾಗಿ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕಾಗಿದೆ.

ಪ್ರಾಥಮಿಕ ಶಿಕ್ಷಣದಲ್ಲಿ 120 ಮಕ್ಕಳಿಗೆ 4 ಶಿಕ್ಷಕರು ಎಂಬ ನಿಯಮವಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಶೇ.90 ರಷ್ಟು ಸರ್ಕಾರಿ ಪ್ರಾಥಮಿಕ ಶಾಲೆಯಗಳಲ್ಲಿ 120 ಮಕ್ಕಳಿಗಿಂತ ಕಡಿಮೆ ಇರುವದರಿಂದ ಈ ಶಾಲೆಗಳಲ್ಲಿ 1 ರಿಂದ 7 ನೇ ತರಗತಿಯವರೆಗೆ ತರಗತಿಗಳು ಇರುವದರಿಂದ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ಕೊಡಲು ಕ್ರಮ ಕೈಗೊಳ್ಳಬೇಕಿದೆ ಎಂದು ಉಲ್ಲೇಖಿಸಿರುವ ಜಿ.ಪಂ. ಅಧ್ಯಕ್ಷರು ಇನ್ನು ಹಲವು ಪ್ರಸ್ತಾವನೆಗಳೊಂದಿಗೆ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದಾರೆ.