(ಚಿತ್ರ ವರದಿಃ ದಿನೇಶ್ ಮಾಲಂಬಿ)

ಆಲೂರುಸಿದ್ದಾಪುರ, ಜು 24 : ಮಾಲಂಬಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೀಳುವ ಹಂತದಲ್ಲಿದ್ದು, ಪ್ರತಿನಿತ್ಯ ಭಯದಲ್ಲಿ ವಿದ್ಯಾರ್ಥಿಗಳು ದಿನ ತಳ್ಳುವ ಪರಿಸ್ಥಿತಿ ಇದೆ.

ಸಮೀಪದ ಮಾಲಂಬಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7ನೇ ತರಗತಿಯವರೆಗೆ 50ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಕಟ್ಟಡ ಸಮಸ್ಯೆಯಿಂದ ಕೆಲ ಪೋಷಕರು ಮಕ್ಕಳನ್ನು ಬೇರೆÉ ಶಾಲೆಗೆ ಸೇರಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಈ ಶಾಲೆಗೆ ಸುಮಾರು 100 ವರ್ಷವಾಗಿದ್ದು, ಇಲ್ಲಿ ಕಲಿತ ಕೆಲ ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗವನ್ನು ಅಲಂಕರಿಸಿದ್ದಾರೆ. ವಿಪರ್ಯಾಸವೆಂದರೆ ಇಲ್ಲಿಯ ವ್ಯವಸ್ಥೆಗಳು ಯಾವ ರೀತಿಯಲ್ಲಿದೆ ಎಂದರೆ ಸೋರುತ್ತಿರುವ ಕೆಲ ಕೊಠಡಿಗಳು, ಪ್ರತಿನಿತ್ಯ ಮಕ್ಕಳು ಇದೀಗ ಮಳೆ ನೀರಲ್ಲೇ ಕೂರಬೇಕಾದಂತಹ ಪರಿಸ್ಥಿತಿ, ಶತಮಾನವನ್ನು ದಾಟಿದ ಬೀಳುವ ಹಂತದ ಕನ್ನಡ ಶಾಲೆಯ ತರಗತಿಯ ಕೋಣೆಗಳಲ್ಲಿ ಜೀವ ಭಯದಲ್ಲೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ದಿನ ತಳ್ಳುತ್ತಿದ್ದಾರೆ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಉತ್ತಮ ಸೌಲಭ್ಯಗಳು ದೊರೆಯುತ್ತಿವೆ ಎಂದು ಹೇಳಿಕೊಳ್ಳುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಂತಹ ಶಾಲೆಗಳ ಬಗ್ಗೆ ಮೌನ ಮುರಿಯದಿರುವದು ವಿಪರ್ಯಾಸ.

ಅನೇಕ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿರುವಾಗ ಈ ರೀತಿಯ ಅವ್ಯವಸ್ಥೆಗಳಿಂದ ಕೂಡಿರುವದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಂತಿದೆ.

ತುಂಬಾ ಹಳೆಯ ಕಟ್ಟಡ ಇದಾಗಿರುವದರಿಂದ ಇದೀಗ ಸುರಿಯುತ್ತಿರುವ ಮಳೆಗೆ ಈ ಕಟ್ಟಡಗಳ ತಳಪಾಯ ಕುಸಿಯುವ ಹಂತ ತಲಪಿದೆ. ಸಂಪೂರ್ಣ ಹಂಚಿನ ಮೇಲ್ಛಾವಣಿಯಾಗಿರುವದರಿಂದ ಅಳವಡಿಸಿರುವ ಮರದ ಪಟ್ಟಿ ಗೆದ್ದಲು ಹಿಡಿದಿದ್ದು, ಹಂಚು ಹಾರಿ ಹೋಗಿದೆ ಯಾವ ಸಂದರ್ಭದಲ್ಲಾದರೂ ಬೀಳುವ ಸಾಧ್ಯತೆ ಇದೆ. ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ, ಜನಪ್ರತಿನಿಧಿಗಳಿಗೆ ಅವ್ಯವಸ್ಥೆಯ ಚಿತ್ರ ಸಹಿತ ಅರ್ಜಿಯನ್ನು ಸಲ್ಲಿಸಿದ್ದರು. ಮಳೆಯ ಕಾರಣ ನೀಡಿ ದಿನ ತಳ್ಳುತ್ತಿದ್ದಾರೆ. ಇಂದು ಖಾಸಗಿ ಶಾಲೆಗಳು ಎಲ್ಲದರಲ್ಲೂ ಪೈಪೋಟಿ ನೀಡುತ್ತಿರುವಾಗ ಸರ್ಕಾರಿ ಕನ್ನಡ ಶಾಲೆಗಳು ಈ ಹಂತ ತಲಪುತ್ತಿರುವದು ವಿಪರ್ಯಾಸ. ಮುಖ್ಯ ರಸ್ತೆಗೆ ಹೊಂದಿ ಕೊಂಡಂತಿರುವ ಶಾಲೆ ಈ ರೀತಿಯಲ್ಲಿರುವಾಗ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಸ್ಥಿತಿ ಯಾವ ಹಂತ ತಲಪಿರಬಹುದೆಂದು ಆಲೋಚಿಸಬೇಕಾಗಿದೆ. ವೇದಿಕೆಗಳಲ್ಲಿ ಕನ್ನಡ ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯಗಳ ಪಟ್ಟಿ ಓದುವ ಅಧಿಕಾರಿಗಳು, ಜನಪ್ರತಿನಿಧಿಗಳು ಅವ್ಯವಸ್ಥೆಯ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂಬದು ಸ್ಥಳೀಯರ ಪ್ರಶ್ನೆಯಾಗಿದೆ.