ಶ್ರೀಮಂಗಲ, ಜು. 24: ಮಳೆಯಲ್ಲಿ ನೆನೆದು, ಕೆಸರಿನಲ್ಲಿ ಮಿಂದೆದ್ದು ನೂರಾರೂ ವಿದ್ಯಾರ್ಥಿಗಳು, ಸಾರ್ವಜನಿಕರು ಕೆಸರು ಗದ್ದೆಯ ಕ್ರೀಡಾಕೂಟದ ಸವಿಯನ್ನು ಸವಿದರು. ಬಿಡದೆ ಸುರಿಯುತ್ತಿರುವ ಮಳೆಯ ನಡುವೆಯೇ ತಣಿಯದ ಉತ್ಸಾಹದಿಂದ ಭಾಗವಹಿಸಿ ಸ್ಪರ್ಧೆಯಲ್ಲಿ ಗಮನ ಸೆಳೆದರು. ಪೈಪೋಟಿ ಸಂದರ್ಭ ಕೆಸರು ಗದ್ದೆಯಲ್ಲಿಯೇ ಬಿದ್ದು, ಎದ್ದು ತಮ್ಮ ಕ್ರೀಡಾ ಸ್ಪೂರ್ತಿಯನ್ನು ಮೆರೆದರು. ಶ್ರೀಮಂಗಲ ಸನಿಹದ ಕಾಕೂರು-ಕುಮಟೂರು ಗ್ರಾಮದಲ್ಲಿ ನಡೆದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಕಂಡು ಬಂದ ದೃಶ್ಯವಿದು.ಉದ್ಘಾಟನಾ ಕಾರ್ಯಕ್ರಮ : ಗ್ರಾಮೀಣ ಭಾಗದ ಸಾಂಪ್ರದಾಯಿಕ ಕ್ರೀಡಾಕೂಟಗಳು, ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿರುವ ಕಾಲದಲ್ಲಿ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಸಾಂಪ್ರದಾಯಿಕವಾಗಿ ನಡೆಯುವ ಕೆಸರು ಗದ್ದೆ ಕ್ರೀಡಾಕೂಟ ಸಹಕಾರಿಯಾಗಿದ್ದು, ಮಳೆಗಾಲದಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಬೇರೆ

(ಮೊದಲ ಪುಟದಿಂದ) ಯಾವದೇ ಕ್ರೀಡಾ ಕೂಟ ಆಯೋಜಿಸಲು ಸಾಧ್ಯವಿಲ್ಲದಿರುವಾಗ ನಮ್ಮ ಹಿರಿಯರ ದೂರದೃಷ್ಠಿಯಿಂದ ಕೆಸರು ಗದ್ದೆ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದರು ಎಂದು ತಾ.ಪಂ ಸದಸ್ಯ ಪೊಯಿಲೇಂಗಡ ಪಲ್ವೀನ್ ಪೂಣಚ್ಚ ಅಭಿಪ್ರಾಯ ಪಟ್ಟರು.

ಶ್ರೀಮಂಗಲ ಸಮೀಪ ಕುಮಟೂರು-ಕಾಕೂರು ಗ್ರಾಮದ ಕೋಟ್ರಂಗಡ ಸುಬ್ರಮಣಿ ಮತ್ತು ಮನು ಸೋಮಯ್ಯ ಅವರ ಗದ್ದೆಯಲ್ಲಿ ಕುಮಟೂರು ಗ್ರಾಮದ ಕೊಡವ ರಿಕ್ರೀಯೇಷನ್ ಕ್ಲಬ್ (ರಿ) ನಿಂದ ಆಯೋಜಿಸಿದ್ದ ಕೆಸರು ಗದ್ದೆ ಕ್ರೀಡಾಕೂಟ 2018 ರಲ್ಲಿ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಭತ್ತದ ಕೃಷಿ ನಷ್ಟವೆಂದು ಹಾಗೂ ಇತರ ಸಮಸ್ಯೆಗಳಿಂದ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ಬಹುತೇಕ ಕಡೆ ಭತ್ತದ ಗದ್ದೆಗಳು ಪಾಳು ಬಿಡುತ್ತಿರುವ ನಡುವೆಯೂ ಸಾಂಪ್ರದಾಯಿಕ ಭತ್ತದ ಕೃಷಿಯನ್ನು ಮುಂದುವರೆಸುತ್ತಿರುವ ಕೃಷಿಕರ ಪ್ರಯತ್ನ ಸ್ವಾಗತಾರ್ಹವಾಗಿದೆ. ಭತ್ತದ ಗದ್ದೆಗಳನ್ನು ಉಳಿಸಿಕೊಂಡಾಗ ಮಾತ್ರ ಕೆಸರು ಗದ್ದೆ ಕ್ರೀಡಾಕೂಟಕ್ಕೆ ಅರ್ಥವಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶ್ರೀಮಂಗಲ ಗ್ರಾ.ಪಂ ಅಧ್ಯಕ್ಷೆ ಚೋಕಿರ ಕಲ್ಪನಾ ತಿಮ್ಮಯ್ಯ ಅವರು ಗ್ರಾಮೀಣ ಭಾಗದಲ್ಲಿ ಕೆಸರು ಗದ್ದೆ ಕ್ರೀಡಾಕೂಟವನ್ನು ಆಯೋಜಿಸುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಪೈಪೋಟಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದಂತಾಗುತ್ತದೆ. ಅಲ್ಲದೆ, ಗ್ರಾಮೀಣ ಕ್ರೀಡಾಕೂಟದತ್ತ ಯುವ ಜನರಿಗೆ ಪರಿಚಯಿಸಲು ಇದೊಂದು ಉತ್ತಮ ವೇದಿಕೆ ಎಂದು ಹೇಳಿದರು.

ವೇದಿಕೆಯಲ್ಲಿ ಶ್ರೀಮಂಗಲ ಗ್ರಾ.ಪಂ ಉಪಾಧ್ಯಕ್ಷ ಕಳ್ಳಂಗಡ ರಜಿತ್ ಪೂವಣ್ಣ, ಜೆಸಿ ಅಧ್ಯಕ್ಷರಾದ ಕೋಟ್ರಂಗಡ ಸುಬ್ರಮಣಿ, ಕೊಡವ ರಿಕ್ರೀಯೇಷನ್ ಕ್ಲಬ್‍ನ ಅಧ್ಯಕ್ಷ ಕೊಟ್ರಂಗಡ ಅರುಣ್, ಕಾರ್ಯದರ್ಶಿ ತೀತಿರ ಸೂರಜ್, ಶ್ರೀಮಂಗಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕೆ.ಎಂ. ಸಂದೀಪ್ ಹಾಗೂ ಪ್ರಮುಖರು ಭಾಗವಹಿಸಿದ್ದರು.

ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಬಾಲಕಿಯರು, ಬಾಲಕರು, ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಪುರುಷರು ವಾಲಿಬಾಲ್, ಹಗ್ಗಜಗ್ಗಾಟ, ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಳೆಯ ನಡುವೆ ಕೆಸರಿನಲ್ಲಿ ಉತ್ಸಾಹದಲ್ಲಿ ಮಿಂದೆದ್ದರು.

ಕ್ರೀಡಾಕೂಟವು ಸಂಜೆಯವರೆಗೆ ಮುಂದುವರೆದಿದ್ದು, ವಿವಿಧ ಭಾಗಗಳಿಂದ ಬಹಳಷ್ಟು ವಿದ್ಯಾರ್ಥಿಗಳು, ಸಾರ್ವಜನಿಕರು ಸ್ಪರ್ಧೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.